Advertisement

ಕಠಿಣ ಪರಿಶ್ರಮವಿದ್ದರೆ ಯಶಸ್ಸು ನಿಮ್ಮದು

12:56 PM Mar 08, 2017 | |

ಮೈಸೂರು: ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ, ಪ್ರಸಿದ್ಧಿಗಳಿಸಲು ಬದ್ಧತೆ ಇರಬೇಕು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕ ವಿದ್ವಾನ್‌ ಡಾ. ಎಲ್‌. ಸುಬ್ರಮಣಿಯಂ ಕಿವಿಮಾತು ಹೇಳಿದರು. ನಗರದ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ  ವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

Advertisement

ಭಾರತೀಯ ಸಂಗೀತ ಕ್ಷೇತ್ರಕ್ಕೆ ಕರ್ನಾಟಕ  ಬಹುದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಸಂಗೀತ ಮಾತ್ರವಲ್ಲದೆ ಹಿಂದೂಸ್ಥಾನಿ ಸಂಗೀತಕ್ಕೂ ಪ್ರಾಮುಖ್ಯತೆ ನೀಡಿ ಉನ್ನತ ಸ್ಥರಕ್ಕೆ ಕೊಂಡೊಯ್ಯಲಾಗಿದೆ. ದಕ್ಷಿಣ ಭಾರತದಲ್ಲಿ ಸವಾಯಿ ಗಂಧರ್ವ, ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ, ಬಾಲ ಮುರಳಿ ಕೃಷ್ಣ, ಪುಟ್ಟರಾಜ ಗವಾಯಿ ಮುಂತಾದ ದಿಗ್ಗಜರು ಸಂಗೀತದ ಘನತೆಯನ್ನು ಹೆಚ್ಚಿಸಿ, ತಾವೂ ಬೆಳೆದುದಲ್ಲದೆ, ಇತರರಿಗೂ ಪೋ›ತ್ಸಾಹ ನೀಡಿ ಬೆಳೆಸಿದ್ದಾರೆ ಎಂದರು.

ಡಾ. ಗಂಗೂಬಾಯಿ ಹಾನಗಲ್‌ ಅಂತಹವರು ಸಂಗೀತವನ್ನು ಅತ್ಯಂತ ಉನ್ನತ ಸ್ಥಾನಕ್ಕೆ ಕೊಂಡೊಯ್ದರು. ಸಂಗೀತ ಕ್ಷೇತ್ರದಲ್ಲಿನ ಅವರ ಕೊಡುಗೆ ಚಿರಸ್ಥಾಯಿಯಾಗಿರಲಿದೆ. ಗಂಗೂಬಾಯಿ ಅವರು ದೊಡ್ಡ ವಿಶ್ವವಿದ್ಯಾಲಯದಂತೆಯೇ ಕೆಲಸ ಮಾಡಿ ಅನೇಕ ದೊಡ್ಡ ದೊಡ್ಡ ಸಂಗೀತಗಾರರನ್ನು ಬೆಳೆಸಿದ್ದಾರೆ ಎಂದು ಹೇಳಿದರು.

