Advertisement

ರಾಜಕಾಲುವೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು; ಸಚಿವ ಹಾಲಪ್ಪ

05:50 PM Oct 12, 2022 | Team Udayavani |

ಹುಬ್ಬಳ್ಳಿ: ರಾಜಕಾಲುವೆ ಒತ್ತುವರಿ ಆಗಿದ್ದರೆ ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು. ಸೋಮವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಬಾಧಿತವಾದ ಹಳೇಹುಬ್ಬಳ್ಳಿ ಪ್ರದೇಶಗಳಿಗೆ ಮಂಗಳವಾರ ಭೇಟಿಕೊಟ್ಟು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ರಾಜಕಾಲುವೆ ಒತ್ತುವರಿಯಾದ ಬಗ್ಗೆ ಸರ್ವೇ ಮಾಡಿಸಿ ವರದಿ ಪಡೆಯಲಾಗುವುದು. ಒತ್ತುವರಿ ಕಂಡುಬಂದರೆ ತೆರವು ಮಾಡಲಾಗುವುದು. ರಾಜ ಕಾಲುವೆ ಹೂಳು ಮತ್ತು ಇತರೆ ವಿಷಯಗಳ ಕುರಿತು ಇನ್ನೆರಡು ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಪೂರ್ಣ ವಿವರ ಪಡೆಯಲಾಗುವುದು. ಮನೆಗೆ ನೀರು ನುಗ್ಗಿ ಹಾನಿಗೊಳಗಾದವರಿಗೆ ಎನ್‌ ಡಿಆರ್‌ಎಫ್‌ ಮತ್ತು ರಾಜ್ಯ ಸರಕಾರದ ನಿಯಮಾನುಸಾರ ಪರಿಹಾರ ನೀಡಲು ಆದ್ಯತೆ ನೀಡಲಾಗುವುದು ಎಂದರು.

ನಗರದಲ್ಲಿ ರಾಜಕಾಲುವೆ ಸುತ್ತ ತಡೆಗೋಡೆ ಹಾಗೂ ದುರಸ್ತಿ ಕಾಮಗಾರಿಯನ್ನು ವಿಶ್ವ ಬ್ಯಾಂಕ್‌ನ 120 ಕೋಟಿ ರೂ. ನೆರವಿನೊಂದಿಗೆ ಉಣಕಲ್ಲ ಕೆರೆಯಿಂದ ಮಾಡಲಾಗುತ್ತಿದೆ. ಅದು ಹಳೇಹುಬ್ಬಳ್ಳಿ ಭಾಗದ ಕೆಲ ಪ್ರದೇಶದಲ್ಲೂ ಆಗುತ್ತದೆ. ಇನ್ನುಳಿದ ಪ್ರದೇಶಗಳಲ್ಲೂ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಸೋಮವಾರ ರಾತ್ರಿಯಿಂದಲೇ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡಲಾಗಿದೆ. ರಾಜಕಾಲುವೆಯ ತಡೆಗೋಡೆ ಇನ್ನಷ್ಟು ಏರಿಸಬೇಕಾಗಿದೆ. ನಾಲಾದ ಹೂಳು ತೆಗೆಯುವಂತೆ ಎರಡು ಬಾರಿ ಪಾಲಿಕೆ ಅಧಿಕಾರಿಗಳ ಜೊತೆ ಆಯುಕ್ತರ ಸಮ್ಮುಖದಲ್ಲೆ ಸಭೆ ಮಾಡಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಮತ್ತು ಸಂಸದರ ಗಮನಕ್ಕೆ ತಂದರೂ ಫಲವಾಗಿಲ್ಲ. ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಆದರೂ ಪರಿಹಾರ ದೊರೆತಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಲ್ಲೂ ತಪ್ಪು ನಿರ್ಧಾರ ಕೈಗೊಂಡಿದ್ದರಿಂದ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು ಸಚಿವರು ಮತ್ತು ಶಾಸಕರು ಮಳೆಯಿಂದ ಬಾಧಿತವಾದ ಪ್ರದೇಶಗಳಾದ ಹಳೇಹುಬ್ಬಳ್ಳಿ ನಾರಾಯಣ ಸೋಪಾ, ಬ್ಯಾಹಟ್ಟಿ ಪ್ಲಾಟ್‌, ಗೌಸಿಯಾ ಟೌನ್‌, ಸದರ ಸೋಪಾ ಸೇರಿದಂತೆ ಇತರೆ ಪ್ರದೇಶಗಳಿಗೆ ಭೇಟಿಕೊಟ್ಟು ಜನರ ಸಮಸ್ಯೆ ಆಲಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ನಜೀರಅಹ್ಮದ ಹೊನ್ಯಾಳ, ಮಾಜಿ ಸದಸ್ಯ ಬಸೀರ್‌ ಅಹ್ಮದ ಗೂಡಮಾಲ, ವಲಯಾಧಿಕಾರಿ ಕಾಂಬಳೆ, ಬಿಜೆಪಿಯ ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಭಾವಿ, ಮಹಾಂತೇಶ ಗಿರಿಮಠ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next