ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಉದ್ಯಮಿ ನೀರವ್ ಮೋದಿ 11,400 ಕೋಟಿ ರೂ. ಮೋಸ ಮಾಡಿದ ಹಿನ್ನೆಲೆಯಲ್ಲಿ ವಸೂಲಾತಿ ಕಾನೂನು ಬಿಗಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಕಾನೂನು ಕರಡು ಸಿದ್ಧವಾಗಿದ್ದು, ಕಾನೂನು ಸಚಿವಾಲಯ ಕೆಲವು ಶಿಫಾರಸುಗಳನ್ನು ಸೂಚಿಸಿದೆ. ಈ ಕಾನೂನು ಜಾರಿಗೆ ಬಂದರೆ 100 ಕೋಟಿ ರೂ.ಗಿಂತ ಹೆಚ್ಚು ಸಾಲ ಮಾಡಿ ಮರುಪಾವತಿ ಮಾಡದೇ ವಿದೇಶಗಳಿಗೆ ಪರಾರಿಯಾಗಿದ್ದರೆ ಮತ್ತು ವಾಪಸಾಗದಿದ್ದರೆ ಅವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಇತರ ದೇಶಗಳಲ್ಲಿ ಈ ಕಾನೂನು ಇದ್ದು, ಅಲ್ಲಿ ಯಾವ ಅಂಶಗಳನ್ನು ಸೇರಿಸಲಾಗಿದೆ ಎಂದು ವಿಶ್ಲೇಷಿಸಿ ಕಳೆದ ಮೇಯಲ್ಲೇ ಕರಡು ಮಸೂದೆ ಸಿದ್ಧಪಡಿಸಲಾಗಿತ್ತು. ಅಲ್ಲದೆ ಈ ಮಸೂದೆಯ ಬಗ್ಗೆ 2017-18 ರ ಬಜೆಟ್‌ನಲ್ಲೇ ಪ್ರಸ್ತಾವಿಸಲಾಗಿದೆ. ಉದ್ಯಮಿ ವಿಜಯ್ ಮಲ್ಯ 9 ಸಾವಿರ ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್‌ಗಳಿಗೆ ಮರುಪಾವತಿ ಮಾಡದೇ ಲಂಡನ್‌ಗೆ ತೆರಳಿದ್ದ ನಂತರದಲ್ಲಿ ಈ ಕಾನೂನು ರೂಪಿಸಲಾಗಿದೆ.
ಪಂಜಾಬ್ ಸಿಎಂ ಅಳಿಯನ ವಿರುದ್ಧ ಕೇಸ್: ಸಿಂಭೌಲಿ ಶುಗರ್ಸ್ ಲಿಮಿಟೆಡ್ ಕಂಪನಿಯು ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ಗೆ (ಒಬಿಸಿ) 97.85 ಕೋಟಿ ರೂ. ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಪಂಜಾಬ್ ಸಿಎಂ ಕ್ಯಾ| ಅಮರೀಂದರ್ ಸಿಂಗ್‌ರ ಅಳಿಯನನ್ನೂ ಹೆಸರಿಸಲಾಗಿದೆ. ಅವರು ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಈ ಬಗ್ಗೆ ಕಿಡಿಕಾರಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರೈತರು ಕಷ್ಟಪಟ್ಟು ಗಳಿಸಿದ ಹಣವನ್ನು ಸಿಎಂ ಸಂಬಂಧಿ ತಮ್ಮ ಜೇಬಿಗಿಳಿಸಿದ್ದಾರೆ. ಇದಕ್ಕಿಂತ ನಾಚಿಕೆಯ ಸಂಗತಿ ಇನ್ನೇನಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಕಂಪೆನಿಯ ಮುಖ್ಯಸ್ಥ ಗುರ್ಮೀತ್ ಸಿಂಗ್ ಮಾನ್, ಉಪ ನಿರ್ದೇಶಕ ಗುರ್ಪಾಲ್ ಸಿಂಗ್‌ಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಶೋಧ ನಡೆಸಿದೆ. ದಿಲ್ಲಿ, ಹಾಪುರ್ ಹಾಗೂ ನೋಯ್ಡಾದಲ್ಲಿರುವ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ವಿದೇಶಿ ವಹಿವಾಟು ವಿಚಾರಣೆ: ನೀರವ್ ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ಶಾಖೆಗಳಿಗೆ ಹಣ ವರ್ಗಾವಣೆ ಯಾಗಿರುವುದನ್ನು ಗಮನಿಸಿರುವ ಸಿಬಿಐ, ಐದು ಬ್ಯಾಂಕ್‌ಗಳ ವಿದೇಶಿ ವಹಿವಾಟುಗಳ ಬಗ್ಗೆ ವಿವರಣೆ ಕೇಳಿದೆ. ತನಿಖೆ ಆರಂಭದಲ್ಲೇ ಈ ಬಗ್ಗೆ ಸಿಬಿಐಗೆ ಮಾಹಿತಿ ಲಭ್ಯವಾಗಿತ್ತು.
