Advertisement

ಮಳೆ ಕಾಲುವೆಗೆ ತ್ಯಾಜ್ಯ ಬಿಟ್ರೆ ಕರೆಂಟ್‌ ಕಟ್‌

12:30 AM Jan 19, 2020 | Lakshmi GovindaRaj |

ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ಮಳೆನೀರು ಕಾಲುವೆಗೆ ಶೌಚಾಲಯ ಸೇರಿ ಮನೆಯ ತ್ಯಾಜ್ಯ ನೀರು ಹರಿಯಬಿಟ್ಟಿದ್ದೀರಾ? ಹಾಗಾದರೆ ನಿಮ್ಮ ಮನೆ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ದಿನ ದೂರವಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (ಎನ್‌ಜಿಟಿ) ಬೆಂಗಳೂರು ಕೆರೆಗಳ ಸಂರಕ್ಷಣೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಇಂಥದೊಂದು ಕಠಿಣ ಕ್ರಮಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ ಹಾಗೂ ಬಿಬಿಎಂಪಿ ಮುಂದಾಗಿವೆ.

Advertisement

ಈಗಾಗಲೇ ಜಲಮಂಡಳಿಯಿಂದ ಒಳಚರಂಡಿ ಸಂಪರ್ಕ ಪಡೆಯದ ಕಟ್ಟಡಗಳ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ವೇಳೆ ಪತ್ತೆಯಾದ ಕಟ್ಟಡಗಳಿಗೆ ಮೊದಲು ನೋಟಿಸ್‌ ನೀಡಿ ಆ ಬಳಿಕವೂ ಮಳೆನೀರು ಕಾಲುವೆಗೆ ತ್ಯಾಜ್ಯನೀರು ಹರಿಸುವುದನ್ನು ಸ್ಥಗಿತಗೊಳಿಸದಿದ್ದರೆ ಆ ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ನಗರದ ವಿವಿಧೆಡೆ ಒಳಚರಂಡಿ ಅಳವಡಿಸಿಕೊಳ್ಳದ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ನೇರವಾಗಿ ಮಳೆ ನೀರು ಕಾಲುವೆಗೆ ಹರಿಬಿಡುತ್ತಿದ್ದು, ಈ ನೀರು ನೇರವಾಗಿ ಕೆರೆ ಸೇರಿ, ಕಲುಷಿತಗೊಳಿಸುತ್ತಿದೆ.

ಪರಿಣಾಮ ಜಲಚರಗಳು ಸಾವಿಗೀಡಾಗುವ ಜತೆಗೆ, ಅಂತರ್ಜಲ ಕೂಡ ಕಲುಷಿತಗೊಳ್ಳುತ್ತಿದೆ. ಮಳೆನೀರು ಕಾಲುವೆಗಳಿಗೆ ತ್ಯಾಜ್ಯ ಹರಿ ಬಿಡುವು ದನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಎಚ್ಚೆತ್ತು ಕೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಪೈಕಿ ವಿದ್ಯುತ್‌ ಸಂಪರ್ಕ ಕಡಿತವೂ ಒಂದಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು.

ತಪ್ಪಿತಸ್ಥರ ಮಾಹಿತಿ ಬೆಸ್ಕಾಂಗೆ: ಕಳೆದ ವರ್ಷವೇ ನಗರದ ಬೆಳ್ಳಂದೂರು ಕೆರೆ ಸುತ್ತಮುತ್ತಲ ಭಾಗದ ಮಳೆನೀರು ಕಾಲುವೆಗಳಿಗೆ ನೇರವಾಗಿ ತ್ಯಾಜ್ಯ ಹರಿಬಿಟ್ಟಿರುವ 250ಕ್ಕೂ ಹೆಚ್ಚು ಕಟ್ಟಡಗಳನ್ನು ಜಲಮಂಡಳಿ ವಿಶೇಷ ತಂಡ ಪತ್ತೆಹೆಚ್ಚಿತ್ತು. ಈ ಕಟ್ಟಡಳಿಗೆ ಅಕ್ಟೋಬರ್‌ನಲ್ಲಿ ನೋಟಿಸ್‌ ನೀಡಿ ತ್ಯಾಜ್ಯನೀರು ಸ್ಥಗಿತಗೊಳಿಸಿ, ಎಸ್‌ಟಿಪಿ ಅಳ ವಡಿಸಿಕೊಳ್ಳಲು ಅಥವಾ ಒಳಚರಂಡಿ ಸಂಪರ್ಕ ಪಡೆಯಲು ಹೇಳಲಾಗಿತ್ತು. ಆ ಪೈಕಿ 80 ಕಟ್ಟಡಗಳು ಒಳಚರಂಡಿ ಸಂಪರ್ಕ ಪಡೆದಿವೆ. ಉಳಿದ ಕಟ್ಟಡಗಳ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಈಗಾಗಲೇ ಬೆಸ್ಕಾಂಗೆ ಮಾಹಿತಿ ನೀಡಲಾಗಿದೆ.

