ಇಂದು ಜೂನ್ ಐದು ವಿಶ್ವ ಪರಿಸರ. ಸಕಲ ಜೀವ ಜಂತುಗಳಿಗೆ ಆಶ್ರಯವಾಗಿ ಗಾಳಿ, ನೀರು, ಬೆಳಕು, ಅನ್ನ, ಆಹಾರ, ಚೆಲುವು, ಸೊಬಗು, ಸೌಂದರ್ಯ ಕೊಟ್ಟು ನಮ್ಮೆಲ್ಲರನ್ನು ಸಲುವುವ ಪ್ರಕೃತಿ ದೇವರನ್ನು ನೆನೆಯುವ ದಿನ. ಪರಿಸರದ ಒಂದು ಭಾಗವಾಗಿ ಅದನ್ನು ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲಾ ಜೀವರಾಶಿಗಳ ಮೇಲಿದೆ.
ಆದರೆ ಇಂದಿನ ದಿನಗಳಲ್ಲಿ ಮನುಷ್ಯನ ಅಭಿವೃದ್ಧಿ ಪಥದ ಓಟದ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಂತ್ರ ಸಾಧನ ಸಲಕರಣೆಗಳ ಕೈಯಲ್ಲಿಡಿದುಕೊಂಡು ಕಂಪನಿ ಕಾರ್ಖಾನೆಗಳ ಸ್ಥಾಪಿಸಿಕೊಂಡು ಅಟ್ಟಹಾಸದಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಲೇ ಹೋಗುತ್ತಿದ್ದೇನೆ. ಸಂಪದ್ಭರಿತ ಪರಿಸರದ ಒಡಲನ್ನು ಗಣಿಗಾರಿಕೆಗೆ ಬಳಸಿಕೊಂಡು ನಿರ್ದಯೆಯಿಂದ ಬಗೆಯುತ್ತಿದ್ದಾನೆ.
ಕಂಪನಿ ಕಾರ್ಖಾನೆಗಳ ಕರ್ಕಶ ಶಬ್ದ, ವಿಷ ತ್ಯಾಜ್ಯ ವಸ್ತು, ಕಲುಷಿತ ನೀರು, ಹೊರಸೂಸುವ ವಿಷ ಅನಿಲ, ದಟ್ಟ ಹೊಗೆ ಇವುಗಳಿಂದ ಪರಿಸರ ಉತ್ಪಾದಿತ ಪರಿಶುದ್ಧ ಗಾಳಿ, ನೀರು, ಏಕಾಂತವನ್ನೆಲ್ಲಾ ಮಲೀನಗೊಳಿಸುತ್ತಿದ್ದಾನೆ. ಅಷ್ಟೇ ಅಲ್ಲ ಜೈವಿಕ ಇಂಧನ ಬಳಕೆ, ವಾಹನ ಸಂಚಾರ ದಟ್ಟಣೆಯ ಹೊಗೆ, ರಾಸಾಯನಿಕ ಹಾನಿಕಾರಕ ವಸ್ತುಗಳ ಬಳಕೆ, ಪ್ಲಾಸ್ಟಿಕ್ ಬಳಕೆ, ಕರ್ಕಶ ಶಬ್ದ ಸಾಧನೆಗಳಿಂದ, ತಂಬಾಕು ಸೇವನೆ ಮುಂತಾದ ಈ ಎಲ್ಲಾ ಮಾನವನ ಕಿರುಕುಳಕ್ಕೆ ಒಳಗಾಗಿ ಸುತ್ತಲಿನ ಪರಿಸರ ಪತರಗುಟ್ಟುತ್ತಾ ತನ್ನ ಸತ್ವದ ನಾಶದ ಅಂಚಿನಡೆಗೆ ಸಾಗುತ್ತಿದೆ.
