Advertisement

Tooth Health: ಹಲ್ಲಿನ ಆರೋಗ್ಯ ಕೆಟ್ಟರೆ ಮೆದುಳು ಮುದುಡಬಲ್ಲುದು

11:00 AM Nov 20, 2023 | Team Udayavani |

ವಸಡಿನ ಕಾಯಿಲೆಗಳು ಮತ್ತು ಮೆದುಳು ಮುದುಡುವುದರ ನಡುವೆ ಸಂಬಂಧ ಇದೆ ಎಂದು ಜಪಾನಿನ ವಿಜ್ಞಾನಿಗಳು ಇತ್ತೀಚೆಗೆ ಕಂಡುಕೊಂಡಿದ್ದಾರೆ.

Advertisement

ವಸಡು ಕಾಯಿಲೆಯಿಂದಾಗಿ ಒಂದು ಹಲ್ಲನ್ನು ಕಳೆದುಕೊಂಡರೆ ಮೆದುಳಿನ ಹಿಪೊಕ್ಯಾಂಪಸ್‌ ಭಾಗದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಇದರಿಂದ ಹಿಪೊಕ್ಯಾಂಪಸ್‌ ಒಂದು ವರ್ಷ ವಯಸ್ಸಾದಾಗ ಆಗುವಷ್ಟು ಸಂಕುಚನಗೊಳ್ಳುತ್ತದೆ ಎಂಬುದಾಗಿ ಈ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಕಂಡುಹಿಡಿಯಲಾಗಿದೆ. ಹಿಪೊಕ್ಯಾಂಪಸ್‌ ಭಾಗವು ಸಂಕುಚನಗೊಂಡರೆ ಸ್ಮರಣ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ, ಅಲ್ಜೀಮರ್ಸ್‌ ಕಾಯಿಲೆ ತಲೆದೋರಬಹುದಾಗಿದೆ.

ವಸಡು ಕಾಯಿಲೆ ಉಂಟಾಗಲು ಸರಿಯಾಗಿ ಹಲ್ಲುಜ್ಜದೆ ಇರುವುದು ಪ್ರಮುಖ ಕಾರಣವಾಗಿದೆ.

ತೀವ್ರ ತರಹವಾದ ವಸಡಿನ ಕಾಯಿಲೆ ಹೊಂದಿರುವ ಹಲ್ಲನ್ನು ಹಾಗೆಯà ಉಳಿಸಿಕೊಳ್ಳುವುದಕ್ಕೂ ಮೆದುಳಿನ ಅಟ್ರೊಫಿಗೂ ನಿಕಟ ಸಂಬಂಧವಿದೆ ಎಂಬುದನ್ನು ನಾವು ನಡೆಸಿರುವ ಸಂಶೋಧನೆ ಸಾಬೀತುಪಡಿಸಿದೆ ಎಂಬುದಾಗಿ ಜಪಾನಿನ ಸೆಂದೈ ಎಂಬಲ್ಲಿರುವ ತೊಹೊಕು ವಿಶ್ವವಿದ್ಯಾನಿಲಯದ ಡಾ| ಸತೋಷಿ ಯಾಮಾಗುಚಿ ಹೇಳಿದ್ದಾರೆ.

ಹಲ್ಲನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂಬುದಕ್ಕಿರುವ ಪ್ರಾಮುಖ್ಯವನ್ನು ನಾವು ನಡೆಸಿರುವ ಸಂಶೋಧನೆಗಳು ಒತ್ತಿಹೇಳಿವೆ ಎಂದು ಅವರು ತಿಳಿಸಿದ್ದಾರೆ.

Advertisement

ಹಲ್ಲಿನ ಸುತ್ತಲಿನ ಅಂಗಾಂಶಗಳು ಉರಿಯೂತಕ್ಕೀಡಾಗುವ ಮೂಲಕ ವಸಡು ಮುದುಡಿ ಹಲ್ಲುಗಳು ಸಡಿಲಗೊಳ್ಳುವುದಕ್ಕೆ ಕಾರಣವಾಗುವ ವಸಡಿನ ಕಾಯಿಲೆ ಮತ್ತು ಅದರಿಂದ ಹಲ್ಲು ನಷ್ಟವಾಗುವುದು ತೀರಾ ಸಾಮಾನ್ಯ. ಹೀಗಾಗಿ ಡಿಮೆನ್ಶಿಯಾಕ್ಕೂ ವಸಡಿನ ಕಾಯಿಲೆಗಳಿಗೂ ಇರುವ ಸಂಭಾವ್ಯ ಸಂಬಂಧದ ಬಗ್ಗೆ ತಪಾಸಣೆ ನಡೆಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೆದುಳಿನ ಎಡ ಹಿಪೊಕ್ಯಾಂಪಸ್‌ ಭಾಗದಲ್ಲಿ ಉಂಟಾಗುವ ಬದಲಾವಣೆಗಳಿಗೂ ಅಲ್ಜೀಮರ್ಸ್‌ ಕಾಯಿಲೆಗೂ ಸಂಬಂಧವಿದೆ. ವಸಡಿನ ಕಾಯಿಲೆಯ ಪ್ರಮಾಣ ಮತ್ತು ನಷ್ಟವಾದ ಹಲ್ಲುಗಳ ಸಂಖ್ಯೆಗೂ ಎಡ ಹಿಪೊಕ್ಯಾಂಪಸ್‌ಗೂ ಸಂಬಂಧ ಇರುವುದನ್ನು ಜಪಾನಿನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಡಿಮೆನ್ಶಿಯಾದ ಅತೀ ಸಾಮಾನ್ಯ ರೂಪವಾಗಿರುವ ಅಲ್ಜೀಮರ್ಸ್‌ ಕಾಯಿಲೆಯು ವ್ಯಕ್ತಿಯ ಚಲನ ಶಕ್ತಿ, ಇಂದ್ರಿಯ ಗ್ರಹಣ ಸಾಮರ್ಥ್ಯ, ಸ್ಮರಣಶಕ್ತಿ, ವರ್ತನೆಗಳನ್ನು ಬಾಧಿಸುತ್ತದೆ. ಇದರಿಂದ ದೈನಿಕ ಚಟುವಟಿಕೆಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತದೆ, ಸ್ವಾವಲಂಬನೆ ತಪ್ಪುತ್ತದೆ. ಇದರಿಂದಾಗಿ ಗೊಂದಲ, ಹತಾಶೆ, ಉದ್ವಿಗ್ನತೆ ಉಂಟಾಗುತ್ತದೆ, ವ್ಯಕ್ತಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾನೆ.

ಆಲೋಚನೆ ಮತ್ತು ಸ್ಮರಣ ಶಕ್ತಿಗಳನ್ನು ನಿಯಂತ್ರಿಸುವ ಮೆದುಳಿನ ಭಾಗಗಳ ಆರೋಗ್ಯದ ಮೇಲೆ ವಸಡು ಮತ್ತು ಹಲ್ಲಿನ ಆರೋಗ್ಯಗಳು ಪ್ರಭಾವ ಬೀರಬಲ್ಲವಾಗಿವೆ; ಜನರು ತಮ್ಮ ಹಲ್ಲುಗಳು ಮತ್ತು ವಸಡಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಇದೂ ಒಂದು ಕಾರಣ ಎಂಬುದಾಗಿ ಡಾ| ಯಾಮಾಗುಚಿ ಪ್ರತಿಪಾದಿಸಿದ್ದಾರೆ.

-ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಎಂಸಿಒಡಿಎಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next