ಟೋಕಿಯೊ (ಜಪಾನ್): ಕೊರೊನಾ ವೈರಸ್ ಜಗತ್ತಿನಾದ್ಯಂತ ಹಬ್ಬಿಕೊಳ್ಳುತ್ತಿದೆ. ಇದರಿಂದ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಇಂತಹ ಹೊತ್ತಿನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿ, ಈ ವರ್ಷ ಟೋಕಿಯೋದಲ್ಲಿ ಒಲಿಂಪಿಕ್ ಆಯೋಜಿಸುತ್ತಿರುವ ಜಪಾನ್ ಪರಿಸ್ಥಿತಿ ಹೇಗಿರಬಹುದು? ಎಲ್ಲ ಕಡೆ ಒಲಿಂಪಿಕ್ ಕೂಟ ಮುಂದೂಡಬಹುದೆಂಬ ಸುದ್ದಿ ಹರಿದಾಡುತ್ತಿದೆ. ಹಾಗೊಂದು ವೇಳೆ ಮುಂದೂಡಿಕೆಯಾದರೆ, ಅದು ಜಪಾನ್‌ಗೆ ಬಹಳ ದುಬಾರಿಯಾಗುತ್ತದೆ ಎಂದು ಅಲ್ಲಿನ ಒಲಿಂಪಿಕ್ ಸಚಿವೆ ಸೀಕೊ ಹಶಿಮೊಟೊ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯೊಂದಿಗಿನ ಒಪ್ಪಂದದ ಪ್ರಕಾರ, ಕೂಟವನ್ನು ವರ್ಷಾಂತ್ಯದವರೆಗೆ ಮುಂದೂಡಲು ಅವಕಾಶವಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ನಾವು ಐಒಸಿ ಜತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕೂಟವನ್ನು ಮುಂದೂಡಲು ಅವಕಾಶವಿದೆ ಎಂದು ಜಪಾನ್ ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ಹಶಿಮೊಟೊ ಹೇಳಿದ್ದಾರೆ. ಆದರೆ ಕೂಟವನ್ನು ನಿಗದಿತ ಸಮಯದಲ್ಲೇ ನಡೆಸಲು ಹಶಿಮೊಟೊ ಬಯಸಿದ್ದಾರೆ. ಕಾರಣ ಹತ್ತಿರಹತ್ತಿರ 1 ಲಕ್ಷ ಕೋಟಿ ರೂ.ಗಳನ್ನು ಈಗಾಗಲೇ ಆ ದೇಶ ವ್ಯಯಿಸಿದೆ. ಕೂಟ ನಿಗದಿಯಂತೆ ಜು. 24ರಂದು ಆರಂಭವಾಗಿ, ಸುಸೂತ್ರವಾಗಿ ಮುಗಿದರೆ, ಒಂದಲ್ಲ ಒಂದು ರೂಪದಲ್ಲಿ ಹಾಕಿದ ಹಣ ಜಪಾನ್‌ಗೆ ಮರಳುತ್ತದೆ. ಇಲ್ಲವಾದರೆ ಅಗಾಧ ನಷ್ಟವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಸಮಯಕ್ಕೆ ಸರಿಯಾಗಿ ಕೂಟ ಆರಂಭವಾಗಲಿ ಎಂದೇ ಬಯಸುತ್ತಿದ್ದಾರೆ.