Advertisement

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

09:32 PM Oct 16, 2021 | Team Udayavani |

ಹಾವೇರಿ: 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡಬಾರದೆಂಬ ಕಾರಣಕ್ಕೆ ಜೆಡಿಎಸ್‌ಗೆ ನಾವು ಬೆಂಬಲ ನೀಡಿದೆವು. ಆದರೆ, ಪುಣ್ಯಾತ್ಮ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಹಾನಗಲ್ಲ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮಲಗುಂದ ಗ್ರಾಮದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆಗ ಯಡಿಯೂರಪ್ಪ ನಮ್ಮವರನ್ನು ಕರೆದುಕೊಂಡು ಹೋಗಿ ಸಿಎಂ ಆದರು. ಈಗ ಅವರೂ ಸಿಎಂ ಆಗಿ ಉಳಿದಿಲ್ಲ. ಬೊಮ್ಮಾಯಿ ಮತ್ತು ಬಿ.ಎಲ್‌.ಸಂತೋಷ ಹೋಗಿ ಗೋಗರೆದದ್ದರಿಂದ ಯಡಿಯೂರಪ್ಪ ಉಪ ಚುನಾವಣೆ ಪ್ರಚಾರಕ್ಕೆ ಬರಬಹುದು. ಆದರೆ, ಜನರು ಬಿಜೆಪಿ ಸರ್ಕಾರದ ದುರಾಡಳಿತವನ್ನು ನೋಡಿ ಬೇಸತ್ತಿದ್ದಾರೆ. ಬಡವರ ಪರವಾಗಿಲ್ಲದ, ಅಭಿವೃದ್ಧಿಪರವಲ್ಲದ ಬಿಜೆಪಿಯನ್ನು ಸೋಲಿಸಬೇಕು ಎಂದರು.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶ 101ನೇ ಸ್ಥಾನಕ್ಕೆ ಕುಸಿದಿದೆ. ಬಡವರ ಸಂಖ್ಯೆ ಹೆಚ್ಚಿದೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಬಿಜೆಪಿಯವರಿಗೆ ಭಯ. ಅಚ್ಛೇ ದಿನ್‌ ಆಯೇಗಾ ಎಂದರೆ ಇದೇನಾ? ರಾಜ್ಯದಲ್ಲಿ ಕಾಂಗ್ರೆಸ್‌ ಅ ಧಿಕಾರಕ್ಕೆ ಬಂದರೆ ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದರು.

ಸಿಎಂ ಕುರ್ಚಿಗೆ ಬೊಮ್ಮಾಯಿ ಆರೆಸ್ಸೆಸ್‌ ಹೊಗಳಿಕೆ: ಸಿದ್ದು
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ ಮೂಲದಿಂದ ಬಂದವರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಆರ್‌ಎಸ್‌ಎಸ್‌ ಹೊಗಳುತ್ತಿದ್ದಾರಷ್ಟೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ|ಎಸ್‌.ಆರ್‌. ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ನಲ್ಲಿ ಇದ್ದವರಲ್ಲ. ಬಿಜೆಪಿ ಸೇರಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ರಾಜಕೀಯ ಅಸ್ತಿತ್ವ ಹಾಗೂ ಸಿಎಂ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಹೊಗಳುವುದನ್ನು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ:ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ರಾಜಕೀಯ ನಿವೃತ್ತಿಗೆ ಸಿದ್ಧ:
ಮಾಜಿ ಸಿಎಂ ಯಡಿಯೂರಪ್ಪ ಮತ್ತು ನಾನು ಭೇಟಿಯಾಗಿದ್ದೇವೆ ಎಂಬುದು ಅಪ್ಪಟ್ಟ ಸುಳ್ಳು. ಯಡಿಯೂರಪ್ಪ ಆರ್‌ಎಸ್‌ಎಸ್‌ನಿಂದ ಬಂದವರು. ನಾನು ಆರ್‌ಎಸ್‌ಎಸ್‌ ಸಿದ್ಧಾಂತದ ವಿರುದ್ಧ ರಾಜಕೀಯವಾಗಿ ಬೆಳೆದವನು. ನಾನು, ಅವರು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ. ಹೀಗಾಗಿ ಇಬ್ಬರು ಸೇರುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ನಾವಿಬ್ಬರೂ ಭೇಟಿಯಾಗಿದ್ದೇವೆ ಎಂಬುದನ್ನು ಯಾರಾದರೂ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ಉಗ್ರಪ್ಪ ನನ್ನ ಶಿಷ್ಯ ಅಲ್ಲ?:
ಮಾಜಿ ಸಂಸದ ಉಗ್ರಪ್ಪ ಯಾರ ಶಿಷ್ಯನಲ್ಲ. ನನಗಿಂತ ಹಿರಿಯ. ಎಮರ್ಜೆನ್ಸಿಯಲ್ಲಿ ಜೈಲಿಗೆ ಹೋಗಿದ್ದ. ನನ್ನ ಶಿಷ್ಯನಾಗಲು ಹೇಗೆ ಸಾಧ್ಯ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥಗೆ ನಾನು ಹೇಳಿದ್ದೇನೆಯೇ? ಮುಖ್ಯಮಂತ್ರಿ ಆದವರಿಗೆ ಸಾಮಾನ್ಯ ಜ್ಞಾನ ಬೇಕಲ್ಲ. ಎಲ್ಲದಕ್ಕೂ ನನ್ನನ್ನೇ ಟಾರ್ಗೆಟ್‌ ಮಾಡಿದರೆ ಹೇಗೆ? ಯತ್ನಾಳ ಮತ್ತು ವಿಶ್ವನಾಥ ಹೇಳಿಕೆಗಳ ಬಗ್ಗೆ ಅವರ ಪ್ರತಿಕ್ರಿಯೆ ಏನೆಂಬುದನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಲಿ ಎಂದರು.

ಎಚ್‌ಡಿಕೆ ಮಾತಿಗೆ ಕಿಮ್ಮತ್ತು ಕೊಡಲ್ಲ
ಹಸಿವು ಯಾರು ಅನುಭವಿಸಿದ್ದಾರೆ, ನರಳುತ್ತಿದ್ದಾರೆ ಅವರು ಅನ್ನಭಾಗ್ಯ ಸೋಮಾರಿಗಳನ್ನು ಮಾಡುತ್ತದೆ ಎನ್ನುವುದಿಲ್ಲ. ಹೊಟ್ಟೆ ತುಂಬಿದವರೇ ಹಾಗೆ ಹೇಳುತ್ತಾರೆ. ಕುಮಾರಸ್ವಾಮಿ ಮಾತು ವೇದವಾಕ್ಯವಲ್ಲ. ಅವರ ಮಾತಿಗೆ ಕಿಮ್ಮತ್ತು ಕೊಡಲ್ಲ. ಬಡವರೇನಾದರೂ ಪುಕ್ಕಟೆ ಅಕ್ಕಿ ಕೊಡಬೇಡಿ ಎಂದು ಹೇಳಿದರೆ ಅದರ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next