Advertisement

ಅನುದಾನ ಸದ್ಬಳಕೆಯಾದರೆ ಸಮಾಜ ಅಭಿವೃದ್ದಿ

12:41 PM Jun 17, 2017 | Team Udayavani |

ಬೆಂಗಳೂರು: “ಸರ್ಕಾರ ನೀಡುವ ಅನುದಾನವನ್ನು ಜನ ಪ್ರತಿನಿಧಿಗಳು ಸಮರ್ಪಕವಾಗಿ ಬಳಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ,’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ. 

Advertisement

ಮಹಾಲಕ್ಷ್ಮೀ ಬಡಾವಣೆಯ ನಾಗಪುರ ವಾರ್ಡ್‌ನಲ್ಲಿ ಬಿಬಿಎಂಪಿ ಅಭಿವೃದ್ಧಿಪಡಿಸಿರುವ ಬಾಲಗಂಗಾಧರನಾಥ ಸ್ವಾಮೀಜಿ ಉದ್ಯಾನ, ಬಯಲು ವ್ಯಾಯಾಮ ಹಾಗೂ ನಗೆಕೂಟದ ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು, “ಜನ ಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕು,’ ಎಂದು ಹೇಳಿದರು. 

“ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಜನಪ್ರತಿನಿಧಿಗಳು ಜಾರಿಗೊಳಿಸಬೇಕು. ರಾಜಕೀಯ ಕ್ಷೇತ್ರದೊಂದಿಗೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಾರ್ವಜನಿಕರೂ ಸಹ ಸಮಾಜ ಸೇವೆಯಂಥ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು,’ ಎಂದು ಸಲಹೆ ನೀಡಿದರು. 

ಮೇಯರ್‌ ಜಿ.ಪದ್ಮಾವತಿ ಮಾತನಾಡಿ, “ಪಾಲಿಕೆಯ ಎಲ್ಲ ವಾರ್ಡ್‌ಗಳ ಉದ್ಯಾನಗಳನ್ನು ಅಭಿವೃದ್ಧಿ ಮಾಡುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದಕ್ಕೆ ಪಾಲಿಕೆಯಿಂದ ಅನುದಾನವನ್ನೂ ನೀಡಲಾಗುವುದು. ಪಾಲಿಕೆ ಸದಸ್ಯರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,’ ಎಂದು ಹೇಳಿದರು. 

“ನಗರದ ಅಭಿವೃದ್ಧಿಗೆ ಸರ್ಕಾರದಿಂದಲೂ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಪಾಲಿಕೆಯಲ್ಲಿನ ಉದ್ಯಾನ, ಶಾಲೆಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದರೊಂದಿಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳಿಗೆ ಮೇಯರ್‌ ನಿಧಿಯಿಂದಲೇ ಅನುದಾನ ನೀಡಲಾಗುವುದು,’ ಎಂದು ತಿಳಿಸಿದರು. 

Advertisement

ಸ್ಥಳೀಯ ಪಾಲಿಕೆ ಸದಸ್ಯ ಭದ್ರೇಗೌಡ ಮಾತನಾಡಿ, “ನಾಗಪುರ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಹಂತ ಹಂತವಾಗಿ ವಾರ್ಡ್‌ಅನ್ನು ಅಭಿವೃದ್ಧಿಪಡಿಸಲಾಗುವುದು,’ ಎಂದರು. ಶಾಸಕ ಕೆ.ಗೋಪಾಲಯ್ಯ, ಉಪಮೇಯರ್‌ ಎಂ.ಆನಂದರ್‌, ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next