Advertisement

ಸಾಲ ಮನ್ನಾ ಮಾಡದಿದ್ದರೆ ನಿದ್ರೆ ಮಾಡಲು ಬಿಡಲ್ಲ

11:49 AM Dec 19, 2018 | Team Udayavani |

ಹೊಸದಿಲ್ಲಿ: “ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಮಾಡಲು ಬಿಡುವುದಿಲ್ಲ…’

Advertisement

– ಇದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇಂದ್ರ ಸರಕಾರಕ್ಕೆ ಹಾಕಿದ ಸವಾಲು. ಇದಷ್ಟೇ ಅಲ್ಲ, ಈಗ ಮೋದಿ ಸರಕಾರ ಮಾಡದಿದ್ದರೆ, 2019ರಲ್ಲಿ ನಮಗೆ ಅಧಿಕಾರ ನೀಡಿ, ತತ್‌ಕ್ಷಣವೇ ಎಲ್ಲ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದೂ ದೇಶದ ರೈತರಿಗೆ ರಾಹುಲ್‌ ಭರವಸೆ ನೀಡಿದ್ದಾರೆ. ಸಂಸತ್‌ನ ಹೊರಗೆ ಸುದ್ದಿಗಾರರ ಜತೆ ತೀರಾ ಆಕ್ರಮಣಕಾರಿಯಾಗಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರ ಸರಕಾರದ ವಿರುದ್ಧ ಸಾಲ ಮನ್ನಾ, ರಫೇಲ್‌ ಡೀಲ್‌ ಸಹಿತ ವಿವಿಧ ವಿಷಯಗಳ ಸಂಬಂಧ ವಾಗ್ಧಾಳಿ ನಡೆಸಿದರು. 

ಸಾಲ ಮನ್ನಾಗೆ ಗಡುವು: ಪಂಚ ರಾಜ್ಯಗಳ ಚುನಾವಣೆ ವೇಳೆ ಮಾತು ಕೊಟ್ಟಿದ್ದಂತೆ ಅಧಿಕಾರಕ್ಕೇರಿದ ಆರು ಗಂಟೆ ಗಳಲ್ಲೇ ಎರಡು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿ ದ್ದೇವೆ. ಆದರೆ, ಕೇಂದ್ರ ಸರಕಾರ ತಮಗೆ ಬೇಕಾದ 15 ಉದ್ಯಮಿ ಗಳ ಹಿತ ಕಾಯಲು ಬಯಸುತ್ತದೆಯೇ ಹೊರತು, ದೇಶದ ರೈತರ ಬಗೆಗಲ್ಲ. ಹೀಗಾಗಿ ಮೋದಿ ಸರಕಾರ ಸಾಲ ಮನ್ನಾ ಮಾಡುವ ವರೆಗೂ ಅವರಿಗೆ ನಿದ್ದೆ ಮಾಡಲು ಬಿಡು ವುದಿಲ್ಲ. ಹಾಗೆಯೇ ಇತರ ವಿಪಕ್ಷಗಳ ಜತೆ ಸೇರಿ ರೈತರ ಪರವಾಗಿ ಹೋರಾಟ ನಡೆಸುತ್ತೇವೆ ಎಂದು ಘೋಷಿಸಿದರು. ಈಗಾಗಲೇ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಲಾಗಿದ್ದು, ಈ ಬಗ್ಗೆಯೂ ಪ್ರಸ್ತಾವಿಸಿದರು.

2019ಕ್ಕೆ ಅಧಿಕಾರ ನೀಡಿ: ಮೋದಿ ಸರಕಾರ ಬಂದು ಆಗಲೇ ನಾಲ್ಕೂವರೆ ವರ್ಷಗಳಾಗಿವೆ. ಇದುವರೆಗೂ ರೈತರ ಪರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಅನಿಲ್‌ ಅಂಬಾನಿಯಂಂಥ ಉದ್ಯಮಿಗಳನ್ನು ಉಳಿಸಲು ಪ್ರಯತ್ನಿಸುತ್ತಿ ದ್ದಾರೆ. ಹೀಗಾಗಿ ನಿಜವಾಗಿ ನಾವು ಮತ್ತು ವಿಪಕ್ಷಗಳ ಸ್ನೇಹಿತರು ಸೇರಿ ರೈತರ ಪರವಾಗಿ ನಿಲ್ಲುತ್ತೇವೆ. 2019ಕ್ಕೆ ನಮಗೇ ಅಧಿಕಾರ ನೀಡಿ, ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರಾಹುಲ್‌ ಹೇಳಿದರು. ನಾವೆ ಲ್ಲರೂ ರೈತರ ಪರವಾಗಿದ್ದೇವೆ, ಯಾವುದೇ ಕಾರಣಕ್ಕೂ ರೈತರು ಅಂಜಬೇಕಾಗಿಲ್ಲ ಎಂದೂ ಅಭಯ ನೀಡಿದರು. 

