Advertisement

ಕಷ್ಟಗಳಿದ್ದರೂ ಸಾಧನೆಗೆ ಅಡ್ಡಿಯಿಲ್ಲ!

11:10 AM May 28, 2018 | Team Udayavani |

ಮಂಗಳೂರು : ಬಾಡಿಗೆ ಮನೆಯಲ್ಲಿ ವಾಸ. ಬಡತನದ ಬದುಕು. ತಾಯಿಯ ದುಡಿಮೆಯಲ್ಲಿ ಮನೆ ಖರ್ಚು ಸಾಗಬೇಕು. ಆದರೆ ಶ್ರಾವ್ಯಾಳ ಸಾಧನೆಗೆ ಇದ್ಯಾವುದೂ ಅಡ್ಡಿಯಾಗಲಿಲ್ಲ. ಎಸೆಸೆಲ್ಸಿಯಲ್ಲಿ 598 ಅಂಕ ಪಡೆದು ಸಾಧನೆ ಮಾಡಿದ್ದಾಳೆ ಈಕೆ.

Advertisement

ಕಿನ್ನಿಕಂಬಳ ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯಾ, ವಾಮಂಜೂರು ಪರಾರಿಯಲ್ಲಿ ತಾಯಿ ರಶ್ಮಿ (ಲೋಕೇಶ್ವರಿ) ಹಾಗೂ ತಂಗಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇವರು ಮೂಲತಃ ಸುಳ್ಯ ಎಲಿಮಲೆಯವರು, ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ. ತಾಯಿ ರಶ್ಮಿ (ದೂರವಾಣಿ 9964062682) ಗಂಜಿಮಠದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಖರ್ಚಿಗೆಂದು ಟೈಲರಿಂಗ್‌ ಕೂಡ ಮಾಡುತ್ತಾರೆ. ಇಬ್ಬರು ಮಕ್ಕಳ ಓದು ಸಹಿತ ಎಲ್ಲ ಖರ್ಚು ಅವರ ದುಡಿಮೆಯಲ್ಲೇ ಸಾಗಬೇಕು. ಬಡತನವು ಮಕ್ಕಳ ಓದಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ. ಈಗ ಶ್ರಾವ್ಯಾ ಶಾಲೆಗೆ ಪ್ರಥಮ ಸ್ಥಾನಿ.

ಐಎಎಸ್‌ ಕನಸು
ಮಗಳನ್ನು ಐಎಎಸ್‌ ಅಧಿಕಾರಿಯನ್ನಾಗಿ ಮಾಡಬೇಕೆಂಬುದು ಅಮ್ಮನ ಕನಸು. ಅದಕ್ಕಾಗಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಿರುವ ಶ್ರಾವ್ಯಾ ಈಗ ಬಲ್ಮಠ ಸರ್ವಜ್ಞ ಅಕಾಡೆಮಿಯಲ್ಲಿ ಐಎಎಸ್‌ ತರಬೇತಿ ಪಡೆಯುತ್ತಿದ್ದಾರೆ. ಆಕೆಯ ಬುದ್ಧಿಮತ್ತೆಯನ್ನು ನೋಡಿ ಅಕಾಡೆಮಿಯವರೂ ಸಂಪೂರ್ಣ ಉಚಿತ ತರಬೇತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಎಲಕ್ಕೂ ಸೈ
ಪಠ್ಯೇತರ ಚಟುವಟಿಕೆಗಳಲ್ಲಿಯೂ ಶ್ರಾವ್ಯಾ ಎತ್ತಿದ ಕೈ. ಪ್ರಬಂಧ, ಭಾಷಣ, ಡ್ಯಾನ್ಸ್‌, ಹಾಡುಗಾರಿಕೆಯಲ್ಲಿ ಓದಿನಷ್ಟೇ ಆಸಕ್ತಿ. ಕಾರ್ಯಕ್ರಮ ನಿರೂಪಣೆಯಲ್ಲಿಯೂ ತೊಡಗಿಸಿಕೊಂಡಿದ್ದಾಳೆ. 

ಅಮ್ಮನ ಆಸೆ
600ಕ್ಕೂ ಹೆಚ್ಚು ಅಂಕ ಬರುವ ಬಗ್ಗೆ ನಿರೀಕ್ಷೆ ಇತ್ತು. ಎರಡು ಅಂಕ ಕಡಿಮೆಯಾಯಿತು. ಪರವಾಗಿಲ್ಲ, ಮುಂದೆ ಅವಕಾಶವಿದೆ. ಅಮ್ಮನ ಕನಸಿನಂತೆ ಐಎಎಸ್‌ ಅಧಿಕಾರಿಯಾಗಬೇಕೆಂಬ ಆಸೆಯಿದೆ. ಅದಕ್ಕಾಗಿ ಈಗಿಂದಲೇ ತರಬೇತಿ ಪಡೆಯುತ್ತಿದ್ದೇನೆ. ನನ್ನ ಆಸಕ್ತಿಗೆ ಪೂರಕವಾಗಿ ಅಕಾಡೆಮಿಯವರು ತುಂಬಾ ಸಹಾಯ ಮಾಡುತ್ತಿದ್ದಾರೆ. 
-ಶ್ರಾವ್ಯಾ, ವಿದ್ಯಾರ್ಥಿನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next