ಕುಷ್ಟಗಿ: ಕಂಪನಿ ಶ್ರೀಮಂತವಾದರೆ ಸಾಲದು ರೈತರು ಶ್ರೀಮಂತರಾಗಬೇಕು. ರೈತರು ಶ್ರೀಮಂತರಾದರೆ ಕಂಪನಿ ತನ್ನಿಂದತಾನೇ ಶ್ರೀಮಂತವಾಗಲಿದೆ ಎಂದು ಕೊಲ್ಲಾಪೂರ ಕನ್ಹೇರಿ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಮಂಗಳವಾರ ಇಲ್ಲಿನ ಪಿಸಿಎಚ್ ಪ್ಯಾಲೇಸ್ ನಲ್ಲಿ ವಿಜಯ ಚಂದ್ರಶೇಖರ ಬಯೋಫಿಲ್ ಪ್ರೈವೇಟ್ ಲಿಮಿಟೆಡ್ ಹಾಗೂ ವಿಜಯ ಚಂದ್ರಶೇಖರ ಅಗ್ರೋ ಫಾರ್ಮರ್ಸ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನೇಪೀಯರ್ ಹುಲ್ಲು ಕಡಿಮೆ ನೀರಿನಲ್ಲೂ ಸಮೃಧ್ಧವಾಗಿ ಬೆಳೆಯಬಹುದು. ಇದು ಜಾನುವಾರುಗಳಿಗೆ ಅಹಾರವಾಗಿ ಹಾಗೂ ಜೈವಿಕ ಇಂಧನವಾಗಿ ಬಳಸಿಕೊಳ್ಳಬಹುದಾಗಿದೆ. ಇದು ರೈತರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದ್ದು ಈಗಾಗಲೇ 15 ಸಾವಿರ ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಇದರ ಮುಖ್ಯಸ್ಥ ಶೇಖರ ಗೌಡ ಮಾಲಿಪಾಟೀಲ ಇನ್ನಷ್ಟು ರೈತರು ಸೇರಿಸಿ ರೈತರಲ್ಲಿ ವಿಶ್ವಾಸ ನಿರ್ಮಾಣವಾಗಬೇಕಿದೆ. ಈ ಪ್ರದೇಶ ಕಡಿಮೆ ಮಳೆ ಬೀಳುವ ಪ್ರದೇಶ ಹಣೆಪಟ್ಟಿ ಇದ್ದು ಇದನ್ನೇ ಅವಕಾಶವಾಗಿ ಬಳಸಿಕೊಂಡು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆದು ರೈತರು ಶ್ರೀಮಂತರಾಗಬೇಕಿದೆ ಎಂದರು.
ನೇಪಿಯರ್ ಹುಲ್ಲು ಹೆಚ್ಚು ಕಡಿಮೆ 20 ಅಡಿವರೆಗೂ ಬೆಳೆಯಬಹುದಾಗಿದೆ ಎಕರೆಗೆ ಕನಿಷ್ಠ 250 ಟನ್ ನಿಂದ 800 ಟನ್ ವರೆಗೂ ಬೆಳೆಯಬಹುದಾಗಿದೆ. ಪ್ರತಿ ಕೆ.ಜಿ.ಗೆ 1 ರೂ. ಅದರೆ ಲಕ್ಷಾಂತರ ರೂ. ಆದಾಯ ಬರಲಿದೆ ಮೊದಲ ಬೆಳೆ ಇಳುವರಿ ಕಡಿಮೆ ಬರಲಿದ್ದು ನಂತರ. ಬೆಳೆ ಟಿಸಿಲು ಒಡೆದು ಹೆಚ್ಚು ಬೆಳೆ ಬರಲಿದೆ. ನಮ್ಮ ಕನ್ಹೇರಿಮಠದಲ್ಲಿ 1200 ಜವಾರಿ ಹಸುಗಳಿಗೆ ಇದೇ ಹುಲ್ಲನ್ನು ಮೇವಾಗಿ ಬಳಸಲಾಗುತ್ತಿದೆ. ಈ ಹುಲ್ಲನ್ನು ಎರಡೂವರೆ ರೂ.ಗೆ ಖರೀಧಿಸಿದರೂ ಆದರೂ ಸಿಗುವಲ್ದು. ರೈತರು ಹೊಸ ವಿಚಾರ, ತಂತ್ರ ಅಳವಡಿಸಿಕೊಂಡರೆ ರೈತರು ಸಮೃಧ್ಧರಾಗುವುದರಲ್ಲಿ ವಿಶ್ವಾಸವಿಲ್ಲ ಎಂದರು.
ನಾವು ಎಷ್ಟು ಸ್ವಾವಲಂಬನೆಯಿಂದ ಬದುಕಲು ಸಾದ್ಯವೋ ಅಷ್ಟು ಪ್ರಯತ್ನಗಳು ನಮ್ಮ ದೇಶದಲ್ಲಿ ಆಂದೋಲನ ಶುರುವಾಗಿದೆ. ಪ್ರತಿ ವರ್ಷ 8 ಲಕ್ಷ ಕೋಟಿ ರೂ. ನೈಸರ್ಗಿಕ ಗ್ಯಾಸ್ ಖರೀಧಿಸಲಾಗುತ್ತಿದೆ. ರೈತರು ಮನಸ್ಸು ಮಾಡಿದರೆ ನೈಸರ್ಗಿಕ ಗ್ಯಾಸನ್ನು ಉತ್ಪಾದಿಸಲು ಸಾದ್ಯವಿದೆ. ಎಲ್ ಪಿಜಿ ಮುಕ್ತ ಗ್ರಾಮಗಳಿಂದ ಇತರೇ ದೇಶಗಳೊಂದಿಗೆ ಪರವಾಲಂಬನೆ ಕಡಿಮೆಯಾಗಿ ಅಷ್ಟು ಹಣವೂ ನಮ್ಮ ದೇಶದಲ್ಲಿ ಉಳಿಯಲಿದೆ ಎಂದರು.
ಮುಂಬೈ ಎಂಸಿಎಲ್ ಸೀನಿಯರ್ ಪ್ರೈಮ್ ಬಿ.ಡಿ.ಎ. ಕಾರ್ತಿಕ್ ರಾಹುಲ್, ರಮೇಶ ಪಾಟೀಲ ಸೊಲ್ಲಾಪುರದ ಅಶೋಕ ಮೇರಾಕೋರ್, ಆರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ, ಕರ್ನಾಟಕ ಸೀನಿಯರ್ ಬಿಡಿಎ ಎಸ್.ಕೆ. ಗೌಡರ್, ಎಂ.ಜೆ. ಗೌಡರ್, ಲಕ್ಷ್ಮಣ ಮರಡಿತೋಟ, ದೇವೇಂದ್ರಪ್ಪ ಬಳೂಟಗಿ ಮಲ್ಲಿಕಾರ್ಜುನ, ಸಂತೋಜಿ, ದೊಡ್ಡಬಸವ ಬಯ್ಯಾಪೂರ, ಎಂ.ಪಿಓ. ಶೇಖರಗೌಡ ಮಾಲಿ ಪಾಟೀಲ ಮತ್ತಿತರರಿದ್ದರು.