Advertisement
ದನ-ಕರುಗಳಿಗೆ ಆಹಾರಕ್ಕಾಗಿ ಉಪಯೋಗಿಸುವ ಮೇವು ಮರುವರ್ಷ ಬೆಳೆ ಬರುವವರೆಗೆ ಆಸರೆಯಾಗುತ್ತದೆ. ಇದನ್ನು ವರ್ಷ ಪೂರ್ತಿ ಕೆಡದ ಹಾಗೆ ಸಂರಕ್ಷಿಸಲು ಹಿಂದೆ ರೈತರು ಬಣವೆಯನ್ನು ಒಟ್ಟುತ್ತಿದ್ದರು. ಬಿಸಿಲಿಗೆ ಅದು ಬಂಗಾರದ ಬಣ್ಣ ಪಡೆಯುತ್ತಿದ್ದುದರಿಂದ ಅದನ್ನು “ಬಂಗಾರದ ಬಣವೆ’ ಎಂದೂ ಕರೆಯುತ್ತಿದ್ದರು. ಗಾಳಿ, ಸಿಡಿಲು, ಮಳೆಯಿಂದ ಯಾವುದೇ ರೀತಿ ಬಣವೆಗೆ ಅಪಾಯ ಆಗದೆ ಇರಲಿ ಎಂದು ಒಳ್ಳೆಯ ದಿನ ನಕ್ಷತ್ರ ನೋಡಿ ಒಟ್ಟಲು ಪ್ರಾರಂಭಿಸುತ್ತಾರೆ. ಅದರ ಮುಕ್ತಾಯಕ್ಕೂ ಒಳ್ಳೆಯ ದಿನ ನೋಡುತ್ತಾರೆ. ಬಣವೆಯಲ್ಲಿ ಎರಡು ವಿಧಗಳಿವೆ. ಹಿಂದಿನ ತಲೆಮಾರಿನಿಂದ ಬಂದದ್ದು “ಕೀಲು ಬಣವೆ’. ಇನ್ನೊಂದು ಹೊಲದಲ್ಲಿ ಒಟ್ಟುವುದು “ಮಾಳಿಗೆ ಬಣವೆ’.
ಹಿಂದಿನ ಕಾಲದಲ್ಲಿ ರಾಶಿ ಮಾಡುವ ಯಂತ್ರ ಇಲ್ಲದಿದ್ದರಿಂದ ಸುಗ್ಗಿ ಕಾಲ ಬಂದರೆ ಬಿತ್ತನೆ ಮಾಡಿದ ಬೆಳೆಯ ರಾಶಿ ಮಾಡಲು ರೈತರು ವಾರಪೂರ್ತಿ ಹೊಲದಲ್ಲಿಯೇ ಬಿಡಾರ ಹೂಡುತ್ತಿದ್ದರು. ಹೊಲದಲ್ಲಿ ತೆನೆ ಮುರಿದು ಮೇವಿನ ಚಾಪನ್ನು ಹಾಕಿ ಬಂಡಿಯಲ್ಲಿ ತಂದು, ಊರಿಗೆ ಸಮೀಪವಿರುವ ದಡ್ಡಿಯಲ್ಲಿ ಒಟ್ಟುತ್ತಿದ್ದರು. ಮಳೆಗೆ ಹಾನಿಯಾಗದಂತೆ ಬಣಿವೆಯನ್ನು ಒಟ್ಟುವುದೂ ಜಾಣ್ಮೆಯ ಕಲೆ. ಮೊದಲು ನೆಲದ ಮೇಲೆ ಕೆಂಪು ಮಣ್ಣನ್ನು ಹಾಕಿ ಅಡಿಪಾಯದಂತೆ ಕೀಲು ಸೂಡು ಹಾಕಿ ಅದರ ಮೇಲೆ ಸೂಡುದಾರ ಹಾಕುತ್ತಾ ಮಧ್ಯಭಾಗದ ಹಂತ ಬರುವವರೆಗೆ ಸ್ವಲ್ಪ ಅಗಲವನ್ನು ಕಡಿಮೆ ಮಾಡುತ್ತಾ ಪುನಃ ಅಲ್ಲಿಂದ ಅಗಲ ಮಾಡುತ್ತಾ ಬಣವೆ ಸುತ್ತಲೂ ಬಡಮಣಿಯಿಂದ ಬಡಿಯುತ್ತಾ ಕ್ರಮಬದ್ಧವಾಗಿ ಒಟ್ಟುತ್ತಾರೆ. ಮುಕ್ತಾಯದ ಹಂತ ಬರುವಷ್ಟರಲ್ಲಿ ಬಣವೆ, ಕುದುರೆ ದೇಹದ ಆಕಾರ ಪಡೆಯುತ್ತದೆ. ಜೋಳದ ದಂಟಿನ ಬೇರು ಭಾಗವಾದ ಬುಡುಚಿಯನ್ನು 1 ಅಡಿಯಷ್ಟು ಸುತ್ತಲೂ ಹೊರಗೆ ಮುಖ ಮಾಡಿ ಅದರ ಮೇಲೆ ಅಗಸಿ ಹೊಟ್ಟು ಹಾಕಿ ಮತ್ತದರ ಮೇಲೆ ಹಾಳು ಮಣ್ಣು ಹಾಕುತ್ತಾರೆ. ನಡುವೆ ಕೀಲನ್ನು ಹಾಕುವುದರ ಉದ್ದೇಶ, ಮಳೆ- ಗಾಳಿಗೆ ಬಣವೆ ಬೀಳದಂತೆ ಗಟ್ಟಿಯಾಗಿ ಹೊಯ್ದಾಡದೆ ನಿಲ್ಲಲಿ ಎಂದು. ಮಳೆಯಾದರೆ ಹನಿ ನೀರೂ ನಿಲ್ಲದ ಹಾಗೆ ಬಣವೆ ಒಟ್ಟುವ ಈ ಕಲೆ ವಿಶಿಷ್ಟವಾದುದು.
Related Articles
Advertisement