Advertisement

ಪೊಲೀಸರು ದಿಟ್ಟವಾಗಿದ್ರೆ ಅರ್ಧ ಕ್ರೈಂ ಕಡಿಮೆ ಆಗುತ್ತೆ

12:00 PM Sep 06, 2017 | Team Udayavani |

ಬೆಂಗಳೂರು: “ಪೊಲೀಸರು ಖಡಕ್ಕಾಗಿದ್ರೆ ಅರ್ಧ ಕ್ರೈಮ್‌ ಕಡಿಮೆಯಾಗುತ್ತೆ’ -ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಹೊಸದಾಗಿ ಗೃಹ ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರ ಖಡಕ್‌ ಮಾತು.

Advertisement

ಕಾಂಗ್ರೆಸ್‌ ವಲಯದಲ್ಲಿ ಸೌಮ್ಯ ಸ್ವಭಾವ, ಮಿತ ಭಾಷಿ ಎಂದೇ ಬಿಂಬಿತವಾಗಿರುವ ರಾಮಲಿಂಗಾರೆಡ್ಡಿ ಅವರು ಮಹತ್ವದ ಗೃಹ ಇಲಾಖೆ ಹೊಣೆ ಗಾ ರಿಕೆ ವಹಿಸಿಕೊಂಡಿದ್ದು, ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯ ವಸ್ಥೆ ಪಾಲನೆ ಎರಡೂ ಸವಾ ಲಿನ ಕೆಲಸ “ದಿಟ್ಟ’ವಾಗಿಯೇ ನಿಭಾಯಿಸುತ್ತೇನೆಂದು “ಉದಯವಾಣಿ ’ ಸಂದರ್ಶನದಲ್ಲಿ ಹೇಳಿದ್ದಾರೆ. 

* ಗೃಹ ಇಲಾಖೆ ಹೊಣೆಗಾರಿಕೆ ಅನಿರೀಕ್ಷಿತವಾ? 
ಡಾ.ಜಿ.ಪರಮೇಶ್ವರ್‌ ರಾಜೀನಾಮೆ ಕೊಟ್ಟ ಮೇಲೆ ಯಾರಿಗೆ ಕೊಡಬೇಕು ಅನ್ನುವ ಪ್ರಶ್ನೆ ಬಂದಾಗ, ನನ್ನದೂ ಸೇರಿ ರಮೇಶ್‌ ಕುಮಾರ್‌, ರಮಾನಾಥ ರೈ ಹೆಸರು ಕೇಳಿ ಬಂದಿತ್ತು. ನಮ್ಮಲ್ಲಿ 15-20 ಜನರು ಗೃಹ ಇಲಾಖೆಯನ್ನು ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಕೊನೆವರೆಗೂ ರಮಾನಾಥ ರೈ ಅವರಿಗೆ ಕೊಡ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಮುಖ್ಯಮಂತ್ರಿಗಳು ನನಗೆ ವಹಿಸಿದ್ದಾರೆ. ಅನಿರೀಕ್ಷಿತ ಎಂದು ಹೇಳಲಾಗದು. 

* ರೈ ಬದಲಿಗೆ ನಿಮಗೆ ಕೊಡುವುದಕ್ಕೆ ಕಾರಣವೇನು?
ಸದ್ಯದ ಪರಿಸ್ಥಿತಿ ನೋಡಿ ನನಗೆ ಕೊಟ್ಟಿರಬಹುದು. ಚುನಾವಣೆ ವರ್ಷ ಆಗಿರುವುದರಿಂದ ನಾನು ಬೆಂಗಳೂರಿನಲ್ಲಿಯೇ ಇರುವುದರಿಂದ ಹೆಚ್ಚಿನ ಅನುಕೂಲ ಆಗುತ್ತದೆಂಬ ಭಾವನೆ ಮುಖ್ಯಮಂತ್ರಿಯವ ರ ಮನಸಲ್ಲಿ ಇರಬಹುದು. ರಮಾನಾಥ ರೈ ಅವರು ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೆಚ್ಚು ಸಮಯ ಇರಬೇಕಾಗುವುದರಿಂದ ಅವರಿಗೆ ಅನಾನುಕೂಲ ಆಗುತ್ತೆ ಅನ್ನೋ ಕಾರಣಕ್ಕೆ ನನಗೆ ನೀಡಿರಬಹುದು.

* ಗೃಹ ಇಲಾಖೆಯನ್ನು ಯಾರೂ ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ನಿಮಗೆ ನೀಡಿದ್ರಾ?
ಹಾಗೇನಿಲ್ಲ. ಯಾರೂ ತಮಗೆ ಗೃಹ ಇಲಾಖೆ ಬೇಕು ಅಂತ ಮುಖ್ಯಮಂತ್ರಿ ಬಳಿ ಕೇಳಿಕೊಂಡಿಲ್ಲ. ನಾನೂ ಕೂಡ ನನಗೆ ಕೊಡಿ ಎಂದು ಕೇಳಿರಲಿಲ್ಲ. ನನ್ನ ಅನುಭವ ನೋಡಿ ಕೊಟ್ಟಿದ್ದಾರೆ. ರಮಾನಾಥ ರೈ ಮತ್ತು ನನ್ನ ನಡುವೆ ಯಾವುದೇ ಪೈಪೋಟಿ ಇರಲಿಲ್ಲ. 

