Advertisement

ಗನ್‌ ಹಿಡಿದರೆ ನಿರ್ಮೂಲನೆ ಶತಃಸಿದ್ಧ

12:30 AM Feb 20, 2019 | |

ಹೊಸದಿಲ್ಲಿ: “ಇನ್ನು ಮುಂದೆ ಕಣಿವೆ ರಾಜ್ಯದಲ್ಲಿ ಯಾರಾದರೂ ಗನ್‌ ಕೈಗೆತ್ತಿಕೊಂಡರೆ, ಅಂಥವರ ನಿರ್ಮೂಲನೆ ಶತಃಸಿದ್ಧ.’
ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಇಂಥದ್ದೊಂದು ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿರುವುದು ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ಕೆ.ಜೆ.ಎಸ್‌. ಧಿಲ್ಲಾನ್‌.

Advertisement

ಮಂಗಳವಾರ ಕಾಶ್ಮೀರದ ಐಜಿ ಎಸ್‌.ಪಿ. ಪಾಣಿ ಹಾಗೂ ಸಿಆರ್‌ಪಿಎಫ್ ಐಜಿ ಝುಲ್ಫಿಕರ್‌ ಹಸನ್‌ ಅವರೊಂದಿಗೆ ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಲೆ.ಜ.ಧಿಲ್ಲಾನ್‌, ಪುಲ್ವಾಮಾ ದಾಳಿಗೆ ಸಂಬಂಧಿಸಿ ಆಕ್ರೋಶಭರಿತರಾಗಿ ಮಾತನಾಡಿ ದ್ದಾರೆ. “ನಮ್ಮ 40 ಸಿಆರ್‌ಪಿಎಫ್ ಯೋಧ ರನ್ನು ಬಲಿತೆಗೆದುಕೊಂಡ ಕಾರು ಬಾಂಬ್‌ ದಾಳಿಯಲ್ಲಿ ಪಾಕಿಸ್ಥಾನದ ಸೇನೆ ಮತ್ತು ಅವರ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡ ವಿರುವುದು ಸ್ಪಷ್ಟ. ಜೈಶ್‌-ಎ-ಮೊಹಮ್ಮದ್‌ ಎಂಬ ಉಗ್ರ ಸಂಘಟನೆಯು ಪಾಕ್‌ ಸೇನೆ ಮತ್ತು ಐಎಸ್‌ಐನ ಕೂಸು. ದಾಳಿಯಲ್ಲಿ ಪಾಕ್‌ ಸೇನೆಯ ಕೈವಾಡವಿರುವುದು ನೂರಕ್ಕೆ ನೂರರಷ್ಟು ಖಚಿತವಾಗಿದೆ. ಇದರಲ್ಲಿ ಅನುಮಾನವೇ ಇಲ್ಲ’ ಎಂದು ಅವರು ಹೇಳಿದ್ದಾರೆ.

ಹೆತ್ತವರಿಗೆ ಸಲಹೆ: ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ನಿಮ್ಮ ಮಕ್ಕಳನ್ನು ಮುಖ್ಯವಾಹಿನಿಗೆ ಬಂದು, ಶರಣಾಗುವಂತೆ ಮನವೊಲಿಸಿ ಎಂದು ಕಾಶ್ಮೀರಿ ಯುವಕರ ಹೆತ್ತವರಿಗೂ ಅವರು ಕರೆ ನೀಡಿದ್ದಾರೆ. “ಕಾಶ್ಮೀರಿ ಯುವಕರ ಪೋಷಕರಿಗೆ, ವಿಶೇಷವಾಗಿ ತಾಯಂದಿರಿಗೆ ಒಂದು ಮಾತು ಹೇಳಲಿಚ್ಛಿಸುತ್ತೇನೆ. ಕೂಡಲೇ ಶರಣಾಗುವಂತೆ ನಿಮ್ಮ ಮಕ್ಕಳಿಗೆ ಸೂಚಿಸಿ. ಕಣಿವೆ ರಾಜ್ಯದಲ್ಲಿ ಯಾರಾದರೂ ಗನ್‌ ಕೈಗೆತ್ತಿಕೊಂಡರೆ, ಶರಣಾಗದ ಹೊರತು ಅವರ ಸಾವು ಖಚಿತ. ಇದು ನಾನು ನೀಡುತ್ತಿರುವ ಕೋರಿಕೆ ಮತ್ತು ಎಚ್ಚರಿಕೆ ಎರಡೂ ಆಗಿದೆ’ ಎಂದು ಲೆ.ಜ. ಧಿಲ್ಲಾನ್‌ ಹೇಳಿದ್ದಾರೆ.

