Advertisement

ಕೊಳವೆ ಬಾವಿ ಮುಚ್ಚದಿದ್ದರೆ ಕಠಿನ ಕ್ರಮವಿರಲಿ, ಅಧಿಕಾರಿಗಳೂ ಹೊಣೆ

01:00 PM Apr 25, 2017 | Harsha Rao |

ಕೊಳವೆ ಬಾವಿ ಕೊರೆಯಲು ಪರವಾನಗಿ ಕಡ್ಡಾಯ. ಹೀಗಾಗಿ ಪ್ರತೀ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಕೊರೆಯಲಾದ ಕೊಳವೆ ಬಾವಿಗಳ ಸ್ಥಿತಿಗತಿ ಯನ್ನು ತಿಳಿಯುವುದು ಕಷ್ಟವೇನಲ್ಲ. ಇದಕ್ಕೆ ಪೂರಕವಾಗಿ ಕಠಿನ ನಿಯಮ, ಕಾನೂನುಗಳೂ ಇವೆ. ಆಗಬೇಕಾದದ್ದು ಸಮರ್ಪಕ ಅನುಷ್ಠಾನ. ಅದು ಕಟ್ಟುನಿಟ್ಟಾಗಿ ನಡೆಯಬೇಕು.

Advertisement

ತೀವ್ರ ಬರಗಾಲದ ಈ ದಿನಗಳಲ್ಲಿ ಕೊಳವೆ ಬಾವಿಗಳು ನೀರಿಲ್ಲದೆ ಪರೋಕ್ಷವಾಗಿ ಜನರ ಸಂಕಷ್ಟಕ್ಕೆ ಕಾರಣವಾಗುತ್ತಿವೆ, ಅಂತಹ ಕೊಳವೆ ಬಾವಿಗಳು ಎಳೆಯ ಮಕ್ಕಳನ್ನು ನೇರವಾಗಿ ನುಂಗಿ ನೊಣೆಯುವ ವಿದ್ಯಮಾನ ಈಚೆಗಿನ ದಶಕಗಳದ್ದು. ವಿಫ‌ಲ ಕೊಳವೆ ಬಾವಿಗಳನ್ನು ತೆರೆದೇ ಇರಿಸುವ ಬೇಜವಾಬ್ದಾರಿ ನಡವಳಿಕೆ ಸರ್ವತ್ರ ಕಂಡುಬರುತ್ತಿರುವುದರಿಂದ ಆಟವಾಡಲು, ಹೊಲದಲ್ಲಿ ಸಣ್ಣಪುಟ್ಟ ಕೆಲಸ ಮಾಡಲು ಹೋದ ಎಳೆಯರು ಹಠಾತ್ತನೆ ಭೂಗರ್ಭಕ್ಕೆ ಜಾರಿ ಪ್ರಾಣಕ್ಕೆರವಾಗುತ್ತಿದ್ದಾರೆ. ಕೊಳವೆ ಬಾವಿಗಳನ್ನು ಮುಚ್ಚದೆ ಇರಿಸುವುದರ ವಿರುದ್ಧ ಕಠಿನ ಕಾನೂನು, ಸುಪ್ರೀಂ ಕೋರ್ಟ್‌ ಆದೇಶ ಎಲ್ಲವೂ ಇದ್ದರೂ ಪ್ರತೀ ವರ್ಷ ರಾಜ್ಯದಲ್ಲಿ ಮಕ್ಕಳು ಕೊಳವೆ ಬಾವಿಗಳಿಗೆ ಬಿದ್ದು ಸಾಯುತ್ತಿದ್ದಾರೆ. 

2014ರಲ್ಲಿ ರಾಜ್ಯದ ಇಬ್ಬರು ಪುಟಾಣಿಗಳು ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ದುರ್ಘ‌ಟನೆ ನಡೆದ ಬಳಿಕ ಈ ಬಗ್ಗೆ ಭಾರೀ ಸಂಚಲನ ಉಂಟಾಗಿತ್ತು. ಬಾದಾಮಿ, ಸೂಳಿಕೆರೆಯ ಆರು ವರ್ಷದ ಬಾಲಕ ತಿಮ್ಮಣ್ಣ ಮತ್ತು ವಿಜಯಪುರದ ಐದು ವರ್ಷ ವಯಸ್ಸಿನ ಅಕ್ಷತಾ ಪಾಟೀಲ್‌ ಕೆಲವೇ ತಿಂಗಳುಗಳ ಅಂತರದಲ್ಲಿ ಇಂತಹ ಕೊಳವೆ ಬಾವಿಗಳಿಂದ ಜೀವಕ್ಕೆರವಾಗಿದ್ದರು. ಅವರನ್ನು ಸುರಕ್ಷಿತವಾಗಿ ಮೇಲೆತ್ತಲು ಹಲವು ತಾಸುಗಳ ಕಾರ್ಯಾಚರಣೆ ನಡೆಸಿದ್ದರೂ ಈ ಪುಟ್ಟ ಮಕ್ಕಳ ಶವಗಳನ್ನಷ್ಟೇ ಮೇಲೆತ್ತಲು ಸಾಧ್ಯವಾಗಿತ್ತು. 2014ರ ಒಂದೇ ವರ್ಷದಲ್ಲಿ ದೇಶಾದ್ಯಂತ ಇಂತಹ ದುರ್ಘ‌ಟನೆಗಳಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ, ಇವರಲ್ಲಿ ಪುಟ್ಟ ಮಕ್ಕಳೇ ಅತಿಹೆಚ್ಚು. 

2014ರಲ್ಲಿ ರಾಜ್ಯದಲ್ಲಿ ಇಂತಹ ಎರಡು ದುರದೃಷ್ಟಕರ ಮೃತ್ಯುಗಳು ದಾಖಲಾದ ಬಳಿಕ ರಾಜ್ಯ ಸರಕಾರ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾಗೃತಗೊಂಡು ರಾಜ್ಯಾದ್ಯಂತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿತ್ತು. ಒಟ್ಟು 1.47 ಲಕ್ಷ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲಾಗಿತ್ತು. ಸರಕಾರಿ ಸ್ಥಳದಲ್ಲಿ ತೆರೆದ ಕೊಳವೆ ಬಾವಿಗಳಿದ್ದರೆ ಅವುಗಳನ್ನು ಮುಚ್ಚಿಸುವುದಕ್ಕೆ ಸಂಬಂಧಿತ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ನಿಯಮವನ್ನು ಸರಕಾರ ರೂಪಿಸಿತ್ತು. ಖಾಸಗಿ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಪಂಚಾಯತ್‌ ಪರವಾನಗಿ ಪಡೆಯುವುದು ಮತ್ತು ಆ ಬಳಿಕ ಅದು ತೆರೆದಿದೆಯೋ ಮುಚ್ಚಿದೆಯೋ ಎಂಬುದನ್ನು ಪಂಚಾಯತ್‌ ಮಟ್ಟದಲ್ಲಿ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಕೂಡ ಒಂದು ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಇದಕ್ಕೆ ಹಿಂದೆ 2010ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿತ್ತು. 

ತೆರೆದ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದು ಬಲಿಯಾಗುವುದನ್ನು ತಡೆಯಲು ಅಗತ್ಯ ಕಾನೂನು ಜಾರಿಗೆ ತಂದಿರುವುದು ಸರಿ. ಆದರೂ ಆರೇಳು ತಿಂಗಳ ಹಿಂದೆ ಕೊಳವೆ ಬಾವಿ ಕೊರೆದು, ನೀರು ಸಿಗದ ಅದನ್ನು ಹಾಗೆಯೇ ಬಿಟ್ಟಿರುವ ಝಂಜರವಾಡದಂತಹ ಪ್ರಕರಣಗಳು ಅಕ್ಷಮ್ಯ. 2014ರ ಬಳಿಕ ಕೊರೆಯಲ್ಪಟ್ಟು, ವಿಫ‌ಲಗೊಂಡು ಬಾಯ್ದೆರೆದು ಬಲಿಗಾಗಿ ಕಾದುಕುಳಿತಿರುವ ಕೊಳವೆ ಬಾವಿಗಳು ರಾಜ್ಯದಲ್ಲಿ ಇನ್ನಷ್ಟು ಇರಬಹುದು, ಇವೆ.   ಮುಚ್ಚದ ವಿಫ‌ಲ ಖಾಸಗಿ ಕೊಳವೆ ಬಾವಿಗಳಿಗೆ ಆಯಾ ಜಮೀನು ಮಾಲಕರನ್ನು ಹೊಣೆ ಮಾಡುವ, ಕ್ರಮ ಕೈಗೊಳ್ಳುವ ಚಿಂತನೆ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌. ಕೆ. ಪಾಟೀಲ್‌ ಹೇಳಿದ್ದಾರೆ. ಇದು ಕೂಡ ಆಗಲೇ ಬೇಕಾದುದೇ. ನೀರಿರುವ ಕೊಳವೆ ಬಾವಿಗೆ ಪಂಪ್‌ ಅಳವಡಿಸಿ ತಿಂಗಳೊಪ್ಪತ್ತಿನಲ್ಲಿ ನೀರು ಹೀರಲು ಮುಂದಾಗಲು ಬಲ್ಲವರಿಗೆ ವಿಫ‌ಲ ಕೊಳವೆ ಬಾವಿಯನ್ನು ಕೆಲವು ನೂರು ಅಥವಾ ಸಾವಿರ ರೂ. ವೆಚ್ಚದಲ್ಲಿ ಮುಚ್ಚಿಸಬೇಕು ಎನ್ನುವ ಜವಾಬ್ದಾರಿಯನ್ನು ಶಿಕ್ಷೆಯ ಭಯದಲ್ಲಾದರೂ ಮೂಡಿಸಬೇಕು.   

Advertisement

ಸರಕಾರಿ ಸ್ಥಳದಲ್ಲಿ ಕೊರೆದ ಕೊಳವೆ ಬಾವಿಗಳನ್ನು ಮುಚ್ಚುವುದಕ್ಕೆ ಸಂಬಂಧಿತ ಅಧಿಕಾರಿಗಳು ಹೊಣೆ ಎಂದು ಸಚಿವರು ಹೇಳಿದ್ದಾರೆ. ಖಾಸಗಿ ಕೊಳವೆ ಬಾವಿಗಳ ವಿಚಾರದಲ್ಲಿ ಕೂಡ, ಜಮೀನು ಮಾಲಕರು ಎಷ್ಟು ಜವಾಬ್ದಾರರೋ ಅಷ್ಟೇ ಹೊಣೆಗಾರಿಕೆಯನ್ನು ಸ್ಥಳೀಯ ಅಧಿಕಾರಿಗಳ ಮೇಲೂ ಹೊರಿಸಬೇಕು. ಇದರ ಜತೆಗೆ ಕೊರೆಯುವ ಕೊಳವೆ ಬಾವಿಗಳು ಮತ್ತು ಅವುಗಳ ಸ್ಥಿತಿಗತಿಯ ಬಗ್ಗೆ ವಾಸ್ತವ ನೆಲೆಗಟ್ಟಿನ ವರದಿ ಕಾಲಕಾಲಕ್ಕೆ ಸಿದ್ಧವಾಗಿ ಸರಕಾರದ ಕೈಸೇರುವ ವ್ಯವಸ್ಥೆಯೂ ರೂಪುಗೊಳ್ಳಬೇಕು. ಆಗ ಮಾತ್ರ ಇಂತಹ ದುರ್ಘ‌ಟನೆಗಳಿಗೆ ಇತಿಶ್ರೀ ಹೇಳುವುದು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next