Advertisement

ಕನ್ನಡ ಧ್ವಜದ ಸ್ವರೂಪ ಬದಲಾದರೆ ಹೋರಾಟ

11:20 AM Aug 13, 2017 | Team Udayavani |

ಬೆಂಗಳೂರು: “ಪ್ರತ್ಯೇಕ ನಾಡಧ್ವಜಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿರುವುದರ ಹಿಂದೆ ಹುನ್ನಾರ ಅಡಗಿದೆ. ಈಗಿನ ಧ್ವಜದ ಸ್ವರೂಪವನ್ನು ಸರ್ಕಾರ ಬದಲಿಸಲು ಮುಂದಾದರೆ ಉಗ್ರ ಹೋರಾಟ ನಡೆಯಲಿದೆ,’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಸಿದ್ದಾರೆ. 

Advertisement

ಕನ್ನಡ ಒಕ್ಕೂಟವು ಶನಿವಾರ ನಗರದ ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ “ಕನ್ನಡ ಬಾವುಟ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಈಗಿರುವ ಕನ್ನಡ ಬಾವುಟವನ್ನು ಸಾಹಿತಿಗಳು, ಹೋರಾಟಗಾರರು ಸೇರಿದಂತೆ ಪ್ರತಿಯೊಬ್ಬ ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಸರ್ಕಾರವೂ ಇದನ್ನು ಒಪ್ಪಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರತ್ಯೇಕ ಧ್ವಜದ ನೆಪದಲ್ಲಿ ಅದನ್ನು ಬದಲಾಯಿಸಬಾರದು. ಹಾಗೊಂದು ವೇಳೆ ಈಗಿರುವ ಬಾವುಟದಲ್ಲಿ ಬದಲಾವಣೆ ಮಾಡಿದರೆ, ಅದರ ವಿರುದ್ಧ ದೊಡ್ಡ ಹೋರಾಟ ನಡೆಯಲಿದೆ ಎಂದು ಹೇಳಿದರು. 

ನಾಡಧ್ವಜವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿ ಸೆ. 10ಕ್ಕೆ ನಗರದ ಕೆ.ಆರ್‌. ಮಾರುಕಟ್ಟೆಯಿಂದ ಪುರಭವನದವರೆಗೆ ಕನ್ನಡ ಬಾವುಟದ ಬೃಹತ್‌ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕನ್ನಡಪರ ಸಂಘಟನೆಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಾವುಟದ ರಕ್ಷಣೆಗಾಗಿ ಎಲ್ಲರೂ ಒಂದೇ ವೇದಿಕೆ ಅಡಿ ಬರಬೇಕು ಎಂದು ಮನವಿ ಮಾಡಿದರು.  

ಸಾಹಿತಿಗಳು ಸೇರಿದಂತೆ ಬಹುತೇಕರಿಗೆ ನಾಡಧ್ವಜದ ಇತಿಹಾಸವೇ ಗೊತ್ತೇ ಇಲ್ಲ. 50 ವರ್ಷಗಳ ಹಿಂದೆ ಈ ಸಂಬಂಧ ಎರಡು ಸಭೆಗಳು ನಡೆದವು. ಎರಡನೇ ಸಭೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣ ಇರುವ ಬಾವುಟವನ್ನು ಅಂತಿಮಗೊಳಿಸಲಾಯಿತು. ಈಗಿರುವ ಬಾವುಟವೇ ಅಂತಿಮ ಹಾಗೂ ಅದಕ್ಕೆ ಅಧಿಕೃತವಾದ ಮಾನ್ಯತೆ ನೀಡಬೇಕು ಎಂದರು. ಸಮ್ಮೇಳನದಲ್ಲಿ ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ದೇವ್‌, ಕನ್ನಡಪರ ಹೋರಾಟಗಾರರಾದ ಟಿ.ಪಿ. ಪ್ರಸನ್ನಕುಮಾರ್‌, ಜಿ. ಮುದ್ದೇಗೌಡ ಮತ್ತಿತರರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next