ಸಂಗೀತ ಕ್ಷೇತ್ರದ ಈ ದಿಗ್ಗಜರಂತೆಯೇ  ಸಾಧನೆಯ ಮೂಲಕ ನಿಮ್ಮದೇ ಆದ ಮಾರ್ಗವನ್ನು ಸೃಷ್ಟಿಸಬೇಕು. ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿದ್ದರೆ, ಆ ಸಂದರ್ಭದಲ್ಲಿ ಇನ್ನೊಂದು ಕ್ಷೇತ್ರದತ್ತ ತೆರೆದುಕೊಳ್ಳದೆ ಏಕತಾನತೆ, ಶ್ರದ್ಧೆ, ಪರಿಶ್ರಮದಿಂದ ಅಭ್ಯಾಸದಲ್ಲಿ ತೊಡಗಿಸಿ ಕೊಂಡಾಗ ಯಶಸ್ಸು ನಿಮ್ಮದಾಗಲಿದೆ. ಸಂಗೀತವನ್ನು ಹವ್ಯಾಸವಾಗಿ ತೆಗೆದುಕೊಂಡರೆ ಸಾಧಿಸಲಾಗದು, ಬದ್ಧತೆ ತೋರಿದರೆ ಸಂಗೀತ ಕ್ಷೇತ್ರದಲ್ಲಿ ದಂತಕತೆ ಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದವಿ ಪಡೆದ ಬಳಿಕ ನಿಜವಾದ ವೃತ್ತಿ ಜೀವನ ಆರಂಭವಾಗುತ್ತದೆ. ವಿಶ್ವಕ್ಕೆ ಸಂಗೀತವನ್ನು ಪರಿಚಯಿ ಸುವ ಜತೆಗೆ ಹೊರ ಜಗತ್ತಿನಲ್ಲಿ ನಡೆಯುವ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ದಿಢೀರ್‌ ಜನಪ್ರಿಯತೆಗಾಗಿ ವೆಬ್‌ಸೈಟ್‌ಗಳಲ್ಲಿನ ಗಂಗೂಬಾಯಿ ಹಾನಗಲ್‌ ಮೊದಲಾದವರ ಬಯೋಗ್ರಫಿ ಕತ್ತರಿಸಿ ತಮ್ಮ ಬಯೋಗ್ರಫಿಗೆ ಜೋಡಿಸಿಕೊಳ್ಳದೆ  ಅವರಂತೆಯೇ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕಿದೆ ಎಂದರು.

Advertisement

ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲ ವಜುಭಾಯ್‌ ವಾಲಾ, ವಿವಿ ಕುಲಸಚಿವ ಪೊ›. ನಿರಂಜನ ವಾನಳ್ಳಿ ಉಪಸ್ಥಿತರಿದ್ದರು. ವಿವಿ ಕುಲಪತಿ ಡಾ. ಸರ್ವಮಂಗಳಾ ಶಂಕರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿ ಪ್ರದಾನ: 47 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 12 ವಿದ್ಯಾರ್ಥಿಗಳಿಂದ 18 ಚಿನ್ನದ ಪದಕ ವಿತರಿಸಲಾಯಿತು.

ಗೇಯ ಸಂಗೀತ ನಿಕಾಯದಲ್ಲಿ ಅಕ್ಷತಾ ಗಜಾನನ ಹೆಗ್ಡೆ 2 ಚಿನ್ನದ ಪದಕ, ಸಂಧ್ಯಾ ಭಟ್‌ 3 ಚಿನ್ನದ ಪದಕ, ಕಿರಣ್ಮಯಿ ಜಿ.ವಿಠಲ್‌ 1 ಚಿನ್ನದ ಪದಕ, ಹರಿಲಕ್ಷ್ಮೀ 2 ಚಿನ್ನದ ಪದಕ ಹಾಗೂ 1 ನಗದು ಬಹುಮಾನ, ಪಿ.ಸುರಭಿ 1 ಚಿನ್ನದ ಪದಕ ಹಾಗೂ 1 ನಗದು ಬಹುಮಾನ, ಎಚ್‌.ಟಿ.ಹರೀಶ 1 ಚಿನ್ನದ ಪದಕ, ಎಸ್‌.ಉಷಾ 2 ಚಿನ್ನದ ಪದಕ, ಕೆ.ಆಶಾಪಾರ್ವತಿ ಭಟ್‌ 2 ಚಿನ್ನದ ಪದಕ, ಶ್ರೀರಂಗ ಎನ್‌.ಕಟ್ಟಿ 1 ನಗದು ಬಹುಮಾನ ಪಡೆದುಕೊಂಡರು.

ವಾದ್ಯ ಸಂಗೀತ ನಿಕಾಯದಲ್ಲಿ ಬಿ. ಅನಂತರಾಮ್‌ 1 ಚಿನ್ನದ ಪದಕ ಪಡೆದುಕೊಂಡಿದ್ದು, ನೃತ್ಯ ನಿಕಾಯದಲ್ಲಿ ಅಪೂರ್ವ ಸಮೀರ್‌ ರಾವ್‌, ನಾಗರೇಖಾ ಜಿ.ರಾವ್‌, ಬಿ. ಅಮೃತಾ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next