Advertisement

ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ , ನೆಮ್ಮದಿ

01:34 AM Jun 03, 2021 | Team Udayavani |

ಪ್ರ ತಿಯೊಬ್ಬ ಮನುಷ್ಯನು ತಾನು ಸಂತೋಷದಿಂದ ಇರಲು ಬಯಸು ವುದು ಸಹಜ. ನಾವು ಸಂತೋಷವಾಗಿರು ವುದರ ಜತೆಗೆ ಇತರರ ಬದುಕನ್ನು ಸಂತೋಷಗೊಳಿಸುವ ಪ್ರಜ್ಞೆ ನಮ್ಮಲ್ಲಿರ ಬೇಕು. ಪ್ರತಿಯೊಂದನ್ನು ವೈಯಕ್ತಿಕ ಲಾಭದ ದೃಷ್ಟಿಯಿಂದ ನೋಡಲಾರಂಭಿಸಿದಾಗ ಇತರರ ಮೇಲೆ ಮತ್ಸರ ಉಂಟಾಗಿ ನಮ್ಮ ನೆಮ್ಮದಿ ಹಾಳಾಗಬಹುದು. ಉಳಿದವರು ಏನೇ ಆಗಲಿ ನಾನು ಮಾತ್ರ ಸಂತೋಷ ವಾಗಿರಬೇಕು ಎಂಬ ಸ್ವಾರ್ಥ ಭಾವನೆ ಸಲ್ಲದು. ಇತರರ ಕುರಿತು ಬದ್ಧತೆಯನ್ನು, ಕಾಳಜಿಯನ್ನು ಬೆಳೆಸಿಕೊಳ್ಳಬೇಕು.

Advertisement

ಸಂತೋಷವೆಂಬುದು ಒಂದು ಮನಃ ಸ್ಥಿತಿ ಎಂಬ ಸತ್ಯವನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಜೀವನದ ಬಂಡಿ ಸಾಗಲು ಆದಾಯ, ಸಾಧನ -ಸಲಕರಣೆಗಳು ಅತ್ಯವಶ್ಯವಾದರೂ ಅವುಗಳಿಂದಲೇ ಬದುಕು ಎಂದು ಭಾವಿಸಿದಾಗ ಅಸಂತೋಷ ಲಗ್ಗೆ ಇಡುತ್ತದೆ. ಶ್ರೀಮಂತಿಕೆಯೇ ಸಂತೋಷವನ್ನು ತಂದು ಕೊಡುವ ಸಾಧನ ಎಂದು ಹೇಳುವುದಾದರೆ ಶ್ರೀಮಂತರೆಲ್ಲರೂ ಸಂತೋಷದಿಂದ ಇದ್ದಾರೆಯೇ ಎಂಬ ಪ್ರಶ್ನೆ ತತ್‌ಕ್ಷಣ ಮೂಡುತ್ತದೆ. ಹಾಗಿದ್ದರೆ ಬಡತನದಲ್ಲಿ ಸಂತೋಷವಿದೆಯೇ ಎಂದರೆ ಅದೂ ಇಲ್ಲ. ಬಡತನ -ಸಿರಿತನಗಳು ನಾವು ಎಷ್ಟು ದುಬಾರಿ ವಸ್ತುಗಳ ಒಡೆಯರಾಗಿದ್ದೇವೆ ಎಂಬುದನ್ನು ಅಳೆಯಲು ಸೀಮಿತವಾಗಿವೆಯೇ ಹೊರತು ಅದು ಸುಖ, ಸಂತೋಷ, ನೆಮ್ಮದಿಯನ್ನು ಅಳೆಯುವ ಮಾನದಂಡವಲ್ಲ.

ಪ್ರತಿಯೊಬ್ಬನಿಗೂ ಅವನ ಯೋಗ್ಯತೆಗೆ ತಕ್ಕ ಒಂದು ಉದ್ಯೋಗ, ಹೊಟ್ಟೆ ತುಂಬು ವಷ್ಟು ಆಹಾರ ಮತ್ತು ಮೈ ಮುಚ್ಚುವಷ್ಟು ಬಟ್ಟೆ ಇರಲು ಒಂದು ಸೂರು ಅಪೇಕ್ಷಿತ. ಈ ಮೇಲಿನವುಗಳ ಕೊರತೆ ಇಲ್ಲದಿದ್ದರೂ ನಾವು ಅಸಂತೋಷರಾಗಿದ್ದೇವೆ. ಎಲ್ಲವೂ
ನಮ್ಮಲ್ಲಿದ್ದರೂ ನಾವು ಅಸಂತುಷ್ಟರಾಗಿ ದ್ದೇವೆ ಎಂದರೆ ಸಿರಿತನವು ನಮ್ಮ ಸಂತೋಷವನ್ನು ನಿರ್ಧರಿಸುವುದಿಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಇಂದಿನಷ್ಟು ಉದ್ಯೋಗಾವಕಾಶ, ಆದಾಯ, ಆಹಾರ, ಉತ್ಪಾದನೆ, ವೈಜ್ಞಾನಿ
ಕತೆ ಹಾಗೂ ಸರಕಾರದ ಸಹಾಯವಾಗಲಿ ಅಂದಿನವರಿಗೆ ಇರಲಿಲ್ಲ. ಆದರೂ ಜನ ಇಂದಿಗಿಂತ ಹೆಚ್ಚು ಸಂತುಷ್ಟರಾಗಿದ್ದ ರೆಂಬುದನ್ನು ಒಪ್ಪಿಕೊಳ್ಳಲೇಬೇಕು.

