ಕಾಪು: ತಾನು ಅಹಿಂದ ಪರ ಎಂದು ಬಿಂಬಿಸುತ್ತಿರುವ ರಾಜ್ಯ ಸರಕಾರ ಕರಾವಳಿ ಜಿಲ್ಲೆಯಲ್ಲಿರುವ ಅಹಿಂದ ವರ್ಗದ ಸುಮಾರು 27,000 ಬಡವರಿಗೆ ಹಕ್ಕು ಪತ್ರ ವಿತರಿಸಲು ಮೀನ ಮೇಷ ಎಣಿಸುತ್ತಿದೆ. ಬಡವರನ್ನು ಬೀದಿಯಲ್ಲಿ ನಿಲ್ಲಿಸುವ ಪ್ರಯತ್ನ ಮುಂದುವರಿದರೆ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಬಿಜೆಪಿ ಸದಾ ಸಿದ್ಧವಿದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿ ಮತ್ತು ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ವಿವಿಧ ಮೋರ್ಚಾಗಳ ಸಹಭಾಗಿತ್ವ ದೊಂದಿಗೆ ಸೋಮವಾರ ನಡೆದ ಹೆಜಮಾಡಿಯಿಂದ ಕಾಪು ವರೆಗಿನ ಬೃಹತ್ ಕಾಲ್ನಡಿಗೆ ಜಾಥಾದ ಪ್ರಯುಕ್ತ ಕಾಪು ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಉಪಾ ಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಜಿ.ಪಂ.
ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯ ಕುಮಾರ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನಾಯಕರು ಉಪಸ್ಥಿತರಿದ್ದರು.