ಬಂದವರು ವಾಪಸ್‌ ಹೋಗಲ್ಲ: ಹಿಮವರ್ಷ ದಿಂದಾಗಿ ಕಳೆದ ಒಂದು ತಿಂಗಳಲ್ಲಿ ಹೆಚ್ಚಿನ ನುಸು ಳು ವಿಕೆ ಗಡಿ ನಿಯಂತ್ರಣ ರೇಖೆ ಬಳಿ ನಡೆದಿಲ್ಲ. ಆದರೆ, ಪಾಕಿಸ್ಥಾನವು ನಿರಂತರವಾಗಿ ನುಸುಳು ಕೋರರನ್ನು ದೇಶದೊಳಕ್ಕೆ ಕಳುಹಿಸುತ್ತಿದೆ. ಒಂದು ಮಾತಂತೂ ನಿಜ, ಒಮ್ಮೆ ಯಾರಾದರೂ ನಮ್ಮ ಮಣ್ಣಿನೊಳಗೆ ಕಾಲಿಟ್ಟರೆ, ನಂತರ ಅವರು ವಾಪಸ್‌ ಹೋಗಲ್ಲ ಎಂಬ ಎಚ್ಚರಿಕೆಯನ್ನೂ ಲೆ.ಜನರಲ್‌ ಕೊಟ್ಟಿದ್ದಾರೆ.

ಈವರೆಗೂ ಆಗಿರಲಿಲ್ಲ: ಫೆ.14ರಂದು ನಡೆದಂಥ ದಾಳಿಯನ್ನು ದೇಶ ಈವರೆಗೂ ಕಂಡಿದ್ದಿಲ್ಲ. ಸಿರಿಯಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ಥಾನಗಳಲ್ಲಿ ಇಂಥ ದಾಳಿಗಳು ನಡೆದಿವೆ. ಈಗ ಉಗ್ರರು ನಮ್ಮ ದೇಶದಲ್ಲಿ ಈ ಮಾದರಿಯ ದಾಳಿ ಆರಂಭಿಸಿದ್ದಾರೆ. ನಾವು ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿಟ್ಟುಕೊಂಡಿದ್ದೇವೆ. ಭವಿಷ್ಯದಲ್ಲಿ ಇಂಥ ದಾಳಿಗಳನ್ನು ಎದುರಿಸುವುದು ಹೇಗೆ ಎಂಬುದು ನಮಗೆ ಗೊತ್ತು ಎಂದೂ ಅವರು ಹೇಳಿದ್ದಾರೆ.

Advertisement

ಉಗ್ರ ಪಟ್ಟಿಗೆ ಅಜರ್‌: ಫ್ರಾನ್ಸ್‌ನಿಂದ ಶೀಘ್ರ ಪ್ರಸ್ತಾವನೆ:  ಜೈಶ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಫ್ರಾನ್ಸ್‌ ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಪ್ರಸ್ತಾಪ ಸಲ್ಲಿಸಲು ಫ್ರಾನ್ಸ್‌ ಸಿದ್ಧತೆ ನಡೆಸುತ್ತಿದೆ ಎಂದು ಮೂಲ ಗಳು ತಿಳಿಸಿವೆ. 2017ರಲ್ಲಿ ಮೊದಲ ಬಾರಿಗೆ ಈ ಬಗ್ಗೆ ನಿರ್ಣಯ ಮಂಡಿಸಿದ್ದಾಗ ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಬೆಂಬಲ ವ್ಯಕ್ತಪಡಿಸಿದ್ದವು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಫ್ರಾನ್ಸ್‌ ಅಧ್ಯಕ್ಷರ ಸಲಹೆಗಾರ ಫಿಲಿಪ್ಪೇ ಎಟಿನ್‌ ನಡುವಿನ ಚರ್ಚೆ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.

