Advertisement

ಬೇಡಿಕೆಗೆ ಸ್ಪಂದಿಸದಿದ್ದರೆ ಸಚಿವಾಲಯ ಬಂದ್‌

07:19 AM May 26, 2019 | Team Udayavani |

ಬೆಂಗಳೂರು: ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್‌) ನಿಯಮಾವಳಿಗೆ ತರಲಾಗುತ್ತಿರುವ ತಿದ್ದುಪಡಿ ಕರಡು ನೌಕರರ ಸೇವಾ ಸೌಲಭ್ಯಗಳಿಗೆ ಮಾರಕವಾಗಿದೆ ಎಂದು ಆರೋಪಿಸಿರುವ ರಾಜ್ಯ ಸರ್ಕಾರ ಸಚಿವಾಲಯ ನೌಕರರ ಸಂಘದ ಸದಸ್ಯರು ಶನಿವಾರ ಮುಖ್ಯ ಕಾರ್ಯದರ್ಶಿಗಳ ಕಚೇರಿ ಎದುರು ಪ್ರತಿಭಟಿಸಿದರು. ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಚಿವಾಲಯ ಸೇವೆ ಬಂದ್‌ ಮಾಡಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

Advertisement

ಕರ್ನಾಟಕ‌ ಸರ್ಕಾರಿ ಸಚಿವಾಲಯ ಸೇವೆಗಳು (ನೇಮಕಾತಿ) ನಿಯಮಗಳು 1992ರ ಸಮಗ್ರ ತಿದ್ದುಪಡಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ಮುಖ್ಯ ಕಾರ್ಯದರ್ಶಿಗಳ ಕಚೇರಿ ಎದುರು ಕುಳಿತು ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ನೇತೃತ್ವದಲ್ಲಿ ಹಲವು ಪದಾಧಿಕಾರಿಗಳು ಕೆಲ ಕಾಲ ಧರಣಿ ನಡೆಸಿದರು.

ಪ್ರಮುಖ ಬೇಡಿಕೆಗಳು: ಸಚಿವಾಲಯದಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ/ ಬಡ್ತಿ ಮೂಲಕ ಭರ್ತಿ ಮಾಡಬೇಕು. ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ನಿವೃತ್ತ ಅಧಿಕಾರಿ, ನೌಕರರನ್ನು ಹೊರಕ್ಕೆ ಕಳುಹಿಸಬೇಕು. ನಿಯೋಜನೆ, ಎರವಲು ಸೇವೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರ ಇಲಾಖೆ ಅಧಿಕಾರಿ, ನೌಕರರನ್ನು ಮಾತೃ ಇಲಾಖೆಗೆ ವಾಪಾಸ್‌ ಕಳುಹಿಸಬೇಕು. ಇ-ಆಫೀಸ್‌ ವ್ಯವಸ್ಥೆಯನ್ನು ಸಚಿವಾಲಯದಲ್ಲಿ ಜಾರಿಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆ ಎಂದು ನೌಕರರು ತಿಳಿಸಿದರು.

ಸಚಿವಾಲಯದಲ್ಲಿ ಇತ್ತೀಚೆಗೆ ಆರ್ಥಿಕ ಇಲಾಖೆಯು ಖಾಲಿ ಹುದ್ದೆಗಳನ್ನು ನೇರ ನೇಮಕ ಮೂಲಕ ಭರ್ತಿ ಮಾಡಿಕೊಳ್ಳದೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಸರಿಯಲ್ಲ. ನಿವೃತ್ತಿ ನಂತರವೂ ಹಲವು ಅಧಿಕಾರಿ, ನೌಕರರು ರಾಜಕೀಯ ನಾಯಕರು ಹಾಗೂ ಹಿರಿಯ ಅಧಿಕಾರಿಗಳ ಪ್ರಭಾವ ಬಳಸಿಕೊಂಡು ಆಯಕಟ್ಟಿನ ಹುದ್ದೆಗಳಲ್ಲಿ ಮುಂದುವರಿಯುತ್ತಿರುವುದು ನಿಯಮಬಾಹಿರ.

ಸರ್ಕಾರಿ ಸೇವೆಯಲ್ಲಿದ್ದಾಗ 75 ಸಾವಿರ ರೂ. ವೇತನ ಪಡೆಯುತ್ತಿದ್ದ ಅಧಿಕಾರಿಗಳು ನಿವೃತ್ತಿ ನಂತರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಕನಿಷ್ಠ 80 ಸಾವಿರ ರೂ. ಹಾಗೂ ನಿವೃತ್ತಿ ಸೌಲಭ್ಯ ಪಡೆಯುತ್ತಿದ್ದಾರೆ. ನಾನಾ ಇಲಾಖೆ ಮತ್ತು ಸಚಿವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹವರನ್ನು ಹೊರ ಹಾಕಬೇಕು ಎಂದರು.

Advertisement

ಬಳಿಕ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿದರು. ನಂತರ ಸಂಘದ ಪದಾಧಿಕಾರಿಗಳು ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಚಿವಾಲಯದ ವೃಂದ ಮತ್ತು ನೇಮಕಾತಿ ಕರಡು ನಿಯಮಗಳಲ್ಲಿ ಶೇ. 20ರಷ್ಟು ಶಾಖಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಸೇರಿದಂತೆ ಸೇವೆಯಲ್ಲಿರುವ ನೌಕರರಿಗೆ ಅನ್ಯಾಯವಾಗಲಿರುವ ತಿದ್ದುಪಡಿಗಳನ್ನು ಕೈಬಿಡುವಂತೆ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next