ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಕೃಷ್ಣರಾಜಸಾಗರದ ನೀರಿನ ಮಟ್ಟ 96 ಅಡಿ ತಲುಪುವವರೆಗೆ ನಾಲೆಗಳಿಗೆ ನೀರು ಹರಿಸ ಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾಹಿತಿ ನೀಡಿದರು. ಮಂಗಳವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಚಟುವಟಿಕೆಗಳ ಪ್ರಗತಿ ಕುರಿತ ವಿಷಯದ ಚರ್ಚೆ ವೇಳೆ ತಿಳಿಸಿದರು.
ಮಳೆ ಕೊರತೆ ಆಗಿದೆ:ಇದಕ್ಕೂ ಮುನ್ನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶೇ.16ರಷ್ಟು ಮಳೆ ಕೊರತೆ ಇದೆ. ವಾಡಿಕೆ ಮಳೆ 233 ಮಿ.ಮೀ. ಇದ್ದು, 195 ಮಿ.ಮೀ. ಮಳೆಯಾಗಿದೆ. ಶೇ.6.9ರಷ್ಟು ಮಾತ್ರ ವಿವಿಧ ಬೆಳೆಗಳ ಬಿತ್ತನೆ ನಡೆದಿದೆ. ಜೂನ್‌ನಿಂದ ಜುಲೈವರೆಗೆ ರಾಗಿ ಬಿತ್ತನೆಗೆ ಅವಕಾಶವಿದೆ. ಜುಲೈನಿಂದ ಆಗಸ್ಟ್‌ವರೆಗೆ ಭತ್ತ ಹಾಗೂ ಜುಲೈ ಅಂತ್ಯದವರೆಗೆ ಹುರಳಿ ಬಿತ್ತನೆಗೆ ಅವಕಾಶವಿದೆ. ಅಲಸಂದೆ ಬೆಳೆ ಬಿತ್ತನೆ ಅವಧಿ ಮುಗಿದಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ರೈತರನ್ನು ಪ್ರೇರೇಪಿಸಿ:ಜಿಲ್ಲೆಯಲ್ಲಿ ಈವರೆಗೆ ಒಂದು ಹೆಕ್ಟೇರ್ ಪ್ರದೇಶದಲ್ಲೂ ಭತ್ತ ಬಿತ್ತನೆ ಆಗಿಲ್ಲ. ಆಗಸ್ಟ್ ಅಂತ್ಯದವರೆಗೆ ಮಳೆಯಾಗದಿದ್ದರೆ ಭತ್ತ ಬಿತ್ತನೆ ಮಾಡುವುದಕ್ಕೆ ಅವಕಾಶ ಸಿಗಲ್ಲ. ಆ ವೇಳೆ ಜಿಲ್ಲೆಯಲ್ಲಿ ಬೀಳಬಹುದಾದ ಮಳೆ, ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಪ್ರಮಾಣ ನೋಡಿ ಕೊಂಡು ಅಲ್ಪಾವಧಿ ಬೆಳೆ ಬೆಳೆಯುವಂತೆ ರೈತರಿಗೆ ಸೂಚಿಸಬೇಕಾಗುತ್ತದೆ ಎಂದು ಹೇಳಿದರು. ಬಿತ್ತನೆ ಪರಿಸ್ಥಿತಿ ಅರಿತುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಇದೇ ಪರಿಸ್ಥಿತಿ ಜಿಲ್ಲೆಯಲ್ಲಿ ಮುಂದುವರಿದಲ್ಲಿ ಅಲ್ಪಾವಧಿ ಬೆಳೆ ಬೆಳೆಯುವುದಕ್ಕೆ ರೈತರನ್ನು ಪ್ರೇರೇಪಿಸುವಂತೆ ಸಲಹೆ ನೀಡಿದರು.
ತೋಟಗಾರಿಕೆ ಬೆಳೆ ನಷ್ಟ ಕುರಿತು ಇಲಾಖೆ ಉಪ ನಿರ್ದೇಶಕ ರಾಜು ಮಾಹಿತಿ ನೀಡಿ, ಕಳೆದ ಏಪ್ರಿಲ್-ಮೇ ನಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ 118.14 ಹೆಕ್ಟೇರ್‌ನಲ್ಲಿದ್ದ ಹಣ್ಣು-ತರಕಾರಿ ಬೆಳೆಗಳು ಹಾನಿಗೊಳಗಾಗಿದೆ. ನಷ್ಟಕ್ಕೊಳಗಾದ ರೈತರಿಗೆ 11 ಲಕ್ಷ ರೂ. ಪರಿಹಾರ ವಿತರಿಸಲಾಗಿದ್ದು, 8 ಲಕ್ಷ ರೂ. ಹಣವನ್ನು ಶೀಘ್ರ ಪಾವತಿಸಲಾಗುವುದು ಎಂದರು. ಜಿಲ್ಲೆಯಲ್ಲಿ 67 ಸಾವಿರ ತೆಂಗಿನಮರ ಹಾನಿಗೊಳಗಾಗಿದೆ. ಎಲ್ಲರಿಗೂ ಪರಿಹಾರ ವಿತರಿಸಲಾಗಿದ್ದು, 1,400 ಮರಗಳಿಗೆ ಮಾತ್ರ ಪರಿಹಾರ ವಿತರಿಸಬೇಕಿದೆ ಎಂದು ನುಡಿದರು. ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿಗ್ವಿಜಯ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಇದ್ದರು.
