Advertisement

ಕನ್ನಡ ಉಳಿದರೆ ಸಂಸ್ಕೃತಿ ಉಳಿವು: ಚೌಧರಿ

03:20 PM Dec 02, 2018 | |

ಶಹಾಪುರ: ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ಶಿಕ್ಷಕ, ಸಾಹಿತಿ ಅಶೋಕ ಚೌಧರಿ ಹೇಳಿದರು. ತಾಲೂಕಿನ ಗೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗೋಗಿ ವಲಯ ಕಸಾಪ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೂರು ನಾಲ್ಕನೇ ಶತಮಾನದಿಂದಲೇ ಕನ್ನಡ ಭಾಷೆ ಬಳಕೆಯಲ್ಲಿತ್ತು ಎಂಬುದನ್ನು ಆಗಿನ ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ರಾಜಾಶ್ರಯದಿಂದ ಹಳಗನ್ನಡ ರೂಪ ತಾಳಿ ಛಂದಸ್ಸುಗಳಲ್ಲಿ ಅತ್ಯಮೂಲ್ಯ ಕಾವ್ಯಗಳು ಸೃಷ್ಠಿಯಾದವು. ನಡುಗನ್ನಡ, ಹೊಸಗನ್ನಡ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಉತ್ಕೃಷ್ಟ ಕೃತಿಗಳು ಹೊರಬಂದು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಸಾಹಿತಿಗಳಿಗೆ ಸಲ್ಲುತ್ತದೆ.

ಹೊರ ರಾಜ್ಯದವರ ಆಗಮನ, ಇಂಗ್ಲಿಷ್‌ ವ್ಯಾಮೋಹದಿಂದಾಗಿ ಕನ್ನಡ ಭಾಷೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕನ್ನಡಕ್ಕೆ ಕನ್ನಡದವರಿಂದಲೇ ನಿರ್ಮೋಹ ವ್ಯಕ್ತವಾಗುತ್ತಿದೆ ಎಂದು ವಿಷಾದಿಸಿದರು. ಕನ್ನಡವನ್ನು ಅನ್ನದ ಭಾಷೆಯಾಗಿ ಕಟ್ಟು ನಿಟ್ಟಾಗಿ ಜಾರಿಯಾದರೆ ಕನ್ನಡ ಉಳಿಯಲಿದೆ. ಆ ನಿಟ್ಟಿನಲ್ಲಿ ಕನ್ನಡ ಭಾಷೆ ಬಳಸುವುದು, ಉಳಿಸುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕು. ಕನ್ನಡ ರಾಜ್ಯೋತ್ಸವಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ನಿತ್ಯೋತ್ಸವವಾಗಬೇಕು ಎಂದು ಹೇಳಿದರು.

ಕನ್ನಡದ ಗ್ರಂಥಗಳನ್ನು ಓದುವ, ಉಚಿತವಾಗಿ ಹಂಚುವ ಕಾರ್ಯ ಕನ್ನಡದ ಮನಸ್ಸುಗಳು ಮಾಡಬೇಕು. ಆ ನಿಟ್ಟಿನಲ್ಲಿ ಬಹುಮಾನಗಳನ್ನು ವಿತರಿಸುವಾಗ ಪುಸ್ತಕ ಸಂಸ್ಕೃತಿಗೆ ಚಾಲನೆ ನೀಡಬೇಕಿದೆ. ಕನ್ನಡ ಉಳಿದರೆ, ಕನ್ನಡ ಸಂಸ್ಕೃತಿಯೂ ಉಳಿಯಲಿದೆ ಎಂದು ಹೇಳಿದರು.
 
ಇದೇ ಸಂದರ್ಭದಲ್ಲಿ ನಾಡು ನುಡಿ ಸಂಸ್ಕೃತಿ ವಿಷಯದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಮುಖಂಡ ದೇವಿಂದ್ರಪ್ಪ ಗೋನಾಳ ಕಾರ್ಯಕ್ರಮ ಉದ್ಘಾಟಿಸಿದರು. ಗೋಗಿ ವಲಯ ಕಸಾಪ ಅಧ್ಯಕ್ಷ ಮಲ್ಲಣ್ಣಗೌಡಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 

ಮಲ್ಲಣ್ಣ ಪರಿವಾಣ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಯಿ, ಚಂದ್ರಶೇಖರ ಭಾವಿ, ಭೀಮರಡ್ಡಿ ಮಲ್ಹಾರ, ಮುಖ್ಯಗುರು ಸಂಗಮೇಶ ದೇಸಾಯಿ, ಪ್ರಾಭಾರಿ ಪ್ರಾಚಾರ್ಯ ಮಹಾಂತೇಶ ಕಲಾಲ, ಗೌಡಪ್ಪಗೌಡ ಇದ್ದರು. ಶಿಕ್ಷಕರ ಸುಭಾಸ ಮಿರಗಿ ಪ್ರಾರ್ಥಿಸಿದರು. ಎಚ್‌.ಬಿ. ಪಾಟೀಲ ಸ್ವಾಗತಿಸಿದರು. ಜಾನರಾಜ್‌ ನಿರೂಪಿಸಿದರು. ಅಮರೇಶ ಪೂಜಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next