ರಾಯಚೂರು: ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ ಮನೋಭಾವದಿಂದ ಬಾಳಿದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಣ್ಣಪುಟ್ಟ ವಿಷಯಗಳಿಗೂ ಇಂದು ಜನ ಅತಿರೇಕದ ವರ್ತನೆ ತೋರುತ್ತಿದ್ದಾರೆ. ಸಹನೆ ಕ್ಷೀಣಿಸುತ್ತಿದ್ದು, ಪರಸ್ಪರ ದ್ವೇಷ, ಅಸೂಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಗುಣಗಳಿಂದಲೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲರೂ ಸಹಿಷ್ಣು ಮನೋಭಾವ ಹೊಂದಬೇಕು. ಅಂದಾಗ ಮಾತ್ರ ಸಣ್ಣಪುಟ್ಟ ವಿಚಾರಗಳಿಗೆ ಠಾಣೆಗೆ ಬರುವ ಸನ್ನಿವೇಶ ತಪ್ಪಲಿದೆ ಎಂದು ತಿಳಿಸಿದರು.
ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಸಾಮಾಜಿಕ ವ್ಯವಸ್ಥೆಯೂ ಕಾರಣವಾಗುತ್ತಿದೆ. ವಿಭಕ್ತ ಕುಟುಂಬಗಳ ಸಂಖ್ಯೆ ದಿನೇದಿನೆ
ಹೆಚ್ಚುತ್ತಿದ್ದು, ಆಪ್ತ ವಲಯವೇ ಇಲ್ಲದಂಥ ಸನ್ನಿವೇಶ ಇದೆ. ಇದರಿಂದ ಅಭದ್ರತೆ ಕಾಡುತ್ತಿದೆ. ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿರುವ ಕಾರಣ ಭದ್ರತೆ ಇರುತ್ತಿತ್ತು. ಆದರೆ, ಈಗ ನಗರ ಪ್ರದೇಶಗಳಲ್ಲಿ ನಮ್ಮ ನೆರೆಹೊರೆಯವರೇ ನಮಗೆ ಪರಿಚಯ ಇಲ್ಲದಂಥ ಸನ್ನಿವೇಶ ಇದೆ ಎಂದರು.
ಇಂದು ಸಾಕಷ್ಟು ಅಪರಾಧ ಪ್ರಕರಣಗಳು ಮಾಧ್ಯಮಗಳ ಮೂಲಕ ಬಯಲಾಗುತ್ತಿವೆ. ಪೊಲೀಸ್ ಇಲಾಖೆ ಗಮನಕ್ಕೂ ಬಾರದಂತೆ ಸಾಕಷ್ಟು ಅಕ್ರಮ ನಡೆಯುತ್ತಿದ್ದು, ಅವುಗಳನ್ನು ಸಮಾಜಕ್ಕೆ ತೋರಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತಿವೆ. ಯಾವ ವ್ಯಕ್ತಿ ಕಾನೂನು ಪಾಲಿಸುವುದಿಲ್ಲವೋ ಅವರಿಗೆ ವ್ಯವಸ್ಥೆ ಬಗ್ಗೆ ಪ್ರಶ್ನಿಸುವ, ಟೀಕಿಸುವ ಹಕ್ಕು ಇರುವುದಿಲ್ಲ. ನಾವು ಮೊದಲು ಕಾನೂನು ಪಾಲಿಸಬೇಕು. ಆಮೇಲೆ ಇತರರ ಬಗ್ಗೆ ಮಾತನಾಡಬೇಕು ಎಂದರು.
ಜಿಪಂ ಸಿಇಒ ನಲಿನ್ ಅತುಲ್ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಮುಖ್ಯ. ಕೆಲವೊಂದು ಪ್ರಾಥಮಿಕ ಮಾಹಿತಿ ತಿಳಿಯುವುದು ಎಲ್ಲರ ಕರ್ತವ್ಯ. ಕಾನೂನಿನ ಅರಿವು ಮೂಡಿದಾಗಲೇ ಅಪರಾಧಗಳನ್ನು ಮಾಡಬಾರದು ಎಂಬ ಮನೋಭಾವ
ಮೂಡಲಿದೆ. ಕಾನೂನು ಯಾಕೆ ಬೇಕು? ಅದರಿಂದ ಏನು ಪ್ರಯೋಜನ ಎನ್ನುವ ಮಾಹಿತಿ ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಮಾತನಾಡಿ, ಈ ಮಾಸಾಚರಣೆ ಮಾಡುವ ಉದ್ದೇಶವೇ ಅಪರಾಧ ತಡೆಯುವುದಾಗಿದೆ. ಘಟನೆ ನಡೆದ ಮೇಲೆ ಕ್ರಮಕ್ಕೆ ಮುಂದಾಗುವುದಕ್ಕಿಂತ ಘಟನೆ ನಡೆಯದಂತೆ ನೋಡಿಕೊಳ್ಳುವುದು ಮುಖ್ಯ. ಒಂದು ಅಪರಾಧ ಪ್ರಕರಣ ಇಡೀ ವ್ಯವಸ್ಥೆ ಮೇಲೆಯೇ ದುಷ್ಪರಿಣಾಮ ಬೀರಬಲ್ಲದು. ಈ ನಿಟ್ಟಿನಲ್ಲಿ ಇಲಾಖೆ ಜತೆ ಸಾರ್ವಜನಿಕರು ಸಹಕಾರ ನೀಡುವುದು ಅನಿವಾರ್ಯ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ ಇತರರು ಉಪಸ್ಥಿತರಿದ್ದರು.