ಸುರತ್ಕಲ್: ಮಳೆಗಾಲದ ಮುನ್ನ ಒಂದೆರಡು ತಿಂಗಳ ಹಿಂದೆ ರಸ್ತೆಯಂಚು, ರಸ್ತೆ ಮಧ್ಯೆ ಪೈಪ್ ಅಳವಡಿಕೆ, ಜಲಸಿರಿ, ಗ್ಯಾಸ್ ಪೈಪ್ ಮುಂತಾದ ಕಾಮಗಾರಿಗೆ ಅಗೆದು ಹಾಕಲಾದ ಪ್ರದೇಶ ಮಳೆಗಾಲದಲ್ಲಿ ಸಮಸ್ಯೆಯ ಅಗರವಾಗಿದೆ.
ಕಾಮಗಾರಿ ಬಳಿಕ ಹಲವೆಡೆ ಗುಂಡಿ ಮುಚ್ಚಿ ಸಮತಟ್ಟು ಮಾಡಲಾಗಿದ್ದರೂ ಮೇಲ್ಮೈ ಮಣ್ಣು ಹಾಕಿದ್ದರಿಂದ ಒಂದೇ ಮಳೆಗೆ ಮಣ್ಣು ಒಳಕ್ಕೆ ಕುಸಿದಿದೆ. ಎಚ್ಚರ ತಪ್ಪಿ ವಾಹನ ಸೈಡ್ ನೀಡಲು ಹೋದರೆ ಮೇಲೆತ್ತಲು ಕ್ರೇನ್ ಬಳಸಬೇಕಾದ ಅನಿವಾರ್ಯ ಎದುರಾಗಬಹುದು.
ಇನ್ನು ಹಲವೆಡೆ ಕಾಮಗಾರಿ ಅಪೂರ್ಣಗೊಂಡಿದೆ. ಸುರತ್ಕಲ್ ಹೆದ್ದಾರಿ 66ರ ಭಾರತ್ ಬ್ಯಾಂಕ್ ಮುಂಭಾಗ ಪಾದಚಾರಿಗಳು ನಡೆದಾಡಲು ಆಗುತ್ತಿಲ್ಲ. ಚರ್ಚ್ ಮುಂಭಾಗ ರಸ್ತೆ ಅಗೆದು ಹಾಕಲಾಗಿದ್ದು ಇನ್ನೂ ಕಾಮಗಾರಿ ಮುಗಿದಿಲ್ಲ. ಹಲವೆಡೆ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಸುತ್ತ ಸುರಕ್ಷೆ ಟೇಪ್ ಕೂಡ ಅಳವಡಿಸಿಲ್ಲ.
ಅಪೂರ್ಣ ಕಾಮಗಾರಿ
ಇದೀಗ ಮಳೆ ಬಂದಾಗ ಚರಂಡಿ, ರಸ್ತೆಯ ಮೇಲೆ ನೀರು ಧಾರಾಕಾರವಾಗಿ ಹರಿ ಯತೊಡಗಿದೆ. ಗುಂಡಿಗಳನ್ನು ತೋಡಿರುವ ಭಾಗದಲ್ಲಿ ನೀರು ತುಂಬುತ್ತಿದ್ದು ಸುತ್ತಲೂ ಮಣ್ಣು ಕುಸಿಯುವ ಸಾಧ್ಯತೆಯಿದೆ. ಕೊಟ್ಟಾರ ಚೌಕಿ ಬಳಿ ರಾಜ ಕಾಲುವೆ ಕಾಮಗಾರಿ ವಿಳಂಬವಾಗಿದ್ದರಿಂದ ಹೆದ್ದಾರಿ ಬದಿವರೆಗೂ ಮಣ್ಣು ಕುಸಿದಿದೆ. ಹೊಸಬೆಟ್ಟು,ಎನ್‌ಐಟಿಕೆ ಮತ್ತಿತರ ಪ್ರದೇಶಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಇನ್ನು ಮಳೆಗಾಲದ ಸಂದರ್ಭ ಕಾಮಗಾರಿಯನ್ನು ಪೂರ್ಣ ಗೊಳಿಸುವುದು ಅನುಮಾನವಾಗಿದೆ ಬೃಹತ್ ಹೊಂಡ ತೋಡಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿಯಾದರೂ ಬ್ಯಾರಿಕೇಡ್ ಗಳನ್ನು ಅಳವಡಿಸಿ ರಾತ್ರಿಯ ವೇಳೆ ವಾಹನಗಳು ಪಾದಚಾರಿಗಳು ವಾಹನಗಳು ಅಪಾಯಕ್ಕೆ ಒಳಗಾಗುವುದನ್ನು ತಪ್ಪಿಸಬೇಕಿದೆ. ತತ್‌ಕ್ಷಣ ಗುಂಡಿ ಮುಚ್ಚಲು ಸಾಧ್ಯವಾಗದಿದ್ದರೂ ಅಗೆದು ಹಾಕಲಾದ ಸ್ಥಳದಲ್ಲಿ ವಾಹನ ಸವಾರರಿಗೆ ತಿಳಿಯುವಂತೆ ಅಪಾಯ ಸೂಚಕಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ವಹಿಸುವಂತೆ ಮಾಡಬೇಕಿದೆ.
ಓಡಾಟಕ್ಕೆ ಅಯೋಗ್ಯವಾದ ಸರ್ವಿಸ್ ರಸ್ತೆ
ಸುರತ್ಕಲ್ ಜಂಕ್ಷನ್‌ನಿಂದ ಉಡುಪಿ ಕಡೆ ಹೋಗುವ ಸರ್ವಿಸ್ ರಸ್ತೆ ಉಪಯೋಗಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಕಾರು ಚಲಿಸಿದರೆ ಅಡಿ ಭಾಗಕ್ಕೆ ಹಾನಿಯಾಗುತ್ತಿದೆ ಮಾತ್ರವಲ್ಲ ದ್ವಿಚಕ್ರ ಸವಾರರು ವಾಹನ ಬ್ಯಾಲೆನ್ಸ್ ಮಾಡಲು ಕಷ್ಟ ಪಡುತ್ತಿದ್ದಾರೆ. ಎಂಆರ್‌ಪಿಎಲ್ ಸಹಿತ ವಿವಿಧೆಡೆ ಟ್ಯಾಂಕರ್, ಬಸ್‌ಗಳು ಇದರಲ್ಲೇ ಸಂಚರಿಸುವ ಕಾರಣ ತತ್‌ಕ್ಷಣ ಪಾಲಿಕೆಯಾದರೂ ತುರ್ತು ದುರಸ್ತಿ ಕೈಗೊಳ್ಳಬೇಕಿದೆ.
ಇತ್ಯರ್ಥಕ್ಕೆ ಕ್ರಮ
ವಿವಿಧ ಯುಜಿಡಿ ಪೈಪ್ ಅಳವಡಿಸುವ ಕಾಮಗಾರಿಗಾಗಿ ಮಣ್ಣು ಅಗೆದು ಹಾಕಿ ಜನಸಂಚಾರಕ್ಕೆ ತೊಡಕಾಗುತ್ತಿದೆ. ಸುರಿಯುತ್ತಿರುವ ಮಳೆಯಿಂದ ಸಮಸ್ಯೆಯೂ ಉದ್ಭವಿಸುತ್ತಿದೆ. ಜನವಸತಿ, ವಾಹನ ಓಡಾಟ ಪ್ರದೇಶಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ತ್ವರಿತವಾಗಿ ಇತ್ಯರ್ಥ ಪಡಿಸಲು ಪಾಲಿಕೆಯ ಆಧಿಕಾರಿಗಳಿಗೆ ಸೂಚಿಸಲಾಗುವುದು.
-ಡಾ| ಭರತ್ ಶೆಟ್ಟಿ ವೈ., ಶಾಸಕರು