ಬೆಂಗಳೂರು: ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ವ್ಯಾಪಕ ಬೇಡಿಕೆ ಬಂದಿದ್ದು, ತರಬೇತಿ ಹೊಂದಿದ ಶಿಕ್ಷಕರಿದ್ದರೆ ಇನ್ನಷ್ಟು ತರಗತಿ ತೆರೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. 300 ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳನ್ನು ಪ್ರಾರಂಭಿಸುವಂತೆ ಬೇಡಿಕೆ ಬಂದಿದೆ. ನುರಿತ ತರಬೇತಿ ಹೊಂದಿದ ಶಿಕ್ಷಕರು ಈ ಶಾಲೆಗಳಲ್ಲಿ ಲಭ್ಯವಿದ್ದರೆ ಇನ್ನು ಒಂದು ಹೆಚ್ಚುವರಿ ತರಗತಿಯನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರುವ ಮೂಲಕ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆಯ ಗುಣಮಟ್ಟ ಸುಧಾರಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಸಮರ್ಪಕವಾಗಿ ನಡೆಯಬೇಕು. ಕೇಂದ್ರದ ಅನುದಾನಕ್ಕೆ ಕಾಯ್ದೆ, ಎರಡು ಜತೆ ಸಮವಸ್ತ್ರ ವಿತರಿಸುವಂತೆ ನಿರ್ದೇಶಿಸಿದರು.
ಏಕಕಾಲದಲ್ಲಿ 40 ಲಕ್ಷ ಮಕ್ಕಳ ಕಲಿಕೆಯ ಮಟ್ಟ ಮೌಲ್ಯಮಾಪನ ನಡೆಸಿದ ಏಕೈಕ ರಾಜ್ಯ ನಮ್ಮದು. ಈ ಮೌಲ್ಯಮಾಪನದ ಆಧಾರದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿ ಪರಿಹಾರ ಬೋಧನೆಗೆ ಕ್ರಮ ವಹಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇನ್ನಷ್ಟು ಆದ್ಯತೆ ನೀಡಬೇಕು. ಮಕ್ಕಳ ಆಲೋಚನಾ ಮತ್ತು ಅನ್ವಯಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಪರೀಕ್ಷಾ ವಿಧಾನದಲ್ಲಿ ಸೂಕ್ತ ಬದಲಾವಣೆ ತರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ಶಿಕ್ಷಕರು ತಮ್ಮ ಸೇವಾ ವಿಷಯಗಳಿಗೆ ಸರ್ಕಾರಿ ಕಚೇರಿಗಳಿಗೆ ಓಡಾಡುವುದನ್ನು ತಪ್ಪಿಸಲು ಶೀಘ್ರವೇ ಸೇವಾ ಸೌಲಭ್ಯಗಳನ್ನು ಆನ್‌ಲೈನ್‌ನಲ್ಲಿ ನೀಡಲು ತಂತ್ರಾಂಶ ರೂಪಿಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನಡೆಸಿದ ಪೂರ್ವ ಸಿದ್ಧತೆಗಳನ್ನು ಅವರು ಪರಿಶೀಲಿಸಿದರು. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಜಂಟಿ ಸಭೆ ನಡೆಸಲು ಸೂಚಿಸಿದರು. ಅಲ್ಲದೆ, ಗ್ರಂಥಾಲಯ ಇಲಾಖೆಯಡಿಯಲ್ಲಿ ಡಿಜಿಟಲ್ ಲೈಬ್ರರಿಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಹ್ಮಣ್ಯ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಇಲಾಖೆಯ ಆಯುಕ್ತ ಡಾ. ಪಿ.ಸಿ. ಜಾಫರ್, ರಾಜ್ಯ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೆಜು ಮೊದಲಾದ ಅಧಿಕಾರಿಗಳು ಇದ್ದರು.
ಮಂಡಳಿಗಳ ವಿಲೀನಕ್ಕೆ ಪ್ರಸ್ತಾವ: ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸಿ, ಒಂದೇ ಮಂಡಳಿಯ ಮೂಲಕ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚರ್ಚಿಸಿ, ಇದಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಕುರಿತಾಗಿ ಸರ್ಕಾರದ ಅಭಿಪ್ರಾಯ ತಿಳಿಸುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಪೋಷಕರು, ಶಾಲಾಭಿವೃದ್ಧಿ ಸಮಿತಿ ಮೊದಲಾದ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು.
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