ಮಂಗಳೂರು: ಕಡಿಮೆ ಹೂಡಿಕೆ ಮಾಡಿ ಹೆಚ್ಚು ಜನರಿಗೆ ದುಡಿಯುವ ಮಾರ್ಗ ತೋರಿಸಬಲ್ಲ ಉತ್ಪಾದನಾ ವ್ಯವಸ್ಥೆ ಹಾಗೂ ಪ್ರಕೃತಿಗೆ ಅತ್ಯಂತ ಕಡಿಮೆ ಹಾನಿಕಾರಕವಾದ ವ್ಯವಸ್ಥೆಯನ್ನು ಒಳಗೊಂಡ “ಪವಿತ್ರ ಆರ್ಥಿಕತೆ’ಗಾಗಿ ಹೋರಾಟ ನಡೆಸುತ್ತಿರುವ ರಂಗ ಕರ್ಮಿ ಪ್ರಸನ್ನ ಹೆಗ್ಗೋಡು ಅವರು ತಮ್ಮ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 1ರಿಂದ ಕೇಂದ್ರ ಸರಕಾರದ ವಿರುದ್ಧ ಅಸಹಕಾರ ಚಳವಳಿ ಆರಂಭಿಸುವುದಾಗಿ ತಿಳಿಸಿದ್ದಾರೆ.
ನಗರದ ರೋಶನಿ ನಿಲಯದ ಆವರಣದಲ್ಲಿ ಶುಕ್ರವಾರ ಗಾಂಧಿ 150 ಚಿಂತನ ಯಾತ್ರೆ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಮತ್ತು ಬೆಂಗಳೂರಿನ ಗ್ರಾಮ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಾದ ಮತ್ತು ಸತ್ಯಾಗ್ರಹದ ಮುನ್ನೋಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೇ. 60ರಷ್ಟು ದೈಹಿಕ ದುಡಿಮೆ (ಕೈ ಉತ್ಪಾದನೆ) ಇರುವ, ಶೇ. 60ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯಾಗುವ ಹಾಗೂ ಶೇ. 40ಕ್ಕಿಂತ ಕಡಿಮೆ ಯಂತ್ರೋಪಕರಣಗಳ ಬಳಕೆಯಾಗುವ ಸಣ್ಣ ಉತ್ಪಾದನಾ ಘಟಕಗಳು ಪವಿತ್ರ ಆರ್ಥಿಕ ಕ್ಷೇತ್ರಗಳೆಂದು ಗ್ರಾಮ ಸೇವಾ ಸಂಘ ಪರಿಗಣಿಸಿದ್ದು, ಅವುಗಳ ಉಳಿವಿಗೆ ಒತ್ತಾಯಿಸಿ ಪ್ರಸನ್ನ ಹೆಗ್ಗೋಡು ಮತ್ತವರ ತಂಡ ಸತ್ಯಾಗ್ರಹವನ್ನು ಆರಂಭಿಸಿದೆ. ಬೆಂಗಳೂರಿನಲ್ಲಿ ಗ್ರಾಮ ಸೇವಾ ಸಂಘದ ನೇತೃತ್ವದಲ್ಲಿ ಸೆ. 25ರಂದು ಆರಂಭವಾದ ಹೋರಾಟ ಅ. 2ರಿಂದ ಉಪವಾಸ ಸತ್ಯಾಗ್ರಹದ ರೂಪ ಪಡೆದಿತ್ತು. 4ನೇ ದಿನ ಪ್ರಸನ್ನ ಹೆಗ್ಗೋಡು ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಬಳಿಕ ತಮ್ಮ ಬೇಡಿಕೆಗೆ ಒಂದು ತಿಂಗಳ ಗಡುವು ವಿಧಿಸಿದ್ದರು.
ಇದೀಗ ತಿಂಗಳ ಗಡುವು ನ. 14ಕ್ಕೆ ಮುಕ್ತಾಯವಾಗಿದೆ. ಇನ್ನೂ 15 ದಿನ ಕಾಯುತ್ತೇವೆ. ಈ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಭೇಟಿಯಾಗಿ ತಿಳಿಸಿದ್ದೇವೆ. ಕೇಂದ್ರ ಸರಕಾರ ಸ್ಪಂದಿಸದಿದ್ದರೆ ಡಿ. 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅಸಹಕಾರ ಚಳವಳಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರಸನ್ನ ಅವರು ಹೇಳಿದರು.
ಸಂವಾದದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ರಾಜೇಂದ್ರ ಉಡುಪ, ವಿದ್ಯಾ ದಿನಕರ್, ಮುಸ್ತಫಾ, ಅಬ್ದುಲ್ ಖಲೀಫ್ ಮೊದಲಾದವರು ತಮ್ಮ ಅನಿಸಿಕೆ, ಸವಾಲುಗಳನ್ನು ಪ್ರಸನ್ನ ಹೆಗ್ಗೋಡು ಅವರ ಮುಂದಿಟ್ಟರು.