Advertisement

ಪರಿಸ್ಥಿತಿ ಕೈ ಮೀರಿದರೆ ಸರಕಾರ ವಿಸರ್ಜನೆಗೆ ಅಸ್ತು

03:55 AM Jul 07, 2019 | sudhir |

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಸರಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ.

Advertisement

ಆಪರೇಷನ್‌ ಕಮಲ ಕ್ಲೈಮ್ಯಾಕ್ಸ್‌ ಹಂತ ತಲುಪಿರುವುದರಿಂದ ಸಂಪುಟ ಪುನಾರಚಿಸಿ ಅತೃಪ್ತರನ್ನು ಉಳಿಸಿಕೊಳ್ಳಬೇಕಾ ಅಥವಾ ಸರಕಾರ ವಿಸರ್ಜನೆ ಮಾಡಬೇಕಾ ಎನ್ನುವ ಕುರಿತು ಕೈ ನಾಯಕರು ಚಿಂತನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ರಾತ್ರಿ ಅಮೆರಿಕಾದಿಂದ ವಾಪಸ್‌ ಆದ ಬಳಿಕ ಸೋಮವಾರ ವಿಶೇಷ ಸಂಪುಟ ಸಭೆ ಕರೆದು ಸರಕಾರ ವಿಸರ್ಜನೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆಯೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಶನಿವಾರ ಬೆಳಗ್ಗೆ ಏಕಾಏಕಿ ಆರಂಭವಾದ ಶಾಸಕರ ರಾಜೀನಾಮೆ ಪ್ರಕ್ರಿಯೆಯಿಂದ ಕಂಗಾಲಾದ ರಾಜ್ಯ ಕಾಂಗ್ರೆಸ್‌ ನಾಯಕರು, ಮುಂದೇನು ಮಾಡುವುದು ಎನ್ನುವ ಗೊಂದಲದಲ್ಲಿ ಮುಳುಗಿದ್ದರು. ಕೆಲವು ನಾಯಕರು ಪ್ರತಿ ಬಾರಿಯಂತೆಯೇ ಇದೂ ಸುಳ್ಳಾಗುತ್ತದೆ ಎಂದು ನಿರ್ಲಕ್ಷ್ಯ ಮಾಡಿದ್ದರು.

ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಹೆಸರು ಕೇಳಿ ಬರುತ್ತಿದ್ದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇರವಾಗಿ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡದಂತೆ ಮನವಿ ಮಾಡುವ ಪ್ರಯತ್ನ ನಡೆಸಿದರು.

Advertisement

ಕನಕಪುರದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ, ರಾಜೀನಾಮೆ ನೀಡಲು ಆಗಮಿಸಿ ಸ್ಪೀಕರ್‌ ಕಚೇರಿಯಲ್ಲಿ ಕುಳಿತಿದ್ದ ಶಾಸಕರನ್ನು ಮನವೊಲಿಸುವ ಪ್ರಯತ್ನ ನಡೆಸಿದರು.

ಇನ್ನೊಂದೆಡೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್‌, ಗೃಹ ಸಚಿವ ಎಂ.ಬಿ.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಜತೆ ಪ್ರತ್ಯೇಕ ಸಭೆ ನಡೆಸಿ, ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಿದರು.

ಸಂಜೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ದಿಢೀರ್‌ ಬೆಂಗಳೂರಿಗೆ ಆಗಮಿಸಿ, ಹಿರಿಯ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ಹೇಗಾದರೂ ಮಾಡಿ ಸರಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜೀನಾಮೆ ನೀಡಿದವರ ಮನವೊಲಿಕೆ ಪ್ರಯತ್ನದ ಜತೆಗೆ ಮತ್ತೆ ಯಾರೂ ರಾಜೀನಾಮೆ ನೀಡದಂತೆ ಪ್ರಯತ್ನ ನಡೆಸುವ ಕುರಿತಂತೆಯೂ ಚರ್ಚಿಸಲಾಗಿದೆ. ಜೊತೆಗೆ ಜು.12 ರಂದು ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಈ ವೇಳೆ ಬಿಜೆಪಿಯವರು ಬಹುಮತ ಸಾಬೀತಿಗೆ ಒತ್ತಡ ಹೇರಬಹುದು. ರಾಜ್ಯಪಾಲರು ಮುಖ್ಯಮಂತ್ರಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಹೀಗಾಗಿ ಆ ವೇಳೆ ಪಕ್ಷದ ಎಲ್ಲಾ ಶಾಸಕರೂ ಒಟ್ಟಾಗಿ ಇರುವಂತೆ ನೋಡಿಕೊಳ್ಳಲು ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ರಾಜೀನಾಮೆ ನೀಡಿದ ಶಾಸಕರು ಒಪ್ಪುವುದಾದರೆ, ಸಂಪುಟ ಪುನಾರಚನೆ ಮಾಡಿ ಅವಕಾಶ ನೀಡುವ ಬಗ್ಗೆಯೂ ಆಲೋಚಿಸಲಾ ಗಿದೆ. ಇದರೊಂದಿಗೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಏನಾದರೂ ಪ್ರಕರಣ ದಾಖಲಾಗಿದ್ದರೆ, ಅವುಗಳ ಪುನರ್‌ ತನಿಖೆಗೆ ಆದೇಶ ನೀಡುವ ಬಗ್ಗೆ ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಇದೆಲ್ಲಾ ಬೆಳವಣಿಗೆಗಳ ನಂತರವೂ ಪರಿಸ್ಥಿತಿ ಕೈ ಮೀರಿದರೆ ಸಿಎಂ ಕುಮಾರಸ್ವಾಮಿ ಯೊಂದಿಗೆ ಚರ್ಚಿಸಿ, ಸರಕಾರ ವಿಸರ್ಜನೆ ಮಾಡುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ರೆಡ್ಡಿ ಮನವೊಲಿಸಲು ಯತ್ನ ವಿಫ‌ಲ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಶನಿವಾರ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ವಿಫ‌ಲವಾಗಿದೆ. ರಾಜ್ಯದಲ್ಲಿ ಉಂಟಾದ ದಿಢೀರ್‌ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು, ಕೆಂಪೇಗೌಡ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ರಾಮಲಿಂಗಾರೆಡ್ಡಿ ಪುತ್ರಿ ಶಾಸಕಿ ಸೌಮ್ಯರೆಡ್ಡಿ ಅವರ ಜತೆ ಮಾತನಾಡಿದರು. ನಂತರ ಎಚ್‌.ಕೆ.ಪಾಟೀಲ್‌ ಅವರ ಜತೆಗೂಡಿ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಹೋಗಿ ರಾಜೀನಾಮೆ ವಾಪಸ್‌ ಪಡೆಯುವಂತೆ ಕೋರಿದರು. ಡಿಸಿಎಂ ಪರಮೇಶ್ವರ್‌ ಅವರನ್ನು ಬೆಂಗಳೂರು ಉಸ್ತುವಾರಿ ಜವಾಬ್ದಾರಿಯಿಂದ ಕೈಬಿಡಬೇಕೆಂದು ರಾಮಲಿಂಗಾರೆಡ್ಡಿ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಸೌಮ್ಯರೆಡ್ಡಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ತಂದೆಯವರು ಮಾತ್ರ ಬೇರೆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next