ಬಹಿಷ್ಕಾರಕ್ಕೆ ಕರೆ ನೀಡಿದ ರಾಜ್ಯಪಾಲ: “ಕಾಶ್ಮೀರದ ಎಲ್ಲ ಉತ್ಪನ್ನಗಳನ್ನೂ ಬಹಿಷ್ಕರಿಸಬೇಕು. ಅಮರನಾಥ ಯಾತ್ರೆಗೂ ಹೋಗಬಾರದು’ ಎಂದು ಮೇಘಾಲಯ ರಾಜ್ಯಪಾಲ ತಥಾಗತ ರಾಯ್‌ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಸೇನೆಯ ನಿವೃತ್ತ ಕರ್ನಲ್‌ ಒಬ್ಬರು ಈ ಸಲಹೆ ನೀಡಿದ್ದು, “ಮುಂದಿನ 2 ವರ್ಷ ಅಮರನಾಥ ಯಾತ್ರೆಗೆ ಯಾರೂ ಹೋಗಬಾರದು. ಕಾಶ್ಮೀರದ ವಸ್ತುಗಳನ್ನು ಖರೀದಿ ಮಾಡಬಾರದು. ಕಾಶ್ಮೀರದ ಯಾವುದೇ ವಿಚಾರಗಳನ್ನು ಸ್ವೀಕರಿಸಬಾರದು’ ಎಂದಿದ್ದು, ಅದನ್ನು ನಾನೂ ಬೆಂಬಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ, “ನಿಮಗೆ ಕಾಶ್ಮೀರ ಬೇಕು. ಆದರೆ ಕಾಶ್ಮೀರಿಗರು ಬೇಡ ಎಂದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಹುತಾತ್ಮರಿಗೆ ಟ್ಯಾಟೂ ಗೌರವ
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರೂ ಸೇರಿದಂತೆ ಒಟ್ಟು 71 ಮಂದಿ ಸೈನಿಕರ ಹೆಸರುಗಳನ್ನು ತನ್ನ ದೇಹದ ಮೇಲೆ ಟ್ಯಾಟೂ ಹಾಕಿಸಿ ಕೊಳ್ಳುವ ಮೂಲಕ ಯುವಕನೊಬ್ಬ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾನೆ. ಬಿಕಾನೇರ್‌ನ ಯುವಕ ಗೋಪಾಲ್‌ ಸಹರನ್‌, ಭಗತ್‌ಸಿಂಗ್‌ ಯುವ ಬ್ರಿಗೇಡ್‌ನ‌ ಸಕ್ರಿಯ ಕಾರ್ಯಕರ್ತನಾಗಿದ್ದು, ಸೈನಿಕರ ಕುರಿತು ಉಳಿದವರಿಗೂ ಅಭಿಮಾನ ಮೂಡಿಸುವ ಉದ್ದೇಶದಿಂದ ಇಂಥದ್ದೊಂದು ವಿನೂತನ ಪ್ರಯತ್ನ ಮಾಡಿದ್ದಾನೆ. 

ಇಂದು ರಾತ್ರಿ 7 ಗಂಟೆಗೆ 20 ನಿಮಿಷ ಕಾಲ ಪೆಟ್ರೋಲ್‌ ಪಂಪ್‌ ಮುಚ್ಚಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆ: ದೇಶಾದ್ಯಂತದ 56 ಸಾವಿರ ಪೆಟ್ರೋಲ್‌ ಪಂಪ್‌ಗ್ಳನ್ನು ಪ್ರತಿನಿಧಿಸುವ ಭಾರತೀಯ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟ ಘೋಷಣೆ

 ಅಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಸಹಾಯಧನ

ಬ್ರಿಟನ್‌ನಲ್ಲಿರುವ ಭಾರತೀಯ ಉದ್ಯಮಿ ಲಾರ್ಡ್‌ ಸ್ವರಾಜ್‌ ಪೌಲ್‌ ಅವರಿಂದ ಹುತಾತ್ಮರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಘೋಷಣೆ

ಮಂಗಳವಾರ ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ. ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿನ ಮುಂಚೂಣಿ ನೆಲೆಗಳ ಮೇಲೆ ಗುಂಡಿನ ದಾಳಿ

ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಭಾರತಕ್ಕೆ ಬೇಷರತ್‌ ಬೆಂಬಲ ನೀಡುತ್ತೇವೆಂದು ಘೋಷಿಸಿದ ಇಸ್ರೇಲ್‌

ಜಮ್ಮುವಿನ ಕೆಲವು ಭಾಗಗಳಲ್ಲಿ 2 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಕೆ; ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next