ರಿದಂ ಹೌಸ್ ಖರೀದಿಗೆ ಮಹಿಂದ್ರಾ ಒಲವು
ಮುಂಬಯಿಯಲ್ಲಿ ನೀರವ್ ಮಾಲಕತ್ವದ ರಿದಂ ಹೌಸ್ ಅನ್ನು ಜಾರಿ ನಿರ್ದೇಶನಾಲಯ ವಶಪಡಿಸಿ ಕೊಳ್ಳು ತ್ತಿದ್ದಂತೆ, ಇದನ್ನು ಸಂಗೀತಗಾರರಿಗಾಗಿ ಮರುರೂಪಿಸುವ ಯೋಜನೆಯೊಂದನ್ನು ಮಹಿಂದ್ರಾ ಸಮೂಹದ ಮುಖ್ಯಸ್ಥರಾದ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಪ್ರಸ್ತಾವಿಸಿದ್ದಾರೆ. ಇದನ್ನು ಹರಾಜಿನಲ್ಲಿ ಖರೀದಿಸಿ ಯುವ ಸಂಗೀತಗಾರರಿಗೆ ವೇದಿಕೆಯನ್ನಾಗಿಸುವ ಇವರ ಉದ್ದೇಶಕ್ಕೆ, ಈಗಾಗಲೇ ಟ್ವಿಟರ್‌ನಲ್ಲಿ ಅಪಾರ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ಅಪಾಯದಲ್ಲಿರುವ ಸಂಸ್ಥೆಗಳ ಪಟ್ಟಿ ಬಿಡುಗಡೆ
ಹಣ ದುರ್ಬಳಕೆ ಕಾನೂನಿಗೆ ಬದ್ಧವಾಗಿರದ 9500 ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಕೇಂದ್ರ ಸರಕಾರ ಪಟ್ಟಿ ಮಾಡಿದೆ. ಇವುಗಳನ್ನು ಹೈ ರಿಸ್ಕ್ ಎನ್‌ಬಿಎಫ್ಸಿಗಳು ಎಂದು ಘೋಷಿಸಿದ ಹಣಕಾಸು ಗುಪ್ತಚರ ವಿಭಾಗ, ಕಳೆದ ಜನವರಿಯವರೆಗಿನ ಮಾಹಿತಿಯನ್ನು ಕಲೆ ಹಾಕಿ ಪಟ್ಟಿ ಬಿಡುಗಡೆ ಮಾಡಿದೆ. ಇವು ನೋಟು ಅಮಾನ್ಯದ ನಂತರದಲ್ಲಿ ನಡೆಸಿದ ವಹಿವಾಟುಗಳ ಬಗ್ಗೆಯೂ ಹಣಕಾಸು ಗುಪ್ತಚರ ವಿಭಾಗ ತನಿಖೆ ನಡೆಸುತ್ತಿದೆ. ಅಲ್ಲದೆ 10 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ವಹಿವಾಟು ಮತ್ತು ಅನುಮಾನಾಸ್ಪದ ವಹಿವಾಟುಗಳ ಪತ್ತೆಯ ಮೇಲೆ ಗಮನ ಹರಿಸಲಾಗದೆ.