ಹುಬ್ಬಳ್ಳಿ: ದೀಪ ದೀಪವಾಗಿ ಶಾಂತಿಯಿಂದ ಬೆಳಗಿದರೆ ಅದು ನಂದಾ ದೀಪವಾಗುತ್ತದೆ, ಅದೇ ದೀಪ ಬಿರುಗಾಳಿಗೆ ಸಿಲುಕಿ ಜ್ವಾಲೆಯಾಗಿ ಉರಿದರೆ ದೊಡ್ಡ ಅನಾಹುತವನ್ನೆ ಸೃಷ್ಟಿಸಬಹುದು ಎಂದು ಮೂರುಸಾವಿರಮಠದ ಜಗದ್ಗುರು ಡಾ|ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಮೂರು ಸಾವಿರಮಠದಲ್ಲಿ ಕಾರ್ತಿಕ ಸೋಮವಾರದಂದು ನಡೆದ ಕಾರ್ತಿಕ ದೀಪೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಜೀವನದಲ್ಲಿ ನಾವು ಬೆಳಗುವ ದೀಪ ಶಾಂತಿ, ಪ್ರೀತಿ, ಪ್ರೇಮದ ಸಂಕೇತವಾಗಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದರು. ಆಕಾಶದಲ್ಲಿ ಸೂರ್ಯ, ಚಂದ್ರರಷ್ಟೇ ಅಲ್ಲದೆ, ಲಕ್ಷಾಂತರ ನಕ್ಷತ್ರಗಳು ದಿನವಿಡಿ ಬೆಳಗುತ್ತವೆ ಆದರೆ ನಾವು ಕಾರ್ತಿಕ ಮಾಸದಲ್ಲಿ ಮಾತ್ರ ದೀಪ ಬೆಳಗುವ ಮೂಲಕ ಕಾರ್ತಿಕೋತ್ಸವ ಆಚರಿಸುತ್ತೇವೆ. ದಿನವಿಡಿ ಸೂರ್ಯ ಚಂದ್ರ, ನಕ್ಷತ್ರಗಳು ಬೆಳಗುವಂತೆ ಎಲ್ಲರೂ ದೀಪ ಬೆಳಗುವಂತಾಗಬೇಕು. ನಾವೆಲ್ಲರೂ ಸಾತ್ವಿಕ ಜ್ಞಾನಿಗಳಾಗಿ ಅತ್ಯಂತ ಸಹಕಾರ ಮನೋಭಾವದಿಂದ ಬಾಳಬೇಕು ಎಂದರು.
ಈ ದೀಪ ಬೆಳಗುವ ಕಾರ್ಯದಲ್ಲಿ ನಾವೆಲ್ಲರೂ ಕೇವಲ ದೀಪ ಬೆಳಗದೆ ಸಮಾಜದಲ್ಲಿ ಬೆಳೆಯುತ್ತಿರುವ ದೀಪಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಅದರಂತೆ ನಮ್ಮ ಮಹಾವಿದ್ಯಾಲಯದ ಮೂರು ರತ್ನಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕಸಾಪಾ ಜಿಲ್ಲಾಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಡಾ|ಲಿಂಗರಾಜ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಅದರೊಂದಿಗೆ ಮೂರನೇ ಬಾರಿಗೆ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎರಡೂ ಕಾರ್ಯಗಳಿಗೂ ಚ್ಯುತಿ ಬಾರದಂತೆ ಸೇವೆ ಸಲ್ಲಿಸುತ್ತೆನೆ ಎಂದರು. ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪಡೆದ ಸೌಜನ್ಯ ಕುಲಕರ್ಣಿ, ಸಂಗೀತದಲ್ಲಿ ಚಿನ್ನದ ಪದಕ ಪಡೆದ ಪಿ.ಕಾವ್ಯಾ, ಎಂಕಾಂನಲ್ಲಿ ಚಿನ್ನದ ಪದಕ ಪಡೆದ ಐಶ್ವರ್ಯ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಪ್ರಸಾದ ಅಬ್ಬಯ್ಯ, ಅರವಿಂದ ಕುಬಸದ, ಶಿವು ಮೆಣಸಿನಕಾಯಿ, ನಿರಂಜನ ಹಿರೇಮಠ, ವೀರೇಶ ಸಂಗಳದ, ಪ್ರಸಾದ ಹೊಂಬಳ, ಚನ್ನಬಸಪ್ಪ ಧಾರವಾಡಶೆಟ್ರ, ಮಲ್ಲಿಕಾರ್ಜುನ ಕಳಸರಾಯ, ಗಂಗಾಧರ ಮೆಹರವಾಡೆ, ಪಂಚಾಕ್ಷರಯ್ಯ ಹಿರೇಮಠ, ಗುರುಶಿದ್ದ ಶೆಲ್ಲಿಕೇರಿ, ಸಿದ್ದು ಅಂಕಲಕೋಟೆ, ಬಸಯ್ಯ ಹಡಗಲಿಮಠ, ಎಚ್.ಐ.ಆಂಗಡಿ ಇನ್ನಿತರಿದ್ದರು. ಎಸ್‌ಜೆಎಂವಿಎಸ್ ಮಹಾವಿದ್ಯಾಲಯದ ಸ್ನಾತ್ತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ|ಗುರುರಾಜ ನವಲಗುಂದ ಸ್ವಾಗತಿಸಿದರು. ಉಪನ್ಯಾಸಕ ಜಿ.ವಿ.ಭದ್ರಾಪುರ ಪ್ರಾಸ್ತಾವಿಕ ಮಾತನಾಡಿದರು. ಸಹ ಪ್ರಾಧ್ಯಾಪಕಿ ಡಾ|ಸುಪ್ರಿಯಾ ಮಲಶೆಟ್ಟಿ ನಿರೂಪಿಸಿ, ವಂದಿಸಿದರು.