Advertisement

ಸಾಕ್ಷಿ ಇಲ್ಲದಿದ್ದರೆ 2 ನಿಮಿಷದಲ್ಲೇ ಪ್ರಕರಣ ಮುಕ್ತಾಯ- ED, CBI ಗೆ ಸುಪ್ರೀಂ ತಪರಾಕಿ

09:29 PM Oct 05, 2023 | Team Udayavani |

ನವದೆಹಲಿ: “ದೆಹಲಿ ಅಬಕಾರಿ ನೀತಿಯಲ್ಲಿ ಬಂಧಿತರಾಗಿರುವ ಆಪ್‌ನ ಹಿರಿಯ ನಾಯಕ ಮನೀಶ್‌ ಸಿಸೋಡಿಯಾ ವಿರುದ್ಧ ಪ್ರಬಲ ಸಾಕ್ಷ್ಯಗಳು ಇವೆ ಎಂದು ವಾದಿಸುತ್ತೀರಿ. ಅದನ್ನು ಸರಿಯಾಗಿ ಮಂಡಿಸದೇ ಇದ್ದರೆ 2 ನಿಮಿಷದಲ್ಲಿ ಪ್ರಕರಣ ಬಿದ್ದೇ ಹೋಗಬಹುದು.’

Advertisement

– ಹೀಗೆಂದು ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐಗಳನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ನ್ಯಾ.ಸಂಜೀವ್‌ ಖನ್ನಾ ಮತ್ತು ನ್ಯಾ.ಎಸ್‌.ವಿ.ಎನ್‌.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣದಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಮನೀಶ್‌ ಸಿಸೋಡಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಆಕ್ಷೇಪ ಮಾಡಲಾಯಿತು.

ಸಿಬಿಐ, ಇ.ಡಿ. ಸರಿಯಾದ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸಿ ನಿಯಮಕ್ಕೆ ಅನುಸಾರವಾಗಿ ಸಾಕ್ಷ್ಯಗಳು ಇವೆ ಎನ್ನುತ್ತೀರಿ. ಆದರೆ ಅದನ್ನು ಸರಿಯಾಗಿ ಜೋಡಿಸಿ, ಮಂಡಿಸಿಲ್ಲ. ಹೀಗಾದರೆ ಎರಡನೇ ನಿಮಿಷಗಳಲ್ಲಿ ಪ್ರಕರಣ ಬಿದ್ದು ಹೋಗಲಿದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು. ಸಿಸೋಡಿಯಾ ಪರ ವಾದಿಸಿದ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅವರು ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಸಿಲುಕಿಸಲು ಇ.ಡಿ.ಮುಂದಾಗಿದೆ ಎಂದು ಆರೋಪಿಸಿದರು. ಇಷ್ಟೆಲ್ಲ ಬಿರುಸಿನ ವಾದ-ವಿವಾದ ನಡೆದರೂ ದೆಹಲಿಯ ಮಾಜಿ ಡಿಸಿಎಂಗೆ ಜಾಮೀನು ನೀಡಲು ನ್ಯಾಯಪೀಠ ಒಪ್ಪಲಿಲ್ಲ.

ಸಾಕ್ಷ್ಯವೆಲ್ಲಿದೆ?
ಎರಡು ತನಿಖಾ ಸಂಸ್ಥೆಗಳು ಆರೋಪಿಸುವಂತೆ ಅಬಕಾರಿ ಉದ್ಯಮಿ ವಿಜಯ ನಾಯರ್‌ ಜತೆಗೆ ಸಂಭಾಷಣೆ ನಡೆಸಿದ್ದಾರೆ ಎಂಬ ವಾದಕ್ಕೆ ಯಾವ ಅಂಶಗಳನ್ನೂ ನ್ಯಾಯಪೀಠದ ಮುಂದೆ ಒದಗಿಸಲಾಗಿಲ್ಲ. ಹೀಗಾಗಿ, ಯಾವ ಆಧಾರದ ಮೇಲೆ ಇ.ಡಿ, ಸಿಬಿಐ ಸಿಸೋಡಿಯಾ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿವೆ ಎಂದು ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು. ತನಿಖಾ ಸಂಸ್ಥೆಗಳು ಆರೋಪಿಸಿದ್ದಂತೆ 100 ಕೋಟಿ ರೂ. ಮೊತ್ತ ಅವರಿಗೆ ಸಂದಾಯವಾಗಲು ಸಾಧ್ಯವೂ ಇಲ್ಲ ಎಂದು ಹೇಳಿತು.

ಆಪ್‌ ಯಾಕಿಲ್ಲ?:
ಅಕ್ರಮ ಹಣಕಾಸು ವರ್ಗಾವಣೆ ಕಾಯ್ದೆಯ ಅಂಶಗಳನ್ನೇ ಪರಿಗಣಿಸುವುದಿದ್ದರೆ, ಅದರ ಅನ್ವಯವೇ ನಿಗದಿತ ರಾಜಕೀಯ ಪಕ್ಷ (ಆಪ್‌) ವಿರುದ್ಧ ತನಿಖೆ ನಡೆಯುತ್ತಿದೆ. ಹಾಗಿದ್ದರೆ, ಅದನ್ನು ಯಾಕೆ ಸೇರ್ಪಡೆ ಮಾಡಿಲ್ಲ. ಈ ಬಗ್ಗೆ ನಿಮ್ಮ ಉತ್ತರ ಏನು, ಅದರ ವಿರುದ್ಧ ಯಾವ ಆರೋಪಗಳೂ ಇಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.
ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ ಇ.ಡಿ. ಪರ ವಕೀಲರು ಸಿಗ್ನಲ್‌ ಆ್ಯಪ್‌ ಮೂಲಕ ಸಿಸೋಡಿಯಾ ನಾಯರ್‌ ಜತೆಗೆ ಸಂಭಾಷಣೆ ನಡೆಸಿದ್ದಾರೆ ಎಂದು ವಾದಿಸಿತು.

Advertisement

5 ದಿನ ಇ.ಡಿ.ವಶಕ್ಕೆ:
ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ ಸಿಂಗ್‌ ಅವರನ್ನು 5 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್‌ ಶುಕ್ರವಾರ ಆದೇಶ ನೀಡಿದೆ. ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು “ಇದು ಮೋದಿಜಿಯವರ ಅನ್ಯಾಯ. ಅವರು ಚುನಾವಣೆಯಲ್ಲಿ ಸೋಲು ಅನುಭವಿಸಲಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸುಳ್ಳು. ಇದರ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ಹೇಳಿದ್ದಾರೆ.

ಶೀಘ್ರವೇ ಕೇಜ್ರಿವಾಲ್‌ ಬಂಧನ:
ಅಬಕಾರಿ ಅಕ್ರಮದಲ್ಲಿ ಶೀಘ್ರದಲ್ಲಿಯೇ ಸಿಎಂ ಅರವಿಂದ ಕೇಜ್ರಿವಾಲ್‌ ಬಂಧನವಾದರೂ ಅಚ್ಚರಿ ಇಲ್ಲ ಎಂದು ದೆಹಲಿ ಬಿಜೆಪಿ ನಾಯಕ ಪರ್ವೇಶ್‌ ಸಾಹಿಬ್‌ ಸಿಂಗ್‌ ಹೇಳಿದ್ದಾರೆ. ಅಕ್ರಮ ವಿರುದ್ಧ ಬಿಜೆಪಿ ನಾಯಕರು ಶುಕ್ರವಾರ ಕೇಜ್ರಿವಾಲ್‌ ನಿವಾಸದೆದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next