“ಕಾಡು ಇದ್ದರೆ ನಾಡಿಗೆ ಮಾನ್ಯ ಕಾಡು ಇಲ್ಲದಿದ್ದರೆ ಎಲ್ಲವೂ ಶೂನ್ಯ’ ಎಂಬ ಆದಿಕವಿ ಪಂಪನ ನುಡಿಯನ್ನು ಮನುಷ್ಯನಿಂದು ಮರೆತಿದ್ದಾನೆ. ಕೃಷಿಗೆ ಬಳಸಲು, ರಸ್ತೆ ನಿರ್ಮಿಸಲು, ಗೃಹ ಬಳಕೆ ವಸ್ತುಗಳ ತಯಾರಿಕೆಗೆ, ಪೀಠೊಪಕರಣಗಳ ಬಳಕೆಗೆ ಇನ್ನೂ ಹಲವಾರು ಬಗೆಯ ಸಾಧನ ಸಲಕರಣೆಗಳ ತಯಾರಿಕೆಗೆ ಆಧುನಿಕ ಯಂತ್ರೋಪಕರಣಗಳ ಬಳಸಿಕೊಂಡು ನೆಲಸಮ ಮಾಡುತ್ತಾ ಕಾಡಿನ ಸಂಪತ್ತಿನ ಮೇಲೆ ಅತ್ಯಾಚಾರ ನಡೆಸುತ್ತಾ ಮುನ್ನೆಡೆದಿದ್ದಾನೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚುತ್ತಲೇ ಸಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ವರ್ಷದ ಕೊನೆಯಲ್ಲಿ ಹಾಹಾಕಾರ ಬರದಿಂದ ತತ್ತರಿಸುತ್ತಿದ್ದಾನೆ. ಕಾಡನ್ನೇ ತಮ್ಮ ವಾಸಸ್ಥಾನ ಮಾಡಿಸಿಕೊಂಡು ಬದುಕುತ್ತಿದ್ದ ಪ್ರಾಣಿ ಪಕ್ಷಿಗಳ ಆಹಾರ ನೀರು ಸಿಗದಂತೆ ಮಾಡುತ್ತಿದ್ದಾನೆ. ಕನಿಷ್ಠ ಬದುಕಲು ಊರತ್ತ ಕೊಳಚೆ ಕಸದ ಕೊಟ್ಟಿಗೆಗಳತ್ತ ಅವುಗಳು ಮುಖಮಾಡುತ್ತಿವೆ.
ಪರಿಸರವನ್ನು ಎಲ್ಲಾ ರೀತಿಯಲ್ಲೂ ಮಲೀನಗೊಳಿಸುತ್ತಾ ಸಾಗಿರುವ ಮನುಷ್ಯ ಸಮೇತ ಎಲ್ಲಾ ಜೀವಿಗಳ ಆಯುಷ್ಯ ಆರೋಗ್ಯ ಹದಗೆಟ್ಟು ಹೋಗಿದೆ. ದೇಹಕ್ಕೆ ಬೇಕಾದ ಉಸಿರು ಗಾಳಿ ನೀರು ಏಕಾಂತ ಎಲ್ಲವೂ ತಾನು ಮಾಡುವ ಕೃತ್ಯಕ್ಕೆ ಮಲೀನಗೊಂಡು ಅವುಗಳನ್ನೇ ಸೇವಿಸಿ ಹಲವಾರು ರೋಗ ರುಜಿನಗಳಿಗೆ ಬಲಿಯಾಗಿ ಮಧ್ಯ ವಯಸ್ಸಿನಲ್ಲಿಯೇ ಕೊನೆಗಾಣುತ್ತಿದ್ದಾನೆ.
ಮನುಷ್ಯ ಎಚ್ಚೆತ್ತುಕೊಂಡು ಕಾರ್ಖಾನೆಗಳ ವಿಷ ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಮಿತವಾಗಿ ನಿರ್ವಹಿಸುತ್ತಾ, ಅದರ ಹೊರ ಸೂಸುವ ಹೊಗೆಯನ್ನು ಜೀವಿಗಳ ಉಸಿರಿನೊಂದಿಗೆ ಬೆರೆಯದಂತೆ ನೋಡಿಕೊಂಡು, ಕಲುಷಿತ ನೀರು ನದಿ ಹಳ್ಳ ಕೆರೆಗಳಿಗೆ ಹರಿಸದೆ ಗುಂಡಿ ತೋಡಿ ಹರಿಸುತ್ತಾ, ಹಸಿರೇ ಉಸಿರೆಂದು ಗಿಡ ಮರಗಳನ್ನು ನೆಟ್ಟು, ನೀರನ್ನು ಮಿತವಾಗಿ ಬಳಸಿಕೊಳ್ಳುತ್ತಾ, ಕರ್ಕಶ ಶಬ್ಧ ಸಾಧನಗಳನ್ನು ಬಳಸದೇ ಎಲ್ಲಾ ಪರಿಸರದ ಸ್ವತ್ಛತೆ ಕಾಪಾಡಿಕೊಂಡು ಹೋಗುತ್ತಾ ಯುವ ಪೀಳಿಗೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರುವುತ್ತಾ ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕಾಸಿಂ ನದಾಫ್ ಭೈರಾಪುರ, ಕೊಪ್ಪಳ