ತಿ.ನರಸೀಪುರ: ಜಲಪ್ರವಾಹದಿಂದ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ 1.20 ಲಕ್ಷ ರೂ. ವೆಚ್ಚದ ವಸತಿ ಯೋಜನೆಯನ್ನು ಪರಿಹಾರವಾಗಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಹೇಳಿದರು.
ಅವರು ಪಟ್ಟಣದ ಹಳೇ ತಿರುಮಕೂಡಲು ಹಾಗೂ ತಾಲೂಕಿನ ಮಾಲಂಗಿ ಗ್ರಾಮದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವಿಧಾನ ಪರಿಷತ್ ಸದಸ್ಯ ಡಾ| ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಪರಿಶೀಲಿಸಿ ಮಾತನಾಡಿದರು.
ಪ್ರವಾಹದಿಂದ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಜನರು ತೊಂದರೆ ಸಿಲುಕಿದ್ದು, ಕಾಳಜಿ ಕೇಂದ್ರಗಳನ್ನು ತೆರೆದು ಮೂಲಸೌಕರ್ಯ ಕಲ್ಪಿಸಲಾಗಿದೆ. 254ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ತಾತ್ಕಾಲಿಕ ದುರಸ್ತಿಗೆ 6,500 ರೂ.ಗಳ ಪರಿಹಾರ ನೀಡಲಾಗಿದೆ.
ರೈತರ ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಅಧಿಕಾರಿಗಳಿಂದ ವರದಿ ಪಡೆದು ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದರು.