Advertisement

ರೈತರ ಸಾಲ ಮನ್ನಾ ಮಾಡಿದ್ರೆ ಆರ್ಥಿಕ ಸ್ಥಿತಿ ಕೆಡುತ್ತಾ?: ಸಿಎಂ

11:53 AM Jul 21, 2017 | Team Udayavani |

ಧಾರವಾಡ: ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂಬುದಾಗಿ ಹೇಳುವ ಕೇಂದ್ರ ಸರಕಾರಕ್ಕೆ ಮಾತ್ರ ಉದ್ಯಮಿಗಳ ಸಾಲ ಮನ್ನಾ ಮಾಡೋಕೆ ಈ ಪ್ರಶ್ನೆಯೇ ಬರೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. 

Advertisement

ಧಾರವಾಡ ಉಪನಗರ ಪೊಲೀಸ್‌ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರಕಾರವು ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಉದ್ಯಮಿಗಳ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕ ಸ್ಥಿತಿಗತಿ ಚೆನ್ನಾಗಿ ಇರುತ್ತಾ? ಎಂದು ಅವರು ಪ್ರಶ್ನಿಸಿದರು.

ಹೀಗಾಗಿ ಇದು ರೈತರ ಪರ ಸರಕಾರವೇ ಅಲ್ಲ. ಇನ್ನು ಮೊದಲು ನೀವ್‌ ಸಾಲ ಮನ್ನಾ ಮಾಡಿ ಕೇಂದ್ರದಿಂದ ನಾವ್‌ ಮಾಡಿಸ್ತೇವೆ ಅಂತ ಅಂದವರು ಈಗ ಸುಮ್ಮನಿದ್ದಾರೆ. ರೈತರ ಸಹಕಾರಿ ಕ್ಷೇತ್ರದ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು, ಈಗ ರಾಜ್ಯ ಬಿಜೆಪಿ ನಾಯಕರು ಹೇಳಿದಂತೆ ಕೇಂದ್ರ ಸರಕಾರದಿಂದ ಸಾಲ ಮನ್ನಾ ಮಾಡಿಸಬೇಕು ಎಂದು ಸವಾಲು ಹಾಕಿದರು. 

ಸಂವಿಧಾನ ಓದಿಕೊಳ್ಳಲಿ: ರಾಷ್ಟ್ರಧ್ವಜವೇ ಮುಖ್ಯ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ರಾಷ್ಟ್ರಧ್ವಜ ಅಮುಖ್ಯ ಅಂತ ನಾವೇನೂ ಹೇಳಿದೀವಾ..? ಇಲ್ಲ. ಒಂದೇ ರಾಷ್ಟ್ರ ಒಂದೇ ಧ್ವಜ ಎನ್ನುವುದಾದರೆ ಈ ರಾಜ್ಯಗಳು ಏಕೆ ಇರಬೇಕು. ಈ ದೇಶ ರಾಜ್ಯಗಳ ಒಕ್ಕೂಟ ಎಂಬುದು ಕೇಂದ್ರ ಸರಕಾರ ಅರಿಯಬೇಕು.

ರಾಷ್ಟ್ರಧ್ವಜ ಇರುತ್ತೆ ಅದರ ಕೆಳಗೆ ನಾಡಧ್ವಜ ತಂದರೆ ಏನು ತೊಂದರೆ? ರಾಷ್ಟ್ರಗೀತೆ ಜನಗಣಮನ ಇದೆ. ಅದರೊಂದಿಗೆ ನಾಡಗೀತೆ ಇದ್ದು ಅದರಲ್ಲಿ ತೊಂದರೆ ಆಗಿಲ್ಲ. ಹೀಗಾಗಿ ಯಡಿಯೂರಪ್ಪ ಸ್ವಲ್ಪ ಸಂವಿಧಾನ ಓದಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

Advertisement

ಜು.21ರಿಂದ 23ರವರೆಗೆ ಡಾ| ಅಂಬೇಡರ್‌ರ 126ನೇ ಜಯಂತಿ ಪ್ರಯುಕ್ತ  ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ. ದೇಶ-ವಿದೇಶಗಳಿಂದ ಭಾಷಣಕಾರರು ಬರಲಿದ್ದಾರೆ. ಜು.21 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ರಾಹುಲ್‌ ಗಾಂಧಿ ಅವರು ಬರಲಿದ್ದು, ಜು.23ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.

ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಅವರೆಲ್ಲ ಒತ್ತಾಯ ಮಾಡಲಿ. ಆಮೇಲೆ ಬೇಕಾದರೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಚಿವ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ, ಹು-ಧಾ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next