Advertisement
ಪಟ್ಟಣದ ಕವಿತಾಳ ರಸ್ತೆಯ ಚಿಕ್ಕ ಸವದತ್ತಿ ಯಲ್ಲಮ್ಮ ದೇವಸ್ಥಾನ ಮುಂಭಾಗದ ಸರ್ವೇ ನಂ.171ರಲ್ಲಿ ನಿವೇಶನ ಪಡೆದ 179 ಫಲಾನುಭವಿಗಳಿಗೆ ಈಗ ಇಂತಹ ಫಜೀತಿ ಎದುರಾಗಿದೆ.
Related Articles
Advertisement
ನಿವೇಶನ ಮತ್ತು ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ 5 ಎಕರೆ ಜಮೀನು ಖರೀದಿಸಿ ನಿವೇಶನ ರಹಿತ ಫಲಾನುಭವಿಗಳಿಗೆ 2019-20ರಲ್ಲಿ ಹಂಚಿಕೆ ಮಾಡಲಾಗಿತ್ತು. ಇಲ್ಲಿನ ನಿವೇಶನಗಳ ಹಕ್ಕುಪತ್ರವನ್ನೂ ಫಲಾನುಭವಿಗಳಿಗೆ ವಿತರಿಸಲಾಗಿತ್ತು. ವಸತಿ ಯೋಜನೆ ನಿಯಮದಂತೆ ನಿವೇಶನ ಪಡೆದ ಫಲಾನುಭವಿಗಳು ವರ್ಷದಲ್ಲಿ ಮನೆ ಕಟ್ಟಿಕೊಂಡು ಕೇಂದ್ರ ಸರ್ಕಾರದ ಸಹಾಯಧನ 1.50 ಲಕ್ಷ ಪಡೆಯಬೇಕು. ಆದರೆ, ನಿವೇಶನ ಪಡೆದವರು ವರ್ಷ ಕಳೆದರೂ ಮನೆ ಕಟ್ಟಿಕೊಂಡಿಲ್ಲ. ಈ ಬಗ್ಗೆ ಹಲವು ಬಾರಿ ಫಲಾನುಭವಿಗಳಿಗೆ ಪುರಸಭೆಯಿಂದ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಫಲಾನುಭವಿಗಳನ್ನೇ ರದ್ದುಪಡಿಸುವ ಕಾರ್ಯಕ್ಕೆ ಕೈ ಹಾಕಲಾಗಿದೆ.
ಒಂದು ವಾರ ಗಡುವು
ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ ನಿವೇಶನ ಪಡೆದ ಫಲಾನುಭವಿಗಳು ತಮಗೆ ನೀಡಲಾದ ನಿವೇಶನಗಳಲ್ಲಿ ಒಂದು ವಾರದಲ್ಲಿ ಮನೆ ಕಾಮಗಾರಿ ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಮನೆ ಕಾಮಗಾರಿ ಆರಂಭಿಸದಿದ್ದರೆ ನಿವೇಶನ ರದ್ದುಪಡಿಸಲಾಗುವುದು ಎಂದು ನೋಟಿಸ್‌ನಲ್ಲಿ ಪ್ರಸ್ತಾಪಿಸಿದೆ. ಅಲ್ಲದೇ ಫಲಾನುಭವಿಗಳು ವಾರದಲ್ಲಿ ಮನೆ ಕಟ್ಟಡ ಆರಂಭಿಸಿ ಎರಡು ತಿಂಗಳೊಳಗಾಗಿ ಕಟ್ಟಡ ಪೂರ್ಣಗೊಳಿಸಬೇಕು. ಒಂದು ವೇಳೆ ಕಟ್ಟಡ ಕಟ್ಟಿಕೊಳ್ಳದೇ ಇದ್ದವರನ್ನು ರದ್ದು ಮಾಡಿ ಹೊಸಬರ ಆಯ್ಕೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ತಿಳಿಸಿದ್ದಾರೆ.
ಸೌಲಭ್ಯಗಳೇ ಇಲ್ಲ
ಪಟ್ಟಣದ ಕವಿತಾಳ ರಸ್ತೆಯ ಚಿಕ್ಕ ಸವದತ್ತಿ ಯಲ್ಲಮ್ಮ ದೇವಸ್ಥಾನ ಮುಂಭಾಗದ ಸರ್ವೇ ನಂ. 171ರಲ್ಲಿ ನಿವೇಶನ ಹಂಚಿಕೆಯಾದ ಲೇಔಟ್‌ನಲ್ಲಿ ಇದುವರೆಗೂ ಮೂಲ ಸೌಕರ್ಯಗಳ ಅಭಿವೃದ್ಧಿಯೇ ಇಲ್ಲ. ಕುಡಿವ ನೀರು, ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆ ಕೂಡ ಇಲ್ಲ. ಇಂತಹ ಅವ್ಯವಸ್ಥೆಯಲ್ಲಿ ಮನೆ ಹೇಗೆ ಕಟ್ಟಿಕೊಳ್ಳಬೇಕು? ಎನ್ನುವುದು ಫಲಾನುಭವಿಗಳ ಪ್ರಶ್ನೆ.
ನಿವೇಶನ ಪಡೆದವರಿಗೆ ಈಗಾಗಲೇ ಸಾಕಷ್ಟು ನೋಟಿಸ್ ನೀಡಲಾಗಿದೆ. ಇದೀಗ ಕೊನೆ ನೋಟಿಸ್ ನೀಡಲಾಗುತ್ತಿದ್ದು ಒಂದೆರಡು ದಿನಗಳಲ್ಲಿ ಫಲಾನುಭವಿಗಳ ಸಭೆ ಕರೆದು ಮನೆ ಕಟ್ಟಿಸಿಕೊಳ್ಳಲು ಸೂಚಿಸಲಾಗುವುದು. ಸ್ಪಂದಿಸದಿದ್ದರೆ ಹಕ್ಕುಪತ್ರ ರದ್ದುಪಡಿಸುತ್ತೇವೆ. -ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ, ಪುರಸಭೆ
-ಮಲ್ಲಿಕಾರ್ಜುನ ಚಿಲ್ಕರಾಗಿ