ಟೈಪಿಂಗ್‌ ಎರರ್‌ಗಳ ಕಾಲ ಆರಂಭ: ರಫೇಲ್‌ ಡೀಲ್‌ಗೆ ಸಂಬಂಧ ಸುಪ್ರೀಂ ಕೋರ್ಟ್‌ಗೆ ಟೈಪಿಂಗ್‌ ಎರರ್‌ ಬಗ್ಗೆ ಕೇಂದ್ರ ಸರಕಾರ ಅಫಿದಾವಿತ್‌ ಸಲ್ಲಿಸಿದೆ. ರಫೇಲ್‌ ಯುದ್ಧ ವಿಮಾನಗಳ ದರ ವಿಚಾರವನ್ನು ಸಿಎಜಿ ಮತ್ತು ಪಿಎಸಿ ಜತೆ ಹಂಚಿಕೊಂಡಿರುವುದಾಗಿ ಸುಪ್ರೀಂಗೆ ದಾರಿ ತಪ್ಪಿಸಿ, ಬಳಿಕ ಇದು ಟೈಪಿಂಗ್‌ ಎರರ್‌ ಎಂದಿದೆ. ಇನ್ನು ಮುಂದೆ ಇಂಥ ಟೈಪಿಂಗ್‌ ಎರರ್‌ಗಳು ಹೆಚ್ಚಾಗಿಯೇ ಬರುತ್ತವೆ. ನೋಟು ಅಮಾನ್ಯ ಜಗತ್ತಿನ ಅತ್ಯಂತ ದೊಡ್ಡ ಹಗರಣ ಎಂದು ರಾಹುಲ್‌ ಬಣ್ಣಿಸಿದರು. 

Advertisement

ಅಸ್ಸಾಂನಲ್ಲಿ ರೈತರ 600 ಕೋಟಿ ರೂ. ಸಾಲ ಮನ್ನಾ 
ಗುವಾಹಟಿ:
ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರದ ಎನ್‌ಡಿಎ ಸರಕಾರ ಹೇಳುತ್ತಿದ್ದರೂ ಅತ್ತ ಈಶಾನ್ಯ ರಾಜ್ಯ ವಾದ ಅಸ್ಸಾಂನಲ್ಲಿ ಬಿಜೆಪಿ ಸರಕಾರವೇ 600 ಕೋಟಿ ರೂ. ವೆಚ್ಚದಲ್ಲಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಇದ ರಿಂದಾಗಿ ರಾಜ್ಯದ 8 ಲಕ್ಷ ರೈತರಿಗೆ ಅನುಕೂಲ  ಆಗಲಿದೆ. ಲೋಕಸಭೆ ಚುನಾವಣೆಗಾಗಿ ಈಗಲೇ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ರೈತರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದೆ. ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆ ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅತ್ತ ಒಡಿಶಾ ದಲ್ಲೂ ಬಿಜೆಪಿ ಸಾಲ ಮನ್ನಾ ಭರವಸೆ ನೀಡಿದೆ. 2019ರಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.

ಶೇ.50 ಕೃಷಿ ಸಾಲ ಮನ್ನಾಗೆ ಕರ್ನಾಟಕ ಒತ್ತಾಯ
ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಮತ್ತು ಸಹ ಕಾರ ಬ್ಯಾಂಕ್‌ಗಳಲ್ಲಿ ಇರುವ ರೈತರ ಶೇ. 50ರಷ್ಟು ಸಾಲ ವನ್ನು ಮನ್ನಾ ಮಾಡಿ ಎಂದು ಕರ್ನಾಟಕ ಸರಕಾರ, ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ರಾಜ್ಯ ಸಭೆಯಲ್ಲಿ ಲಿಖೀತ ಉತ್ತರ ನೀಡಿದ ಹಣಕಾಸು ಖಾತೆ ಸಹಾಯಕ ಸಚಿವ ಶಿವಪ್ರಕಾಶ್‌ ಶುಕ್ಲಾ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರಕಾರಗಳಿಂದ ಈ ಬಗ್ಗೆ ಮನವಿ ಬಂದಿದೆ ಎಂದರು. ಆದರೆ, ಕೇಂದ್ರ ಸರಕಾರದ ಮುಂದೆ ಯಾವುದೇ ಪ್ರಸ್ತಾವಗಳಿಲ್ಲ. ಸಾಲ ಮನ್ನಾ ಯೋಜನೆ ಕುರಿತಂತೆ 2008-09ರಲ್ಲಿ ಜಾರಿಗೆ ತಂದಿದ್ದ ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆಯು 2010ರಲ್ಲೇ ಅಂತ್ಯಗೊಂಡಿದೆ. ಮೂರು ವರ್ಷಗಳಲ್ಲಿ ಕೇಂದ್ರ ಸರಕಾರವೂ ಇಂಥ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು. 

ಗುಜರಾತ್‌ನಲ್ಲಿ ವಿದ್ಯುತ್‌ ಬಿಲ್‌ ಮನ್ನಾ
ಹೊಸದಾಗಿ ಬಂದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸರಕಾರಗಳು ಸಾಲ ಮನ್ನಾ ಮಾಡುತ್ತಿದ್ದಂತೆ, ಗುಜರಾತ್‌ನಲ್ಲಿರುವ ಬಿಜೆಪಿ ಸರಕಾರ ಗ್ರಾಮೀಣ ಪ್ರದೇಶದ 650 ಕೋಟಿ ರೂ. ಮೊತ್ತದ ವಿದ್ಯುತ್‌ ಬಿಲ್‌ ಅನ್ನೇ ಮನ್ನಾ ಮಾಡಿದೆ. ಈ ನಿರ್ಧಾರದಿಂದಾಗಿ 6.22 ಲಕ್ಷ ಕುಟುಂಬ ಗಳಿಗೆ ಅನುಕೂಲವಾಗಲಿದೆ. ಕೇವಲ ರೈತರಷ್ಟೇ ಅಲ್ಲ, ವಿದ್ಯುತ್‌ ಬಿಲ್‌ ಪಾವತಿಸದ ಮನೆಗಳು, ವಾಣಿಜ್ಯ ಘಟಕ ಗಳಿಗೂ ಇದು ಅನ್ವಯವಾಗಲಿದೆ ಎಂದು ಗುಜರಾತ್‌ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next