Advertisement
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿರುವ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಗೆ ನೀರು ಬಿಡುಗಡೆ ಮಾಡುವ ಅಧಿಕಾರವಿಲ್ಲ. ಬೆಳೆಗಳಿಗೆ ನೀರು ಹರಿಸಬೇಕಾದರೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 96 ಅಡಿ ತಲುಪಬೇಕು. ಆನಂತರ 10 ದಿನಗಳಿಗೊಮ್ಮೆ ನೀರು ಸಂಗ್ರಹದ ಮಾಹಿತಿಯನ್ನು ಪ್ರಾಧಿಕಾರದ ಮುಂದಿಟ್ಟು ಬೆಳೆಗಳಿಗೆ ಅಗತ್ಯವಿರುವ ನೀರನ್ನು ಬಿಡುಗಡೆ ಮಾಡಿಸಿಕೊಳ್ಳಬೇಕು. ಅಷ್ಟರಲ್ಲಿ ನಿರೀಕ್ಷೆಯಂತೆ ಮಳೆ ಬಂದರೆ ಕಡಿಮೆ ನೀರು, ಮಳೆಯಾಗದಿದ್ದಲ್ಲಿ ಹೆಚ್ಚಿನ ಬೇಡಿಕೆ ಇಡಬೇಕಾಗುತ್ತದೆ ಎಂದು ತಿಳಿಸಿದರು.
Related Articles
ರೈತರ ಬೆಳೆಗಳ ರಕ್ಷಣೆ ಬಗ್ಗೆ ಚರ್ಚೆಯೇ ನಡೆದಿಲ್ಲ:
ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಮಾಡುವ ಕುರಿತಂತೆ ಯಾರೊಬ್ಬರೂ ಚಕಾರ ಎತ್ತದಿರುವುದು. ಈ ಹಿಂದೆ ಕಡಿಮೆ ನೀರು ಸಂಗ್ರಹವಾಗಿದ್ದ ಸಮಯದಲ್ಲಿ ಬೆಳೆಗಳಿಗೆ ನೀರು ಹರಿಸಿರುವ ಬಗ್ಗೆ ಅವಲೋಕನ ಮಾಡಿ ಬೆಳೆಗಳ ರಕ್ಷಣೆಗೆ ತುರ್ತು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳು ಆಸಕ್ತಿಯನ್ನೇ ತೋರದಿರುವುದು ವಿಪರ್ಯಾಸದ ಸಂಗತಿ. ನೀರಿನ ಅಭಾವದಿಂದ ಬೆಳೆದುನಿಂತಿರುವ ಬೆಳೆಗಳು ಒಣಗುತ್ತಿವೆ. ರೈತರು ನಿತ್ಯವೂ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನೂರಾರು ಕೋಟಿ ರೂ. ಮೌಲ್ಯದ ಬೆಳೆಗಳು ಒಣಗುತ್ತಿದ್ದರೂ ರಕ್ಷಣಾ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಬ್ಬರೂ ದನಿ ಎತ್ತಲೇ ಇಲ್ಲ. ಕೆಆರ್‌ಎಸ್‌ನಲ್ಲಿ 96 ಅಡಿ ನೀರು ಸಂಗ್ರಹವಾಗುವವರೆಗೆ ನೀರು ಬಿಡಲಾಗದು ಎಂದಷ್ಟೇ ಹೇಳಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತು ಮುಗಿಸಿದರೇ ವಿನಹಃ ಈ ಹಿಂದೆ ಕಡಿಮೆ ನೀರು ಸಂಗ್ರಹವಿದ್ದ ವೇಳೆ ಬೆಳೆ ರಕ್ಷಣೆಗೆ ವಹಿಸಿದ್ದ ಕ್ರಮಗಳೇನು. ವಾಸ್ತವ ಪರಿಸ್ಥಿತಿಯನ್ನು ಮುಂದಿಟ್ಟು ಬೆಳೆಗಳಿಗೆ ನೀರು ಕೇಳುವುದಕ್ಕೆ ಅವಕಾಶವಿದೆಯೇ, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯಸರ್ಕಾರದ ಮೂಲಕ ಪ್ರಾಧಿಕಾರಕ್ಕೆ ಸಲ್ಲಿಸುವ ಕಿಂಚಿತ್ ಪ್ರಯತ್ನಕ್ಕೂ ಮುಂದಾಗದೆ ಅಧಿಕಾರಿಗಳು ಆ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ತೇಲಿಸಿಬಿಟ್ಟದ್ದು ರೈತರ ದುರ್ದೈವವೂ ಹೌದು.
Advertisement