ಎಲ್ಲೆಲ್ಲಿ ಸಮೀಕ್ಷೆ ನಡೆದಿತ್ತು?: ಜಲಮಂಡಳಿಯ ಪೂರ್ವ, ವಾಯವ್ಯ ಹಾಗೂ ಉತ್ತರ ವಿಭಾಗದ ವೈಟ್‌ ಫೀಲ್ಡ್‌, ಅಂಬೇಡ್ಕರ್‌ ನಗರ, ಅಯ್ಯಪ್ಪ ನಗರ, ಪೈ ಲೇಔಟ್‌, ಗರುಡಾಚಾರ್‌ ಪಾಳ್ಯ, ಪಾಪರೆಡ್ಡಿ ಪಾಳ್ಯ, ಜಿಸಿ ಪಾಳ್ಯ, ಐಟಿಪಿಎಲ್‌ ಮುಖ್ಯ ರಸ್ತೆ, ಕುಂದನಹಳ್ಳಿ, ಕಾಡುಗೋಡಿ, ಚಿನ್ನಪ್ಪನ ಹಳ್ಳಿ, ತಿಗಳರಪಾಳ್ಯ, ಅಶ್ವತ್ಥ ನಗರ, ಚೊಕ್ಕಸಂದ್ರ, ಯಲಹಂಕ ಸುತ್ತಮುತ್ತಲ ಪ್ರದೇಶ ಗಳಲ್ಲಿ ಸಮೀಕ್ಷೆ ನಡೆದಿದೆ. ಈ ವೇಳೆ ಮಳೆನೀರು ಕಾಲುವೆಗೆ ತ್ಯಾಜ್ಯ ಹರಿಬಿಡುವ ಅಪಾರ್ಟ್‌  ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗ‌ಳನ್ನು ಗುರುತಿಸಲಾಗಿದೆ.

Advertisement

ಮಾನವೀಯತೆ; ಕೊನೆಯ ಅವಕಾಶ: ಕಳೆದ ವರ್ಷ ನೋಟಿಸ್‌ ಪಡೆದು ಎಚ್ಚೆತ್ತುಕೊಳ್ಳದ ಕಟ್ಟಡಗಳ ಮಾಹಿತಿಯನ್ನು ಬೆಸ್ಕಾಂಗೆ ನೀಡಿದ್ದರೂ ಮಾನವೀಯತೆ ಆಧಾರದ ಮೇಲೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿದೆ ಕೊನೆಯ ಅವಕಾಶ ನೀಡಲಾಗಿದೆ. ನೋಟಿಸ್‌ ಪಡೆದ ಕಟ್ಟಡಗಳಿಗೆ ಜ.22ರಿಂದ ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಈ ವೇಳೆಯೂ ಕಟ್ಟಡ ಮಾಲೀಕರು ಸ್ಪಂದಿಸದಿದ್ದರೆ ವಿದ್ಯುತ್‌ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಸೈಯದ್‌ ಖಾಜಾ ತಿಳಿಸಿದರು.

ನಗರದ ಕೆರೆಗಳ ರಕ್ಷಿಸುವ ಉದ್ದೇಶದಿಂದ, ತ್ಯಾಜ್ಯ ನೀರನ್ನು ಮಳೆನೀರು ಕಾಲುವೆಗೆ ಹರಿಬಿಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಸದ್ಯ ಕಳೆದ ವರ್ಷ ಸಮೀಕ್ಷೆ ನಡೆದ ಬೆಳಂದೂರು ಕೆರೆ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಕ್ರಮ ಕೈಗೊಳಲಾಗುತ್ತಿದೆ.
-ಸೈಯದ್‌ ಖಾಜಾ, ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ

ಕಳೆದ ವರ್ಷ ನೋಟಿಸ್‌ ಪಡೆದ ಕಟ್ಟಡಗಳ ಪೈಕಿ ಕೆಲವರು ಜಲಮಂಡಳಿಯಿಂದ ಒಳಚರಂಡಿ ಸಂಪರ್ಕ ಪಡೆದಿದ್ದಾರೆ. ಉಳಿದ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಲಾಗಿದೆ. ಮುಂದೆ ನಗರಡೆಲ್ಲೆಡೆ ಸಮೀಕ್ಷೆ ನಡೆಸಿ ತ್ಯಾಜ್ಯನೀರು ಕರೆ ಸೇರದಂತೆ ಕ್ರಮ ಕೈಗೊಳ್ಳಲಾಗುವುದು.
-ಕೆಂಪರಾಮಯ್ಯ, ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next