ಮೈಸೂರು: ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುವುದರಿಂದ ಆಗುವ ತೊಂದರೆಗಳು ಮತ್ತು ಕಾನೂನು ಪ್ರಕಾರ ಅಪರಾಧವೆಂದು ಜಿಲ್ಲಾ ಕಾರ್ಮಿಕ ಇಲಾಖೆಯು ಅನೇಕ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಅದೇ ರೀತಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಹಾ ಜಾಗೃತಿ ಮೂಡಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದª ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಸ್ ಸೌಲಭ್ಯ ಕಲ್ಪಿಸಿ: ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್‌ಗೆ ಹೋಗುವ ಮಹಿಳಾ ಕಾರ್ಮಿಕರು ಯಾವ ಭಾಗಗಳಲ್ಲಿ ಹೆಚ್ಚು ಪ್ರಯಾಣಿಸುತ್ತಾರೋ ಆ ಭಾಗಗಳಲ್ಲಿ ಹೆೆಚ್ಚು ಬಸ್ ಸೌಲಭ್ಯ ಒದಗಿಸಬೇಕು ಮತ್ತು ಬೆಂಗಳೂರಿನಲ್ಲಿ ಕಾರ್ಮಿಕರಿಗೆ ಬಸ್ ಪಾಸ್ ನೀಡಲಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ನೀಡಲು ಕಾರ್ಮಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಸರಕು ಸಾಗಣೆ ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು, ಆದಷ್ಟು ಜಾಗೃತಿ ಮೂಡಿಸಬೇಕು ಮತ್ತು ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕಗಳ ಮೂಲಕ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಸಮಿತಿಯು ಕ್ರಮ ವಹಿಸಬೇಕು ಎಂದರು.
ಹೆಲ್ಮೆಟ್ ಕಡ್ಡಾಯ: ನಗರದ ಅನೇಕ ಕಡೆಗಳಲ್ಲಿ ಅಪಘಾತವಾಗುತ್ತಿದ್ದು ಅದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು ಹಾಗೂ ಟ್ರಾಫಿಕ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಸೀಲಿಸಬೇಕು ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿರಬೇಕು. ನಗರದ ಹೊರಭಾಗದಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣಿಸುವವರು ಅನೇಕರು ಇದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಎಲ್ಲಾ ಕಡೆ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದರು.
ಅರಿವು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಮಾತನಾಡಿ, ಹಳ್ಳಿಗಳಲ್ಲಿ ಗೂಡ್ಸ್ ವಾಹನ ಪ್ರಯಾಣಿಕರು ಹೆಚ್ಚು ಕಂಡುಬರುತ್ತಾರೆ. ಅವರಿಗೆ ಕಾನೂನು ಅರಿವು ಮೂಡಿಸಬೇಕು ಹಾಗೂ ಶಾಲೆ ವಾಹನಗಳಲ್ಲಿ ಮಕ್ಕಳು ಒಂದು ವಾಹನದಲ್ಲಿ ಎಷ್ಟು ಪ್ರಯಾಣಿಸಬೇಕು ಹಾಗೂ ಡ್ರೈವರ್ ಎಷ್ಟು ವೇಗದಲ್ಲಿ ಚಲಾಯಿಸಬೇಕು ಮತ್ತು ವಾಹನ ಯಾವ ಹಂತದಲ್ಲಿರಬೇಕು ಎಂಬುದನ್ನು ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆದೇಶಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಸ್ನೇಹಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಾಗೂ ಜಿಲ್ಲೆಯ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.