ಕಲಬುರಗಿ: ನಮ್ಮ ಪರಿಸರ ಸ್ವಚ್ಛವಾದರೆ ನಮ್ಮ ಮನಸ್ಸುಗಳು ಸ್ವಚ್ಚವಾಗುತ್ತವೆ ಎಂದು ಸಂಸದ ಡಾ.ಉಮೇಶ್ ಜಾಧವ್ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 55 ವಾರ್ಡಗಳಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಶ್ರಮದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಡಾ.ಉಮೇಶ್ ಜಾಧವ್ ಪರಿಸರವನ್ನು ತ್ಯಾಜ್ಯಮುಕ್ತ ಮಾಡಲು ದೇಶದ ಜನರು ಶ್ರಮಿಸುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡಬೇಕೆಂದರು.
ಸಾರ್ವಜನಿಕ ಉದ್ಯಾನವನದಲ್ಲಿ ಸಂಸದ ಡಾ.ಉಮೇಶ ಜಾಧವ, ಶಾಸಕಿ ಕನೀಜ್ ಫಾತೀಮಾ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್, ಜಿಲ್ಲಾಧಿಕಾರಿ ಬಿ.ಶರತ್, ಜಿಪಂ ಸಿಇಓ ಡಾ.ಪಿ.ರಾಜಾ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವಚ್ಚತೆ ಮಾಡಿದರು. ಪೊರಕೆ ಹಿಡಿದು ಕಸ ಗುಡಿಸುವುದಲ್ಲದೇ ಪ್ಲಾಸ್ಟಿಕ್ ಚಿಂದಿಯನ್ನು ಎತ್ತುವ ಮೂಲಕ ಶ್ರಮದಾನ ಮಾಡಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಗಾಂಧಿಯವರ ತತ್ವ-ಸಂದೇಶ ಸಾರುವ ಸಾಕ್ಷ್ಯ ಚಿತ್ರ ಪ್ರದರ್ಶನ, ವಿಶೇಷ ಉಪನ್ಯಾಸ ಮತ್ತು ಸರ್ವಧರ್ಮ ಪ್ರಾರ್ಥನೆ-ಸದ್ಭಾವನಾ ಗೀತಾಗಾಯನ ಕಾರ್ಯಕ್ರಮ ನಡೆಯಿತು.