ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳೆಲ್ಲ ಬಿಜೆಪಿ ನಾಯಕರ ಸೃಷ್ಟಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, “ಹೈಕಮಾಂಡ್ ಬಯಸಿದರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ್‌ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. “ಮೈತ್ರಿ ಸರ್ಕಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದ ಮೇರೆಗೆ ಅಸ್ತಿತ್ವಕ್ಕೆ ಬಂದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ, ಅನಗತ್ಯವಾಗಿ ಹಿಂಸೆ ನೀಡಲಾಗುತ್ತಿದೆ. ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ದೇವರನ್ನು ಬಿಟ್ಟು ಯಾರಿಗೂ ಹೆದರುವುದಿಲ್ಲ. ದೇವರೇ ನ್ಯಾಯ ಕೊಡುತ್ತಾನೆ ಎನ್ನುವ ವಿಶ್ವಾಸವಿದೆ. ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಒಂದು ವೇಳೆ ಹೈಕಮಾಂಡ್ ಸೂಚಿಸಿದರೆ ಸಿಎಂ ಆಗಲು ತಯಾರಿದ್ದೇನೆ’ ಎಂದರು.
ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಆಪರೇಷನ್ ಕಮಲದ ಹೆಸರಲ್ಲಿ ಬಿ.ಸಿ.ಪಾಟೀಲ, ರಹೀಮ್ ಸೇರಿದಂತೆ 15ರಿಂದ 16 ಶಾಸಕರನ್ನು ಸಂಪರ್ಕಿಸಿದ್ದಾರೆ. ಆದರೂ, ಅವರ ಬೇಳೆ ಬೇಯುತ್ತಿಲ್ಲ ಎಂದು ಗೊತ್ತಾಗಿ ಸುಮ್ಮನಿದ್ದಾರೆ. ಸುಮ್ಮನೆ ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅರ್ಜೆಂಟ್ ಆಗಿ ಹೋದ್ರೆ ಅಪಘಾತವಾಗುವ ಸಾಧ್ಯತೆ ಇದೆ. ಹೀಗಾಗಿ, ಸಮ್ಮಿಶ್ರ ಸರ್ಕಾರ ನಿಧಾನವಾಗಿ ಹೋಗ್ತಿದೆ ಎಂದರು.
ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಹೈದ್ರಾಬಾದ್‌ಗೆ ವಿಮಾನದ ಮೂಲಕ ಆಗಮಿಸಿ ನಂತರ ರಸ್ತೆ ಮೂಲಕ ಅವರು ಕಲಬುರಗಿಗೆ ಆಗಮಿಸಿದರು. ಅಲ್ಲಿಂದ ದೇವಲಗಾಣಗಾಪುರ ದತ್ತನ ಸ್ವರ್ಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಕೈಗೊಂಡರು. ಜಾಮೀನು ದೊರೆತರೆ ದತ್ತಾತ್ರೇಯ ದೇವರಿಗೆ ಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದರು. ಹೀಗಾಗಿ ಭಾನುವಾರ ಪೂಜೆ ಸಲ್ಲಿಸಿದರು.
ಇಂದು ಸಿಎಂ ದರ್ಶನ
ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇವಲಗಾಣಗಾಪುರ ದತ್ತಾತ್ರೇಯ ದರ್ಶನ ಪಡೆಯಲು ಸೋಮವಾರ ಆಗಮಿಸಲಿದ್ದಾರೆ. ಸೋಮವಾರ ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಗರದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ತದನಂತರ ದೇವಲಗಾಣಗಾಪುರಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.