ನವದೆಹಲಿ: ಅಯೋಧ್ಯೆಯಲ್ಲಿನ ಜಮೀನು ಮಾಲೀಕತ್ವದ ಬಗ್ಗೆ ರಚನೆ ಮಾಡಲಾಗಿರುವ ಸಮಿತಿ ಮಾತುಕತೆ ಮೂಲಕ ವಿವಾದ ಇತ್ಯರ್ಥ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಲ್ಲಿ, ಜೂ.25ರಿಂದ ಪ್ರತಿದಿನ ಪ್ರಕರಣದ ವಿಚಾರಣೆ ನಡೆಸುತ್ತೇವೆ. ಹೀಗೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ಹೇಳಿದೆ.
ಮಾತ್ರವಲ್ಲದೆ 18ರ ಒಳಗಾಗಿ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ಸಮಿತಿ ಪ್ರಸ್ತುತ ಸಂಧಾನ ಕುರಿತ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದೆ. ವರದಿ ಪರಿಶೀಲಿಸಿ, ಮಾತುಕತೆ ಮೂಲಕ ಜಮೀನು ಮಾಲೀಕತ್ವ ವಿಚಾರ ಇತ್ಯರ್ಥ ಸಾಧ್ಯವಿಲ್ಲ ಎಂದಾದರೆ 25ರಿಂದ ದಿನವಹಿ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿದೆ.
ರಾಮಲಲ್ಲಾ ವಿರಾಜಮಾನ್ ಸಂಘಟನೆ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ರಂಜಿತ್ ಕುಮಾರ್, ಮಧ್ಯಸ್ಥಿಕೆ ಪ್ರಕ್ರಿಯೆಗೆ ಪ್ರಕರಣವನ್ನು ಒಪ್ಪಿಸಬಾರದು ಎಂಬ ಹಿಂದಿನ ನಿಲುವನ್ನೇ ಈಗಲೂ ಪ್ರಕಟಿಸುತ್ತಿರುವುದಾಗಿ ಹೇಳಿದ್ದಾರೆ. ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ರಾಜೀವ್ ಧವನ್ ಮಧ್ಯಸ್ಥಿಕೆ ಪ್ರಕ್ರಿಯೆ ಮುಕ್ತಾಯ ಮಾಡಬಾರದು. ಹೊಸ ಅರ್ಜಿ ಸಲ್ಲಿಕೆ ಕೇವಲ ಪ್ರಚೋದನಕಾರಿ ಎಂದು ವಾದಿಸಿದರು.
ಅದಕ್ಕೆ ಉತ್ತರಿಸಿದ ನ್ಯಾಯಪೀಠ ‘ಸಮಿತಿ ರಚಿಸಲು ಹೇಳಿದ್ದೇ ನಾವು. ಹೀಗಾಗಿ, ಇದುವರೆಗೆ ಏನಾಗಿದೆ ಎನ್ನುವುದನ್ನು ಪರಿಶೀಲಿಸಲು ನಮಗೆ ಹಕ್ಕು ಇದೆ’ ಎಂದಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮೂಲ ಅರ್ಜಿದಾರ ಗೋಪಾಲ ಸಿಂಗ್ ವಿಶಾರದ್ ಪರ ನ್ಯಾಯವಾದಿ ಕೆ.ಎಸ್.ಪರಾಶರನ್, ಮಾತುಕತೆ-ಮಧ್ಯಸ್ಥಿಕೆ ಮೂಲಕ ವಿವಾದ ಪರಿಹರಿಸಲು ಕಷ್ಟ ಎಂದು ಹೇಳಿದರು. ಮಧ್ಯಸ್ಥಿಕೆ ಸಮಿತಿ ಸಭೆ ಸೇರಿದ ವಿವರ ನೀಡಿದ ಪರಾಶರನ್ ಸುಪ್ರೀಂಕೋರ್ಟ್ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಅದಕ್ಕೆ ಧವನ್ ವಿರೋಧಿಸಿದರು.