ಉಡುಪಿ: ಗ್ರಾಮ ಸ್ವರಾಜ್ ಪಂಚಾಯತ್‌ರಾಜ್ ಅಧಿನಿಯಮ (2ನೇ ತಿದ್ದುಪಡಿ) 2015ರಂತೆ ಸ್ಥಾಯಿ ಸಮಿತಿಗಳನ್ನು ಕ್ರಿಯಾಶೀಲಗೊಳಿಸಿದರೆ ಗ್ರಾ.ಪಂ.ಗಳ ಬಲವರ್ಧನೆ ಸಾಧ್ಯ ಎಂದು ಮಹಾತ್ಮಾ ಗಾಂಧೀ ನರೇಗಾದ ಮಾಜಿ ಓಂಬುಡ್ಸ್‌ಮನ್ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.
ಜನ ಶಿಕ್ಷಣ ಟ್ರಸ್ಟ್, ದಿ ಹಂಗರ್ ಪ್ರಾಜೆಕ್ಟ್, ಸುಗ್ರಾಮ ಸಂಘದ ಸಹಭಾಗಿತ್ವ ದಲ್ಲಿ ಉಡುಪಿಯ ಪ್ರಗತಿ ಸೌಧದಲ್ಲಿ ಜರಗಿದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಸ್ಥಾಯೀ ಸಮಿತಿ, ಹಣಕಾಸು ಯೋಜನೆ, ಲೆಕ್ಕ ಪರಿಶೋಧನೆ ಸ್ಥಾಯೀ ಸಮಿತಿ, ಸಾಮಾಜಿಕ
ನ್ಯಾಯ ಸ್ಥಾಯೀ ಸಮಿತಿ ಪುನಾರಚಿಸುವುದು ಕಡ್ಡಾಯ. ಮಾರ್ಗ ಸೂಚಿಯಂತೆ ನಿಯಮಿತ ಸಭೆಗಳನ್ನು ನಡೆಸಿ ಉತ್ತಮ ಯೋಜನೆ ರೂಪಿಸಿದರೆ ಬಲವರ್ಧನೆ ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರಾದ ಸುಷ್ಮಾ, ಇಂದಿರಾ ನಾಯ್ಕ ಅವರು ಬಾಲ್ಯ ವಿವಾಹ ತಡೆ ಕಾಯ್ದೆ, ಪಂಚಾಯತ್ ಮಟ್ಟದಲ್ಲಿರುವ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಸಮಿತಿ, ಮಕ್ಕಳ ರಕ್ಷಣಾ ಸಮಿತಿ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮತದಾರರ ಸಬಲೀಕರಣ ಕುರಿತು ಮಾಹಿತಿ ನೀಡಲಾಯಿತು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸುಗ್ರಾಮ ಸಂಘದ ಅಧ್ಯಕ್ಷೆ ಪ್ರಭಾ ಶೆಟ್ಟಿ, ಪದಾಧಿಕಾರಿಗಳಾದ ಸೌಮ್ಯಾ, ಲೀಲಾವತಿ, ಸುಜಾತಾ, ಸುನಂದಾ, ವಿಮಲಾ ಸೇರಿದಂತೆ 11 ಗ್ರಾ.ಪಂ.ಗಳ ವ್ಯಾಪ್ತಿಯ 22 ಮಂದಿ ಸದಸ್ಯರು ಭಾಗವಹಿಸಿದ್ದರು. ಸಂಯೋಜಕಿ ರಮಾದೇವಿ ಕಾರ್ಯ ಕ್ರಮ ನಿರ್ವಹಿಸಿದರು. ಚಂಚಲಾ ಸಹಕರಿಸಿದರು.