ಸೇಡಂ: ಇಲ್ಲಿನ ಶಾಲಾ ಮಕ್ಕಳಿಗೆ ರಜೆ ಅವಶ್ಯಕತೆ ಇಲ್ಲ. ನದಿ ನೀರು ಬಂದರೆ ಸಾಕು ಶಾಲೆಗೆ ರಜೆ. ತಾಲೂಕಿನ ಸಂಗಾವಿ(ಟಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬ್ರಿಡ್ಜ್ ನ ನದಿ ನೀರಿನಿಂದ ಮುಳಗಡೆಯಾಗಿ ದಿನಗಳೇ ಕಳೆದಿವೆ.
ಟೊಂಕದೆತ್ತರಕ್ಕೆ ನೀರು ಬಂದು ನಿಂತಿದೆ. ಅದೇ ನೀರಲ್ಲಿ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು. ಗ್ರಾಮಸ್ಥರು ದಿನನಿತ್ಯ ತೆರಳಬೇಕು. ಸ್ವಲ್ಪ ಯಾಮಾರಿದರೂ ಯಮನ ಪಾದ ಗ್ಯಾರಂಟಿ.
ನದಿ ಬ್ರಿಡ್ಜ್ ಪ್ರವಾಹದಿಂದ ಮುಳುಗಡೆಯಾಗಿದೆ ಎಂದು ಅರ್ಥೈಸಿದ್ದರೆ ಅದು ಸುಳ್ಳು, ಈ ಬ್ರಿಡ್ಜ್ ಮುಳುಗಿರುವುದು ಸ್ವಲ್ಪ ದೂರದಲ್ಲೇ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ಬಾಗಿಲು ಮುಚ್ಚಿರುವುದರಿಂದ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಧಿ ಕಾರಿಗಳ ನಿರ್ದೇಶನದಂತೆ ಬ್ರಿಡ್ಜ್ ಮುಚ್ಚಲಾಗಿದೆ. ಏನೂ ಮಾಡೋಕ್ಕಾಗಲ್ಲ ಎಂಬ ಉತ್ತರ ದೊರೆಯುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಾರೆಯಾಗಿ ಬದುಕಿನ ಬಂಡಿ ಸಾಗಿಸುವ ಬಡ ಜನರಿಗೆ ಸೌಕರ್ಯಗಳೂ ಸಹ ಹೆಚ್ಚುತ್ತಿವೆ. ಸಮಸ್ಯೆಗಳು ಸಹ ಉಲ್ಬಣಿಸುತ್ತಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಅನೇಕ ದಿನಗಳಿಂದ ಬ್ರಿಡ್ಜ್ ಮೇಲೆ ನೀರು ಬಂದಿವೆ. ನೀರಾವರಿ ಇಲಾಖೆಯವರು ಬ್ಯಾರೇಜ್ ಬಂದ್ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ಶಾಸಕರು, ಮೇಲಧಿಕಾರಿಗಳನ್ನು ಕೋರಿ ಕೋರಿ ಸಾಕಾಗಿದೆ. ಯಾರೂ ಸಹ ಸಹಾಯಕ್ಕೆ ಬರುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬ್ಯಾರೇಜ್ ತೆರೆದು ನೀರು ಬಿಟ್ಟರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗುತ್ತದೆ.
-ಅಕ್ರಮ್, ಗ್ರಾಮಸ್ಥ
ಬ್ರಿಡ್ಜ್ ತೆರೆಯಿರಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿನಿತ್ಯ ಮಕ್ಕಳು ನದಿಯಲ್ಲಿ ಜೀವದ ಹಂಗು ತೊರೆದು ಶಾಲೆಗೆ ತೆರಳುವ ದುಸ್ಥಿತಿ ಎದುರಾಗಿದೆ.
–ವಿಜಯಕುಮಾರ ಮುಗಟಿ, ನಿವಾಸಿ
-ಶಿವಕುಮಾರ ಬಿ. ನಿಡಗುಂದಾ