Advertisement

*ನಿಮಗೆ ಗೃಹ ಖಾತೆ ನೀಡಿರುವುದಕ್ಕೆ ಪರಮೇಶ್ವರ್‌ಗೆ ಬೇಸರ ಆಗಿದೆಯಾ?
ಪಾಪ ಅವರಿಗೇಕೆ ಬೇಸರ ಆಗುತ್ತೆ? ಅವರು ಹೊಂದಿದ್ದ ಖಾತೆಯನ್ನು ತಾನೇ ನನಗೆ ನೀಡಿದ್ದು. ಮುಖ್ಯಮಂತ್ರಿ, ಅವರು, ರಾಜ್ಯ ಉಸ್ತುವಾರಿ ಎಲ್ಲರೂ ಸೇರಿಯೇ ತೀರ್ಮಾನ ಮಾಡಿರುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ.

* ಸೌಮ್ಯ ಸ್ವಭಾವದ ನಿಮ್ಮ ಆಯ್ಕೆ ಬಿಜೆಪಿ ಹೋರಾಟಕ್ಕೆ ಹಿನ್ನಡೆ ಆಯ್ತಾ ?
 ನಾಲ್ಕು ಬಾರಿ ಮಂತ್ರಿಯಾಗಿದ್ದೇನೆ. ನನ್ನ ಕೆಲಸದ ಬಗ್ಗೆ ಯಾರೂ ಆಕ್ಷೇಪ ಮಾಡಿಲ್ಲ. ಬಿಜೆಪಿ ಹೋರಾಟಕ್ಕೂ ನನ್ನ ಆಯ್ಕೆಗೂ ಸಂಬಂಧವಿಲ್ಲ. ಸ್ವಭಾವ ಸೌಮ್ಯವಾಗಿದ್ದರೂ ಕಠಿಣ ನಿರ್ಧಾರ ಮುಖ್ಯ. ನಾನು ಮಂತ್ರಿಯಾಗಿ ಸೌಮ್ಯವಾಗಿ ಮಾತನಾಡಬಹುದು. ಆದರೆ, ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಕಠಿಣವಾಗಿರುತ್ತದೆ. 

* ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಮೇಲೆ ಪೊಲೀಸ್‌ ದೌರ್ಜನ್ಯ ಆರೋಪ ಇದೆಯಲ್ಲ?
ಪೊಲಿಸರು ಎಲ್ಲರೊಂದಿಗೆ ಒರಟಾಗಿ ಇರಬೇಕಂತಲ್ಲ. ಸಾಮಾನ್ಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಸಾಮಾನ್ಯ ಜನರಿಗೆ ಅನಗತ್ಯ ತೊಂದರೆ ಕೊಡುವ ಅಧಿಕಾರಿಗಳನ್ನು ಮೇಲಾಧಿಕಾರಿಗಳು ಗಮನಿಸುತ್ತಾರೆ. ಅವರೂ ತಪ್ಪು ಮಾಡಿದರೆ, ಮೇಲಿನಿಂದ ಒಂದು ಸಂದೇಶ ಬರುತ್ತೆ ಅನ್ನುವ ಭಯ ಅವರಲ್ಲಿ ಇದ್ದರೆ, ಯಾವುದೇ ಸಮಸ್ಯೆ ಆಗುವುದಿಲ್ಲ. ತಪ್ಪು ಮಾಡುವ ಅಧಿಕಾರಿಗಳಿಗೂ ಸಂದೇಶ ರವಾನಿಸಿದರೆ ತಾನೇ ಸರಿಯಾಗುತ್ತೆ.

* ನಿಮಗೆ ವಿಶೇಷ ಸಲಹೆಗಾರರು ಬೇಕಿತ್ತಾ ?
ಸಲಹೆಗಾರರು ಮೊದಲಿನಿಂದಲೂ ಇದ್ದಾರೆ. ಈಗೇನು ನೇಮಕ ಆಗಿಲ್ಲ. ಸಲಹೆ ಕೊಡಲಿ ನನಗೇನೂ ಬೇಸರವಿಲ್ಲ. ಸಂಪುಟದ ಸಚಿವರು, ಮುಖ್ಯಮಂತ್ರಿ ಸಲಹೆ ಕೊಡ್ತಾರೆ, ಪ್ರತಿಪಕ್ಷದವರು, ಮಾಧ್ಯಮದವರು, ಪೊಲಿಸ್‌ ಅಧಿಕಾರಿಗಳು ಎಲ್ಲರೂ ಸಲಹೆ ಕೊಡುತ್ತಾರೆ. ಒಳ್ಳೆಯ ಸಲಹೆ ನೀಡಿದರೆ ತೆಗೆದುಕೊಳ್ಳೋಣ, ಅವರಿಂದ ನನಗೇನೂ ಸಮಸ್ಯೆ ಆಗುವುದಿಲ್ಲ. ಯಾರೇ ಸಲಹೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ.

* ಬಿಜೆಪಿ ರ್ಯಾಲಿಗೆ ಯಾಕೆ ಅನುಮತಿ ನೀಡಲಿಲ್ಲ  ?
ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರತಿಭಟನೆ ನಡೆಸಿದ್ದರೆ ನಮ್ಮದೇನೂ ಸಮಸ್ಯೆ ಇರಲಿಲ್ಲ. ಪೊಲೀಸ್‌ ಅಧಿಕಾರಿಗಳು ಕೇಳಿದ ಮಾಹಿತಿ ನೀಡಬೇಕಿರುವುದು ಅವರ ಜವಾಬ್ದಾರಿ. ಬೈಕ್‌ ರ್ಯಾಲಿ ಮಾಡುವುದರಿಂದ ಅನೇಕ ಭಾಗಗಳಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಈಗ ಬೈಕ್‌ ರ್ಯಾಲಿ ಮಾಡುವ ಅಗತ್ಯ ಏನಿದೆ?

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next