ಬೆಂಗಳೂರು: ನಾವು ರಾಜ್ಯ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ. ಅದಾಗಿಯೇ ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಸರ್ಕಾರ ಬಿದ್ದರೆ ರಾಜಕೀಯ ಪಕ್ಷವಾಗಿ ಮುಂದಿನ ನಡೆ ಬಗ್ಗೆ ಪಕ್ಷ ನಿರ್ಧರಿಸಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಕಾಶ ಸಿಕ್ಕರೆ ಸರ್ಕಾರ ರಚಿಸುವುದಾಗಿ ಹೇಳಿದ್ದು, ಮಧ್ಯಂತರ ಚುನಾವಣೆಗಾಗಿ ಅಲ್ಲ. ಆಡಳಿತ ಪಕ್ಷದವರು ರಾಜೀನಾಮೆ ನೀಡಿ ಆ ಸಂಖ್ಯೆ ಹೆಚ್ಚಾದರೆ ಸಂಖ್ಯಾಬಲ ಇಳಿಕೆಯಾದರೆ ನಾವು ಆಡಳಿತ ನಡೆಸಬಹುದು ಎಂದಷ್ಟೇ ಹೇಳಿದ್ದೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ 24 ಗಂಟೆಯಲ್ಲಿ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ನಿಮ್ಮ ಭವಿಷ್ಯ ಸುಳ್ಳಾಯಿತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡ, ಅವರು ರಾಜೀನಾಮೆ ನೀಡಲು ತಯಾರಿದ್ದರು. ಆದರೆ ಬಾಗಿಲು ಮುಚ್ಚಿ ಅವರನ್ನು ಒಳಗೆ ಕೂರಿಸಲಾಗಿದೆ. ನಾನು ಹೇಳಿದ ಭವಿಷ್ಯ ನಿಜವಾಗಿದೆ.
ಅವರು ರಾಜೀನಾಮೆ ನೀಡಲು ಮುಂದಾಗಿದ್ದರೂ ಬೇರೆಯವರು ಬಾಗಿಲು ಬಂದ್ ಮಾಡಿದ್ದಕ್ಕೆ ನಾನು ಜವಾಬ್ದಾರನಲ್ಲ ಎಂದರು. ನರೇಗಾ ಅಡಿ ರಾಜ್ಯಕ್ಕೆ ಕೇಂದ್ರದಿಂದ ಎಷ್ಟು ಹಣ ಬರಬೇಕು ಎಂಬುದರ ಲೆಕ್ಕ ನೀಡಲಿ.
ನಾವು ನಾಲ್ಕು ಮಂದಿ ಕೇಂದ್ರ ಸಚಿವರಿದ್ದು, ಆ ಬಗ್ಗೆ ಕೇಂದ್ರ ಸರ್ಕಾರದಲ್ಲಿ ವ್ಯವಹರಿಸುತ್ತೇವೆ. ಮೊದಲಿಗೆ ನೀಡಿದ ಅನುದಾನ ಖರ್ಚು ಮಾಡಬೇಕು. ಹೆಚ್ಚು ಖರ್ಚು ಮಾಡಿದವರಿಗೆ ಅಧಿಕ ಹಣ ಕೊಡುತ್ತೇವೆ. ಬಳಕೆ ಪ್ರಮಾಣ ಪತ್ರ ನೀಡಿದರೆ ಅನುದಾನ ಸಿಗಲಿದೆ. ಕೊಡದಿದ್ದರೆ ಏನು ಮಾಡೋದು ಎಂದು ಪ್ರಶ್ನಿಸಿದರು.
ಈ ಹಿಂದೆ ನಡೆಸಿದ ಗ್ರಾಮ ವಾಸ್ತವ್ಯದಿಂದ ಏನೂ ಪ್ರಯೋಜನವಾಗಿಲ್ಲ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕಾಗಿ ಶಾಲಾ ವಾಸ್ತವ್ಯಕ್ಕೆ ಮುಂದಾಗಿರಬಹುದು. ಗೊತ್ತಿಲ್ಲದ್ದನ್ನು ಕಲಿಯಲು ಮಕ್ಕಳು ಶಾಲೆಗೆ ಹೋಗುತ್ತಾರೆ. ಇವರೂ ಸ್ವಲ್ಪ ಕಲಿಯಲು ಅಲ್ಲಿಗೆ ಹೋಗುತ್ತಾರೇನೋ.
– ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