Advertisement

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

07:38 PM Mar 27, 2024 | Team Udayavani |

ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ ಹಾಗೂ ಖರ್ಗೆ ಅವರಿಗೆ 2 ಸಲ ಸಂಸತ್ತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಿರುವ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಕಳೆದ ಸಲ ಬಿಜೆಪಿ ಗೆಲ್ಲುವುದರ ಮೂಲಕ ಭದ್ರಕೋಟೆ ಛಿದ್ರ ಮಾಡಿದೆ.

Advertisement

ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮೀಣ, ಅಫ‌jಲ್‌ಪುರ, ಜೇವರ್ಗಿ, ಚಿತ್ತಾಪುರ, ಸೇಡಂ ಹಾಗೂ ಗುರುಮಿಠಕಲ್‌ ಸೇರಿ ಒಟ್ಟಾರೆ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲೀಗ ಕಾಂಗ್ರೆಸ್‌ 6 ಹಾಗೂ ಬಿಜೆಪಿ, ಜೆಡಿಎಸ್‌ ತಲಾ 1 ವಿಧಾನಸಭೆ ಸದಸ್ಯರ ಬಲ ಹೊಂದಿದೆ. 2019ರ ಚುನಾವಣೆ ವೇಳೆ ಕಾಂಗ್ರೆಸ್‌ 4, ಬಿಜೆಪಿ 3 ಹಾಗೂ ಜೆಡಿಎಸ್‌ ಓರ್ವ ಸದಸ್ಯರ ಬಲ ಹೊಂದಿತ್ತು.

ಕಲಬುರಗಿ ಕ್ಷೇತ್ರ 1951ರಲ್ಲಿ ರಚನೆಯಾಗಿದ್ದು, ಇಲ್ಲಿವರೆಗೆ 19 ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ 16 ಸಲ ಗೆದ್ದರೆ, ಬಿಜೆಪಿ 2 ಸಲ ಹಾಗೂ 1 ಸಲ ಜೆಡಿಎಸ್‌ ಗೆದ್ದಿದೆ. ಆಶ್ಚರ್ಯ ಏನೆಂದರೆ ಲೋಕಸಭೆ ರಚನೆಯಾದ 1957, 1962 ಮತ್ತು 1967ರಲ್ಲಿ ಮಹಾದೇವಪ್ಪ ಯಶವಂತರಾವ್‌ ರಾಂಪೂರೆ ಮಾತ್ರ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದವರು. ಪ್ರತಿಷ್ಠಿತ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಸ್ಥಾಪಿಸಿದವರೇ ರಾಂಪೂರೆ. ಉಳಿದಂತೆ 6 ಜನ 2 ಸಲ ಗೆಲುವು ಸಾಧಿಸಿದ್ದರಾದರೂ 3ನೇ ಬಾರಿಗೆ ಸಂಸತ್‌ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಪ್ರಸ್ತುತ ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಡಾ| ಮಲ್ಲಿಕಾರ್ಜುನ ಖರ್ಗೆ 2009 ಹಾಗೂ 2014ರಲ್ಲಿ ಸತತವಾಗಿ 2 ಸಲ ಗೆಲುವು ಸಾಧಿಸಿದ್ದರೆ, 2019ರ ಚುನಾವಣೆಯಲ್ಲಿ ಪರಾಭವಗೊಂಡರು.

ಮಾಜಿ ಸಿಎಂ ದಿ| ವೀರೇಂದ್ರ ಪಾಟೀಲ ಅಳಿಯ ಡಾ| ಬಿ.ಜಿ. ಜವಳಿ 2 ಸಲ ಗೆಲುವು ಸಾಧಿಸಿದ್ದರೆ ತದನಂತರ ಸ್ಪರ್ಧೆ ಮಾಡಿದ್ದರೂ 3ನೇ ಬಾರಿಗೆ ಸಂಸತ್‌ ಪ್ರವೇಶಿಸಲಿಲ್ಲ. ಇಕ್ಬಾಲ್‌ ಅಹ್ಮದ್‌ ಸರಡಗಿ, ಸಿದ್ರಾಮರೆಡ್ಡಿ 2 ಸಲ ಗೆದ್ದರಾದರೂ 3ನೇ ಬಾರಿಗೆ ಸಂಸತ್‌ ಪ್ರವೇಶಕ್ಕೆ ಅವಕಾಶವೇ ಸಿಗಲಿಲ್ಲ. ಮಾಜಿ ಸಿಎಂಗಳಾದ ವೀರೇಂದ್ರ ಪಾಟೀಲ ಹಾಗೂ ಧರ್ಮಸಿಂಗ್‌, ಇಂದಿರಾ ಗಾಂಧಿ ಆಪ್ತ ಸಿ.ಎಂ ಸ್ಟೀಫ‌ನ್‌ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ, ದಿ| ಖಮರುಲ್‌ ಇಸ್ಲಾಂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪ್ರಮುಖರಾಗಿದ್ದಾರೆ.

Advertisement

1980ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಧರ್ಮಸಿಂಗ್‌ ಗೆಲುವು ಸಾಧಿಸಿದ್ದರು. ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ರಾಜೀನಾಮೆ ನೀಡಿದರು. ತದನಂತರ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಪ್ತ ಕೇರಳದ ಸಿ.ಎ.ಸ್ಟೀಫ‌ನ್‌ ಅವರಿಗೆ ಕ್ಷೇತ್ರ ಬಿಟ್ಟು ಕೊಡಲಾಯಿತು. ತದನಂತರ 1984ರಲ್ಲಿ ಮಾಜಿ ಸಿಎಂ ವೀರೇಂದ್ರ ಪಾಟೀಲ ಈ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದರು.

ಜಾತಿ ಲೆಕ್ಕಾಚಾರ ಹೇಗಿದೆ?
2009ರ ಮುಂಚೆ ಈ ಕ್ಷೇತ್ರ ಸಾಮಾನ್ಯವಾಗಿತ್ತು. ಅನಂತರ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 5 ಜನ ಎಂಟು ಸಲ ಗೆದ್ದಿದ್ದಾರೆ. ಮುಸ್ಲಿಮರು ಎರಡು ಸಲ, ಎಸ್ಸಿ ಸಮುದಾಯ ಮೂರು ಸಲ, ಇತರರು ಎರಡು ಸಲ ಗೆದ್ದಿದ್ದಾರೆ. ಪ್ರಸ್ತುತ ಒಟ್ಟು 22,68,944 ಮತದಾರರಲ್ಲಿ ಅತಿ ಹೆಚ್ಚು ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ಎಸ್ಸಿ ಹಾಗೂ ಮೂರನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯದವರಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಆರು ಲಕ್ಷ ಲಿಂಗಾಯತರು, 4.50 ಲಕ್ಷ ಎಸ್ಸಿ, 3.90 ಲಕ್ಷ ಮುಸ್ಲಿಂ, 3 ಲಕ್ಷ ಕೋಲಿ ಸಮುದಾಯದವರಿದ್ದಾರೆ.

ಡಾ| ಉಮೇಶ ಜಾಧವ (ಹಾಲಿ ಸಂಸದ)
ಪಕ್ಷ-ಬಿಜೆಪಿ 620192
ಗೆಲುವಿನ ಅಂತರ 95452

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next