Advertisement
ಪ್ಲಾಸ್ಟಿಕ್ ಪರಿಸರಕ್ಕೆ ಸಾಕಷ್ಟು ಮಾರಕವಾಗಿದ್ದು, ಜನರಿಗೆ ಅರಿವಿದ್ದೂ ಕುಡಿಯುವ ನೀರು, ಆಹಾರ ತಯಾರಿ, ವಿತರಣೆ, ಸೇವನೆಯಂತಹ ವಿವಿಧ ಹಂತಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಸಿ ನೀರಿನ ಬಾಟಲಿ ತಯಾರಿಸುತ್ತಾರೆ. ಸಾಗಣೆ, ವಿತರಣೆ ಸಂದರ್ಭದಲ್ಲಿ ಆ ಬಾಟಲಿಗಳಿಗೆ ಶಾಖ ತಗುಲಿದಾಗ ಪ್ಲಾಸ್ಟಿಕ್‌ನಿಂದ ಡಯಾಕ್ಸಿನ್ ಬಿಡುಗಡೆಯಾಗಿ ನೀರಿನೊಂದಿಗೆ ಬೆರೆತು ವಿಷವಾಗುತ್ತದೆ.
Related Articles
Advertisement
ಶೇ.96ರಷ್ಟು ಜನರಿಗೆ ಪರಿಸರ ಜ್ಞಾನವಿಲ್ಲ: ಪ್ರತಿಯೊಬ್ಬರಿಗೂ ಪರಿಸರ ಜ್ಞಾನ ಅವಶ್ಯಕ. ಇದರಿಂದ ಪರಿಸರ-ಮಾನವ ಸಂಬಂಧ, ಪರಿಸರ ಹಾನಿಯಿಂದ ಮಾನವನಿಗೆಷ್ಟು ಹಾನಿಯಾಗುತ್ತದೆ, ಪ್ಲಾಸ್ಟಿಕ್ ಮುಕ್ತ ಪರಿಸರ ಏಕೆ ಅವಶ್ಯಕ ಎಂದು ತಿಳಿಯುತ್ತದೆ. ಆದರೆ, ಇತ್ತೀಚಿಗೆ ನಾವು ನಡೆಸಿದ ಸಮೀಕ್ಷೆ ಪ್ರಕಾರ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.3.5 ಜನರು ಮಾತ್ರ ಪರಿಸರ ಶಿಕ್ಷಣ ಹೊಂದಿದ್ದಾರೆ. ಉಳಿದ ಶೇ.96.5ರಷ್ಟು ಜನರಿಗೆ ಕಸ ಎಲ್ಲಿ ಹಾಕಬೇಕು, ಅದರ ವಿಂಗಡಣೆ, ವಿಲೇವಾರಿ ಹೇಗೆ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲ ಎಂದು ತಿಳಿದುಬಂದಿದೆ. ಇನ್ನು ಪರಿಸರ ಜ್ಞಾನದ ಕೊರತೆ ವಿದ್ಯಾವಂತರಲ್ಲಿಯೇ ಹೆಚ್ಚಿದ್ದು, ಇದು ಪರಿಸರವನ್ನು ಸಾಕಷ್ಟು ಮಾಲಿನ್ಯಮಾಡುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆಗೆ ಸೋಮಾರಿತನವೇ ಕಾರಣ!: ಇಂದು ಸಮಾಜದಲ್ಲಿ ಪ್ಲಾಸ್ಟಿಕ್ ಅವಲಂಬನೆ ಹೆಚ್ಚಾಗಿರುವುದಕ್ಕೆ ಜನರಲ್ಲಿರುವ ಸೋಮಾರಿತನವೇ ಪ್ರಮುಖ ಕಾರಣ. ಪ್ಲಾಸ್ಟಿಕ್ ಬರುವುದಕ್ಕೂ ಮುಂಚೆ ನಮ್ಮ ಹಿರಿಯರೆಲ್ಲಾ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಇಂದಿನ ಜನರಲ್ಲಿ ಶ್ರಮದ ಸಂಸ್ಕೃತಿ ಮರೆಯಾಗಿದೆ. ಸರಳವಾಗಿ, ಸುಲಭವಾಗಿ ಎಲ್ಲಾ ಕೆಲಸಗಳು ಆಗಬೇಕು. ಹೀಗಾಗಿಯೇ, ಮನೆ ತುಂಬ ಪ್ಲಾಸ್ಟಿಕ್ ಸಾಮಾನುಗಳು ಹೆಚ್ಚಾಗಿವೆ. ಅಂಗಡಿಗೆ ತೆರಳುವಾಗಲೂ ಒಂದು ಬಟ್ಟೆಯ ಕೈಚೀಲ ಹಿಡಿದು ಹೋಗಲು ಹಿಂದೇಟು ಹಾಕುವ ಮನಸ್ಥಿತಿ ಇದ್ದು, ಇದರಿಂದ ಪ್ಲಾಸ್ಟಿಕ್ ಕವರ್ ಬಳಕೆ ಹೆಚ್ಚಾಗುತ್ತಿದೆ. ಆಹಾರ ಪಾರ್ಸಲ್ ಸೇವೆಯಂತೂ ಪ್ಲಾಸ್ಟಿಕ್‌ಮಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ನಿಷೇಧ ನಿಯಮ’ ಒಂದೇ ಪರಿಹಾರವಲ್ಲ: ಪ್ಲಾಸ್ಟಿಕ್ ನಿಷೇಧ ಕುರಿತು ಸರ್ಕಾರ ನಿಯಮ ಮಾಡುವುದರಿಂದಲೋ, ದಂಡ ವಿಧಿಸಿ ಪೊಲೀಸ್ ರಾಜ್ಯ ಮಾಡುವುದರಿಂದಲೋ ಪ್ಲಾಸ್ಟಿಕ್ ಬಳಕೆ ನಿಲ್ಲುವುದಿಲ್ಲ. ಸಮಾಜದ ಎಲ್ಲಾ ವಲಯಗಳಲ್ಲೂ ಪರಿಣಾಮಕಾರಿ ಜಾಗೃತಿ ಅತ್ಯಗತ್ಯವಾಗಿದೆ. ಜನರು ಪ್ರತಿ ಬಾರಿ ಪ್ಲಾಸ್ಟಿಕ್ ಉತ್ಪನ್ನವೊಂದನ್ನು ಕೈಯಲ್ಲಿ ಹಿಡಿದಾಗ ಕ್ಯಾನ್ಸರ್ ಬರುತ್ತಿದೆ ಎಂಬ ಅರಿವು ಮೂಡಬೇಕು ಆಗ ಸೋಮಾರಿತನ ಕಳಚಿ ತಂತಾನೆ ಜಾಗೃತಿ ಮೂಡುತ್ತದೆ. ಇನ್ನು ಕ್ಯಾನ್ಸರ್ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಮಾನವನಲ್ಲಿ ಹೆಚ್ಚಾಗುತ್ತಿರುವ ರೋಗಗಳ ಕುರಿತು ಸೂಕ್ತ ಅಧ್ಯಯನವಾಗಿ ಸೂಕ್ತ ಮಾಹಿತಿ, ಅಂಕಿ ಅಂಶಗಳು ಜನಸಾಮಾನ್ಯರಿಗೆ ಲಭ್ಯವಾಗಬೇಕು ಎಂದು ಟಿ.ವಿ.ರಾಮಚಂದ್ರ ಅವರು ಅಭಿಪ್ರಾಯಪಟ್ಟರು.
ಪ್ಲಾಸ್ಟಿಕ್ ಮರುಬಳಕೆ ಆಲೋಚನೆಯನ್ನೇ ಕೈಬಿಡಿ: ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕುಗ್ಗಿಸುವುದೇ ಉತ್ತಮ ಮಾರ್ಗ. ಮರುಬಳಕೆ ಕುರಿತು ಆಲೋಚನೆಯನ್ನೂ ಮಾಡಬಾರದು. ಮರುಬಳಕೆ ಭವಿಷ್ಯದಲ್ಲಿ ಅಪಾಯಕಾರಿ. ಒಂದು ವೇಳೆ ಪ್ಲಾಸ್ಟಿಕ್ ಮರುಬಳಕೆಗೆ ಮುಂದಾಗಿ ಮರು ಉತ್ಪನ್ನಗಳನ್ನು ಸಿದ್ಧಪಡಿಸಲೆಂದು ಪ್ಲಾಸ್ಟಿಕ್ ಸುಟ್ಟಾಗ ಸಾಕಷ್ಟು ವಾಯುಮಾಲಿನ್ಯ ಉಂಟಾಗುತ್ತದೆ. ಹೀಗಾಗಿ, ಮರುಬಳಕೆ ಆಲೋಚನೆ ಕೈಬಿಡುವುದು ಒಳಿತು ಎಂದು ಅವರು ಅಭಿಪ್ರಾಯಪಟ್ಟರು.
ಆರ್‌ಒ ನೀರಿಗಿಂತ, ಕಾವೇರಿ ನೀರು ಕುದಿಸಿ ಕುಡಿಯುವುದೇ ಉತ್ತಮ: ಶುದ್ಧ ನೀರು ಕುಡಿಯಬೇಕು ಎಂದು ಆರ್‌ಒ ನೀರನ್ನು ಕುಡಿಯುವ ರೂಢಿ ಹೆಚ್ಚಾಗಿದೆ. ಆದರೆ, ನೀರನ್ನು ಆರ್‌ಒ ಪಿಲ್ಟರ್‌ನಲ್ಲಿ ಶುದ್ಧಿಕರಿಸುವುದರಿಂದ ನೀರಿನಲ್ಲಿರುವ ಸಾಕಷ್ಟು ಲವಣಾಂಶಗಳು ಹೊರಟು ಹೋಗುತ್ತವೆ. ಆ ನೀರನ್ನು ಕುಡಿಯುವುದರಿಂದ ಕೀಲು ಮೂಳೆ, ಮಂಡಿಚಿಪ್ಪಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ಕಾವೇರಿ ನೀರನ್ನು ಕುದಿಸಿ ಕುಡಿಯುವುದೇ ಉತ್ತಮ ಎಂದು ವಿಜ್ಞಾನಿ ರಾಮಚಂದ್ರ ತಿಳಿಸಿದರು.
ಪ್ಲಾಸ್ಟಿಕ್ ಎಷ್ಟು ಮಾರಕ ಎಂಬುದನ್ನು ಅರಿತು ಪ್ರತಿ ಹಂತಗಳಲ್ಲೂ ನೀವೇ ಒಂದು ಹೆಜ್ಜೆ ಮುಂದೆ ಹೋಗಿ ಪ್ಲಾಸ್ಟಿಕ್ ನಿರಾಕರಿಸಿ, ಪ್ಲಾಸ್ಟಿಕ್ ಮುಕ್ತ ಜೀವನ ಅನುಸರಿಸಬೇಕು. ಜತೆಗೆ, ಪ್ಲಾಸ್ಟಿಕ್ ಎಷ್ಟು ಮಾರಕ ಎಂಬುದರ ಕುರಿತು ಇನ್ನೊಬ್ಬರಿಗೂ ಅರಿವು ಮೂಡಿಸಬೇಕು.-ಟಿ.ವಿ.ರಾಮಚಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