ಇಂದು ನಮ್ಮ ನೈಜ ಆದಾಯ ಹೆಚ್ಚುತ್ತಿರುವುದು ಸಂತಸದ ವಿಚಾರ. ಆದರೆ ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎನ್ನುವ
ಬಯಕೆಯಿಂದ ಅತೀವವಾಗಿ ದುಡಿಯು ತ್ತಿದ್ದೇವೆ ಅಥವಾ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ದುರ್ಮಾರ್ಗಗಳನ್ನು ತುಳಿಯುತ್ತಿದ್ದೇವೆ. ಇದರಿಂದ ಅಸಂತೋಷ ಹೆಚ್ಚಾಗಿದೆ. ಹಣ, ಆಸ್ತಿಯ ಹಿಂದೆ ಬಿದ್ದು ನಮಗೆ ದೇವರು ಕೊಟ್ಟ ಬದುಕನ್ನು ನೆಮ್ಮದಿಯಿಂದ ಸಾಗಿಸಲು ಅಸಮರ್ಥರಾಗುತ್ತಿದ್ದೇವೆ. ಹಿಂದಿನ ಕಾಲದಲ್ಲಿ ನಿರುದ್ಯೋಗಿಗಳಿಗೆ, ಅನಾಥ ರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಕುಟುಂಬದ ಮತ್ತು ಸಮಾಜದ ಬೆಂಬಲ ಮತ್ತು ಸಾಂತ್ವನ ಸಿಗುತ್ತಿತ್ತು. ಈಗ ಅದು ಕಡಿಮೆಯಾಗುತ್ತಿರುವುದರಿಂದ ಅಸು ರಕ್ಷೆಯ ಭಾವನೆ ಕಾಡುತ್ತಿದೆ. ಇದರಿಂದ ಅಸಂತೋಷ ಹೆಚ್ಚುತ್ತಿದೆ. ಹೊಟ್ಟೆ ತುಂಬಾ ಆಹಾರ, ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾ ರಣೆ, ಪ್ರಕೃತಿ ವಿಕೋಪಗಳ ವಿರುದ್ಧದ ರಕ್ಷಣೆಯಿಂದಾಗಿ ಇಂದು ಮನುಷ್ಯನ ಜೀವಿತಾವಧಿಯು ಹೆಚ್ಚಾಗಿದೆ. ಆದರೆ ಕೆಟ್ಟ ಚಟ, ದುರಾಭ್ಯಾಸ, ಅಪೌಷ್ಟಿಕ ಆಹಾರ ಪದ್ಧತಿ, ಕಂಡದ್ದನ್ನೆಲ್ಲ ತಿನ್ನುವ ಪ್ರವೃತ್ತಿಗಳಿಂದಾಗಿ ಆತನ ಜೀವಿತಾವಧಿ ಮಾತ್ರ ಆರೋಗ್ಯಪೂರ್ಣವಾಗಿಲ್ಲ.

ಜೀವನದ ಮಾರ್ಗಗಳು ಹೆಚ್ಚಾಗಿವೆ. ಆದರೆ ಅವುಗಳನ್ನು ಆಯ್ದುಕೊಳ್ಳುವಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಮಕ್ಕಳಿಗೆ ಆಸಕ್ತಿ ಇರಲಿ, ಇಲ್ಲದಿರಲಿ, ಎಂಜಿನಿಯರ್‌, ಡಾಕ್ಟರ್‌ ಆಗುವುದು ಮಾತ್ರ ಬದುಕಲು ಇರುವ ಮಾರ್ಗಗಳು ಎಂಬಂತಹ ಪರಿಸ್ಥಿತಿಯನ್ನು ಸ್ವತಃ ನಾವೇ ನಿರ್ಮಿಸಿದ್ದೇವೆ. ಜೀವಿಸಲು ಬೇಕಾಗುವ ಮೂಲ ವಸ್ತು ಗಳ ತಯಾರಕರನ್ನು ಮುಂದಿನ ಪೀಳಿಗೆಗೆ ನೀಡುವ ಬದಲು ಇನ್ನೇನೋ ಮಹದಾಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದೇವೆ. ಇತರರ ಸುಖ, ಸಂತೋಷವನ್ನು ನಾವು ಗೌರವಿಸುತ್ತಿಲ್ಲ. ಸ್ವಾರ್ಥ ನಮ್ಮಲ್ಲಿ ವಿಜೃಂಭಿಸುತ್ತಿದೆ.

Advertisement

ಅನ್ಯಾಯ, ಅಪನಂಬಿಕೆ ಹೆಚ್ಚುತ್ತಿದೆ. “ತಿಂದುಂಡ ಗಂಡ ಚೆಂಡು ಬೇಡಿ ಅಳ್ತಿದ್ದನಂತೆ’ ಎಂಬ ಗಾದೆಯಂತೆ ಒಟ್ಟಿನಲ್ಲಿ ಪ್ರಸ್ತುತ ಎಲ್ಲ ಅನುಕೂಲತೆಗಳಿದ್ದರೂ ನಾವು ಅಸಂತುಷ್ಟರಾಗಿದ್ದೇವೆ!. “ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ’ ಎನ್ನುವ ಬುದ್ಧನ ಸಂದೇಶ ಸಾರ್ವಕಾಲಿಕ ಸತ್ಯ ಎಂಬುದನ್ನು ಅರಿತುಕೊಳ್ಳಬೇಕಿದೆ.

- ಸುಪ್ರಿಯಾ ಭಂಡಾರಿ ಬೈಲೂರು

Advertisement

Udayavani is now on Telegram. Click here to join our channel and stay updated with the latest news.

Next