ಹೊನ್ನಾಳಿ: ರಾಜ್ಯದಲ್ಲಿ 2013ರಿಂದ 2018ರ ವರೆಗೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿಎಸ್