Advertisement

ನದಿ ಆಳದಲ್ಲಿ ಮರಳು ತೆಗೆದರೆ ಕಠಿಣ ಕ್ರಮ: ಸಚಿವ ಪಾಟೀಲ

08:06 AM Jul 05, 2019 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಆಶ್ರಯ ಮನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇರೆ ಜಿಲ್ಲೆಗೆ ಹೋಲಿಸಿದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮರಳಿದ ದರ ಕಡಿಮೆ ಇದೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದಲ್ಲಿ ಅಂತಹ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಲು ಸೂಚಿಸಿದರು. ಓವರ್‌ ಲೋಡ್‌ ಮಾಡಿದ ಲಾರಿ ಮತ್ತು ಟ್ರಿಪ್ಪರ್‌ಗಳನ್ನು ಸೀಜ್‌ ಮಾಡಬೇಕು. ಈ ಕುರಿತು ವಾಹನ ಮಾಲಿಕರ ಕರೆದು ಸಭೆ ಮಾಡಿ ಸೂಕ್ತ ನಿರ್ದೇಶನ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಿ ಮರಳು ಸಿಗುತ್ತಿಲ್ಲ ಅಲ್ಲಿ ಎಂ-ಸ್ಯಾಂಡ್‌ಗಳಿಗೆ ಅನುಮತಿ ನೀಡಬೇಕು. ಒಮ್ಮೆ ಎಂ-ಸ್ಯಾಂಡ್‌ಗೆ ಅನುಮತಿ ನೀಡಿದರೆ 30 ವರ್ಷಗಳ ವರೆಗೆ ಮರಳಿನ ಸಮಸ್ಯೆ ಬಗೆಹರಿಸಬಹುದಾಗಿದೆ. ಈಗಾಗಲೇ ಜಿಲ್ಲೆಯಿಂದ ಬಂದ ಅರ್ಜಿಗಳ ಪ್ರಸ್ತಾವಣೆ ಕಳುಹಿಸಿಕೊಟ್ಟಲ್ಲಿ ಕೂಡಲೇ ಅನುಮತಿ ನೀಡಲಾಗುವುದು ಎಂದು ಗಣಿ ಮತ್ತು ವಿಜ್ಞಾನ ಇಲಾಖೆಯ ನಿರ್ದೇಶಕ ಪ್ರಸನ್ನಕುಮಾರ ತಿಳಿಸಿದರು.

ಪಟ್ಟಾ ಜಮೀನುಗಳಲ್ಲಿಯೂ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದ್ದು, ಜಿಲ್ಲೆಯಿಂದ ಕಳುಹಿಸಲಾದ ಪ್ರಸ್ತಾವನೆಗಳಿಗೆ ಅನುಮತಿ ನೀಡಲಾಗುವುದು ಎಂದರು.

Advertisement

ಕಮರ್ಷಿಯಲ್ ಟ್ರ್ಯಾಕ್ಟರ್‌ ಮರಳು ಸಾಗಿಸಲು ಅನುಮತಿ ನೀಡಿ, ಆದರೆ ಟ್ರಾಫಿಕ್‌ ರೂಟ್‌ನಲ್ಲಿ ಹೋಗಲಾರದಂತೆ ಟ್ರ್ಯಾಕ್ಟರ್‌ ಮಾಲಿಕರ ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮರಳಿನ ಅಭಾವದ ಜೊತೆಗೆ ಮಣ್ಣಿನ ಸಮಸ್ಯೆ ಕೂಡಾ ಜಿಲ್ಲೆಯಲ್ಲಿ ಇದ್ದು, ಪಟ್ಟಾ ಜಮೀನುಗಳಲ್ಲಿ ಮಣ್ಣು ತೆಗೆಯಲು ಅನುಮತಿ ನೀಡುವಂತೆ ತೇರದಾಳ ಶಾಸಕ ಸಿದ್ದು ಸವದಿ ಸಚಿವರಲ್ಲಿ ಕೋರಿದಾಗ ಪಟ್ಟಾ ಜಮೀನುಗಳಲ್ಲಿ ಮಣ್ಣು ತೆಗೆಯಬಹುದಾಗಿದ್ದು, ಅದಕ್ಕೆ ಅನುಮತಿ ಪಡೆಯಬೇಕು ಎಂದರು.

ಈಗಾಗಲೇ ಗುತ್ತಿಗೆ ನೀಡಿದ ನದಿಯ ದಡದಲ್ಲಿರುವ ಮರಳು ಬ್ಲಾಕ್‌ಗಳಲ್ಲಿ ಹಾಳಾಗದಂತೆ ಕ್ರಮ ವಹಿಸಬೇಕು. ಅನುಮತಿ ನೀಡಿದ ಬ್ಲಾಕ್‌ಗಳಿಗೆ ಭೂ ವಿಜ್ಞಾನಿಗಳನ್ನು ಕಳುಹಿಸಿ, ಅಲ್ಲಿ ಎಷ್ಟು ಆಳ ತೆಗೆಯುತ್ತಿದ್ದಾರೆ ಎಂಬುದರ ಮಾಹಿತಿ ಪಡೆದು ನಿಯಮ ಮೀರಿ ಮರಳು ತೆಗೆಯುತ್ತಿದ್ದರೆ ಅಂತಹ ಗುತ್ತಿಗಾರರಿಗೆ ನೋಟಿಸ್‌ ನೀಡಬೇಕು. ಇದರಿಂದ ನದಿಗಳು ಹಾಳಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಇದನ್ನು ತಡೆಯಲು ಸೂಚಿಸಿದರು. ಜಿಲ್ಲೆಯಲ್ಲಿ ಎಲ್ಲ ಮರಳು ಬ್ಲಾಕ್‌ಗಳು ಆರಂಭವಾದರೆ ಮರಳಿ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಬೇಗನೇ ಬಾಕಿ ಉಳಿದ ಪ್ರಸ್ತಾವಣೆ ಕಳುಹಿಸಲು ಸಚಿವರು ಸೂಚಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಈಗಾಗಲೇ ಒಬ್ಬರು ಹೆಚ್ಚುವರಿ ಜಿಯೋಲಾಜಿಸ್ಟ್‌ಗಳನ್ನು ಹಾಗೂ ಒಬ್ಬರು ಪ್ರಥಮ ದರ್ಜೆ ಸಹಾಯಕರನ್ನು ನೀಡಿದ್ದು, ಇವರ ಜೊತೆಗೆ ಅಭಿಯಂತರರನ್ನು ನೀಡುವಂತೆ ಸಚಿವರಲ್ಲಿ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಕೋರಿದರು. ಅಗತ್ಯ ಸಿಬ್ಬಂದಿ ಒದಗಿಸುವುದಾಗಿ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ, ಕಟ್ಟಡ ಕಲ್ಲು, ಎಂ-ಸ್ಯಾಂಡ್‌, ಪಿಂಕ್‌ ಗ್ರಾನೈಟ್, ಡೊಲೊಮೈಟ್, ಕ್ರಷರ್‌ಗಳಿಗೆ ಅನುಮತಿಗಾಗಿ ಬಂದ ಅರ್ಜಿಗಳ ವಿವರಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ನಜಿರುಲ್ಲಾ ಸಭೆಗೆ ತಿಳಿಸಿದರು.

ಸಭೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ, ಜಿ.ಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿ ಎಚ್.ಜಯಾ, ಮೊಹಮ್ಮದ ಇಕ್ರಮ ಉಪಸ್ಥಿತರಿದ್ದರು.

ಈ ಮುಂಚೆ ಬಾದಾಮಿ ತಾಲೂಕಿನ ಜಾಲಿಹಾಳದ ಶಾಂತಗೌಡ ಹಾಗೂ ಶಂಕರಗೌಡ ಅವರು ಮರಳು ಬ್ಲಾಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next