ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಲ್ಲಿ ಬಿಟ್ಟು ಹೋಗಿರುವ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕುಗಳ ಕೆರೆಗಳಿಗೆ ನೀರು ಭರ್ತಿ ಮಾಡಲು ಎರಡನೇ ಹಂತದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಡಾ| ಶಿವಮೂರ್ತಿ ಮುರುಘಾ ಶರಣರು ನಗರದ ಕನಕ ವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೇಗಿಲ ಚಿತ್ರವನ್ನೊಳಗೊಂಡಿದ್ದ ಹಸಿರು ಬಾವುಟ ಹಾರಿಸುವುದರ ಮುಖಾಂತರ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.
ಕನಕ ವೃತ್ತದಿಂದ ಪಾದಯಾತ್ರೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‌ಬಿಎಂ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಜಿಲ್ಲಾಧಿಕಾರಿಗಳ ವೃತ್ತಕ್ಕೆ ಆಗಮಿಸಿದ ಸಾವಿರಾರು ರೈತರು, ಭದ್ರಾ ಮೇಲ್ದಂಡೆ ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕಿನಲ್ಲಿ ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕಿನ ಕೆಲವು ಕೆರೆಗಳಿಗೆ ಯಾವುದೇ ಯೋಜನೆಯಲ್ಲಿ ನೀರು ಹರಿಯುತ್ತಿಲ್ಲ. ರಾಜ್ಯ ಸರ್ಕಾರ ಎರಡನೇ ಹಂತದ ಸಾಸ್ವೆಹಳ್ಳಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಬಿಟ್ಟು ಹೋಗಿರುವ ಕೆರೆಗಳಾದ ತಾಳ್ಯ, ಶಿವಗಂಗ, ಅನ್ನೇಹಾಳ್, ಹುಲ್ಲೂರು, ಮಾನಂಗಿ, ತಿಮ್ಮಣ್ಣನಾಯಕನ ಕೆರೆ, ಸಿದ್ದಾಪುರ, ನಂದಿಪುರ, ಎಚ್.ಡಿ. ಪುರ, ಕೆರೆಯಾಗಳಹಳ್ಳಿ, ತೇಕಲವಟ್ಟಿ, ಗುಡಿಕೆರೆ, ಚಿಕ್ಕಪುರ ಹಾಗೂ ಮಠದ ಹಟ್ಟಿ ಕೆರೆಗಳಿಗೆ ನೀರು ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ತೆರೆದ ಬಾವಿಗಳು, ಕೊಳವೆಬಾವಿಗಳು ಬತ್ತಿ ಹೋಗಿದೆ. ಇಂತಹ ಸಂದರ್ಭದಲ್ಲಿ ಜನರು ಸ್ವಇಚ್ಛೆಯಿಂದ ಸ್ವಾಮೀಜಿಯವರನ್ನು ಕರೆ ತಂದು ಹೋರಾಟಕ್ಕೆ ಇಳಿದಿದ್ದಾರೆ. ಜನರು ಮತ್ತು ಸ್ವಾಮೀಜಿಗಳು ಹೋರಾಟ ಮಾಡಿದರೆ ಸರ್ಕಾರವೇ ನಮ್ಮ ಬಳಿ ಬರುತ್ತದೆ. ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಸರ್ಕಾರ ನಮ್ಮ ಬಳಿ ಬಂತು ಎಂದು ನೆನಪಿಸಿಕೊಂಡರು.
ವಾಣಿವಿಲಾಸ ಸಾಗರಕ್ಕೆ ನೀರು ಬರಬೇಕು. ಸಚಿವ ವೆಂಕಟರಮಣಪ್ಪ ಇದೇ ತಿಂಗಳ 31ರೊಳಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಆದರೆ ಅವರ ಸರ್ಕಾರ ಉಳಿಯುವುದೇ ಅನುಮಾನ. ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಬಳಿ ನಿಯೋಗ ತೆರಳಿ ಬಿಟ್ಟು ಹೋಗಿರುವ ಎಲ್ಲ ಕೆರೆಗಳಿಗೆ ನೀರು ಹಾಯಿಸಲು ಮನವಿ ಮಾಡಲಾಗುವುದು. ಅಲ್ಲದೆ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ.ಶಂಕರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಸಿದ್ದಲಿಂಗಪ್ಪ, ಜ್ಯೋತಿ ಪ್ರಕಾಶ್, ಕೆ.ಜಿ. ಭೀಮಾರೆಡ್ಡಿ, ಬಸವಂತಪ್ಪ, ಕಾಂಗ್ರೆಸ್ ಮುಖಂಡರಾದ ಹನುಮಲಿ ಷಣ್ಮುಖಪ್ಪ, ಭೀಮಸಮುದ್ರದ ಜಿ.ಎಸ್. ಮಂಜುನಾಥ್, ಜಿ. ಶ್ರೀನಿವಾಸ್, ವಿ. ನವೀನ್‌ಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಸಿ.ಆರ್. ತಿಮ್ಮಣ್ಣ, ಎಂ.ಬಿ. ತಿಪ್ಪೇಸ್ವಾಮಿ, ಪ್ರವೀಣ್‌ಕುಮಾರ್, ಸಿದ್ದಮ್ಮ ಕುರ್ಕಿ, ಧನಂಜಯ, ಕೆಂಚಯಲ್ಲಪ್ಪ, ಸಜ್ಜನಕೆರೆ ರೇವಣ್ಣ, ಸಿದ್ದೇಶ್ ಜಾನಕೊಂಡ, ಲತಮ್ಮ ಸೇರಿದಂತೆ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳ ರೈತರು ಪಾಲ್ಗೊಂಡಿದ್ದರು.