Advertisement

ಭೂಸ್ವಾಧೀನ ಕಾಯ್ದೆ ಜಾರಿಯಾದರೆ ಅನ್ಯಾಯ

07:47 AM Mar 03, 2019 | |

ತುಮಕೂರು: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿರುವ ಭೂಸ್ವಾಧೀನ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದರೆ ಅದು ರೈತರು, ಆದಿವಾಸಿಗಳು ಮತ್ತು ಕೃಷಿ ಕೂಲಿಕಾರರ ಪಾಲಿಗೆ ಮರಣ ಶಾಸನವಾಗಲಿದೆ. ಬ್ರಿಟಿಷರ ಶಾಸನದ ಮುಂದುವರಿದ ಭಾಗವಾಗುತ್ತದೆ ಎಂದು ಅಖೀಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಮುಖಂಡ ಎ.ಗೋವಿಂದರಾಜು ಆಪಾದಿಸಿದರು.

Advertisement

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖೀಲಿ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ರಾಜ್ಯ ಸರ್ಕಾರ ಅಂಗೀಕರಿಸಿರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಹಾಗೂ ಪಾರದರ್ಶಕತೆ ಹಕ್ಕು ವಿಧೇಯಕದ ಪ್ರತಿಯನ್ನು ದಹನ ಮಾಡಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಕೈಗಾರಿಕೆಗಳು, ಬಂಡವಾಳ ಶಾಹಿಗಳು ಮತ್ತು ಕಾರ್ಪೊರೆಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಕಾಯ್ದೆಯನ್ನು ತರಾತುರಿಯಲ್ಲಿ ಅಂಗೀಕರಿಸಿದೆ. 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಭೂಸ್ವಾಧೀನಪಡಿಸಿಕೊಳ್ಳಲು ರೈತರ 80ರಷ್ಟು ಒಪ್ಪಿಗೆ ಬೇಕಾಗಿತ್ತು. ಫ‌ಲವತ್ತಾದ ಮತ್ತು ನೀರಾವರಿ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ಚರ್ಚೆ ಇಲ್ಲದೇ ಅಂಗೀಕಾರ: ಎಐಕೆಎಸ್‌ಸಿಸಿ ಸಂಚಾಲಕ ಸಿ.ಯತಿರಾಜು ಮಾತನಾಡಿ, ಭೂಸ್ವಾಧೀನ ತಿದ್ದುಪಡಿಕಾಯ್ದೆಯನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿದೆ. ಈ ಕಾಯ್ದೆಯಿಂದ ರೈತರಿಗೆ ಸಿಗುತ್ತಿದ್ದ ಅಲ್ಪಸ್ವಲ್ಪ ಪರಿಹಾರವೂ ಸಿಗದಂತೆ ಮಾಡಲಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಅನ್ಯಾಯ ಮಾಡಿದೆ. ಭೂಸ್ವಾಧೀನ ಮಾಡಿಕೊಳ್ಳುವ ಸಂಬಂಧ ಇದ್ದ ಎಲ್ಲಾ ಮಾನದಂಡಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಭೂಮಿ ಕಬಳಿಸಲು ಸಂಚು: ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ಯಡಿಯೂರಪ್ಪ ಸಿ.ಡಿ. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಭೂಸ್ವಾಧೀನ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಈ ಕಾಯ್ದೆಯನ್ನು ತಂದು ರೈತರ ಭೂಮಿ ಕಬಳಿಸಲು ಸಂಚು ನಡೆಯುತ್ತಿದೆ. ಇದು ನಿಲ್ಲಬೇಕು. ಇದರ ಜೊತೆಗೆ ಬಗರ್‌ ಹುಕುಂ ಸಾಗುವಳಿದಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು.

Advertisement

ಇದು ರೈತರ ಜಮೀನುಗಳನ್ನು ಯಾವುದೇ ಒಪ್ಪಿಗೆಯಿಲ್ಲದೆ ಭೂಸ್ವಾಧೀನದಿಂದ ಸಮಾಜ ಹಾಗೂ ಪರಿಸರದ ಮೇಲಾಗುವ ದುಷ್ಪರಿಣಾಮಗನ್ನಾಗಲೀ ಮತ್ತು ದೇಶದ ರಾಜ್ಯದ ಆಹಾರ ಭದ್ರತೆ ಹಾಗೂ ಆಹಾರದ ಸ್ವಾವಲಂಬನೆಯ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಪರಿಗಣಿಸದೇ ಪುನರ್ವಸತಿ ಕ್ರಮಗಳನ್ನು ದುರ್ಬಲಗೊಳಿಸುವ ಹಾಗೂ ಬೇಕಾಬಿಟ್ಟಿ ದರಕ್ಕೆ ಸ್ವಾಧೀನ ಮಾಡುವ ದುರುದ್ದೇಶ ಹೊಂದಿದೆ ಎಂದು ದೂರಿದರು.

ದ್ರೋಹ: ಎಐಕೆಎಸ್‌ಸಿಸಿ ಕಾರ್ಯದರ್ಶಿ ಬಿ.ಉಮೇಶ್‌ ಮಾತನಾಡಿ, ರೈತರ ಸಮಸ್ಯೆ ಮತ್ತು ಸಂಕಷ್ಟುಗಳು ಗೊತ್ತು ಎಂದು ಹೇಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿವೇಶನದ ಕೊನೆಯ ದಿನ ರೈತರು, ಆದಿವಾಸಿಗಳು ಮತ್ತು ಕೃಷಿ ಕೂಲಿಕಾರರಿಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಐದು ರಾಜ್ಯಗಳಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಗತಿ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. 2019ರ ಲೋಕಸಭಾ ಚುನಾವಣೆ ಹತ್ತಿರವಿದೆ. ಇದನ್ನು ಮನಗಾಣಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿಲ್ಲ. ಜನರಿಗೆ ನಿವೇಶನ ಸಿಗುತ್ತಿಲ್ಲ. ರೈತರನ್ನು ಕತ್ತಲಲ್ಲಿಟ್ಟು ಅವರ ಹಕ್ಕುಗಳನ್ನು ಪರಿಹಾರಗಳನ್ನು ಕಸಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ರವೀಶ್‌, ಪಂಡಿತ್‌ ಜವಾಹರ್‌, ಸಿಪಿಎಂ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ಪ್ರಾಂತ ರೈತ ಸಂಘದ ಮುಖಂಡ ನೌಷಾದ್‌ ಸೆಹಗನ್‌, ಸಿದ್ದಪ್ಪ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next