Advertisement

ರೈತರು ಸುಖವಾಗಿದ್ದರೆ ದೇಶ ಸುಖದಲ್ಲಿ: ಬಾಲಚಂದ್ರ ಜಾರಕಿಹೊಳಿ

03:22 PM Oct 15, 2024 | Team Udayavani |

ಉದಯವಾಣಿ ಸಮಾಚಾರ
ಮೂಡಲಗಿ: ದೇವರ ದಯೆಯಿಂದ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ರೈತರು ಸುಖವಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ ಎಂದು ಬೆಮೂಲ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ಮಾತನಾಡಿದ ಅವರು, ದಸರಾ ಮುಗಿದು ದೀಪಾವಳಿ ಹಬ್ಬಕ್ಕೆ ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ ಎಂದವರು ತಿಳಿಸಿದರು.

ಹಳ್ಳೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೆಲ ಕಾರಣಗಳಿಂದ ಮಧ್ಯಾಹ್ನ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಸರ್ವೋತ್ತಮ ಅವರು ಈ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಗ್ರಾಮದ ಮುಖಂಡರು ಪದೇ ಪದೇ ಒತ್ತಾಯಿಸಿದ್ದರಿಂದ ನಾನು ಬರಬೇಕಾಯಿತು. ನಿಮ್ಮಲ್ಲಿನ ಮನಸ್ಥಾಪಗಳನ್ನು ಪಕ್ಕಕ್ಕಿಟ್ಟು ಗ್ರಾಮದ ಸುಧಾರಣೆಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಅವರು ಹೇಳಿದರು.

ದೇವರ ಆಶೀರ್ವಾದದಿಂದ ಈ ಬಾರಿ ಹಿಡಕಲ್‌ ಜಲಾಶಯ ಭರ್ತಿಯಾಗಿದೆ. 48 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ನಮ್ಮ ರೈತರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಕೆನಾಲ್‌, ಹಳ್ಳಗಳಿಗೆ ನೀರಿನ ಸಮಸ್ಯೆಯಿಲ್ಲ. ರೈತರು ಖುಷಿಯಿಂದ
ಇರಬೇಕು ಎಂದು ಹೇಳಿದ ಅವರು, ಬರುವ ಮೇ ತನಕ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಅರಭಾವಿ ಕ್ಷೇತ್ರದ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಸರ್ಕಾರದ ಅನುದಾನದ
ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ವಿಳಂಬವಾಗುತ್ತಿರುವುದು ಸತ್ಯ. ಇಷ್ಟಾಗಿಯೂ ನಾಗರಿಕರ ಮೂಲಭೂತ ಸೌಲಭ್ಯಗಳನ್ನು ಪರಿಹಾರಿಸಲು ನಮ್ಮದೇ ಹಂತದಲ್ಲಿ ಯತ್ನಿಸುತ್ತಿದ್ದೇನೆ. ಅದರಲ್ಲೂ ತೋಟದ ರಸ್ತೆಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ.

Advertisement

ಸ್ಥಳೀಯ ಮುಖಂಡರು ಹೇಳುವ ರೈತರ ತೋಟಪಟ್ಟಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ನ.15 ರಿಂದ ಸಕ್ಕರೆ ಕಾರ್ಖಾನೆಗಳು ಆರಂಭವಾಗುವುದರಿಂದ ರೈತರ ಅನುಕೂಲಕ್ಕಾಗಿ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ. ನಂತರ ಬಾಕಿ ಉಳಿದಿರುವ
ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಅವರು ತಿಳಿಸಿದರು.

ಮಕ್ಕಳು ತಂದೆ- ತಾಯಿಯ ಋಣ ತೀರಿಸಬೇಕು. ಕಷ್ಟಪಟ್ಟು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ಹೆತ್ತವರನ್ನು ಸರಿಯಾಗಿ ಉಪಚರಿಸಬೇಕು. ಡಂಭಾಚಾರಗಳಿಗೆ ಜೋತು ಬೀಳದೇ, ಅನವಶ್ಯಕ
ಖರ್ಚುಗಳಿಗೆ ಕಡಿವಾಣ ಹಾಕಬೇಕು ಎಂದು ಯುವಕರಿಗೆ ಕರೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಸಮಾಜಗಳ ಮುಖಂಡರು ಸತ್ಕರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಉಪಾಧ್ಯಕ್ಷೆ ಜೆ. ಮಿರ್ಜಿ, ಮುಖಂಡರಾದ ದೊಡ್ಡ ಬಸಪ್ಪ ಸಂತಿ, ಲಕ್ಷ್ಮಣ ಕತ್ತಿ, ಭೀಮಶಿ ಮಗದುಮ್ಮ, ಬಿ.ಜಿ. ಸಂತಿ, ಹಣಮಂತ ತೇರದಾಳ, ಕುಮಾರ ಲೋಕನ್ನವರ, ಸುರೇಶ ಕತ್ತಿ, ಅಡಿವೆಪ್ಪ ಪಾಲಭಾವಿ, ಶಂಕ್ರಯ್ಯ ಹಿರೇಮಠ, ಶ್ರೀಕಾಂತ ದುರದುಂಡಿ, ನಾರಾಯಣ ಪುಜೇರಿ, ಬಸವಣ್ಣೆಪ್ಪ ಡಬ್ಬನ್ನವರ, ಶ್ರೀಶೈಲ ಭಾಗೋಡಿ, ಮಲ್ಲಪ್ಪ ಛಬ್ಬಿ, ಶಿವದುಂಡ ಕೊಂಗಾಲಿ, ಮಹಾದೇವ ಹೊಸಟ್ಟಿ, ಅಫ್ತಾಬ ಮುಜಾವರ, ಶಿವಪ್ಪ ಅಟಮಟ್ಟಿ, ರಾಮನಗೌಡ ಪಾಟೀಲ, ಗೋವಿಂದ ಮಾದರ, ಶಂಕರ ಬೋಳನ್ನವರ, ಶ್ರೀಶೈಲ ಅಂಗಡಿ,ಗುರು ಹಿಪ್ಪರಗಿ,  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next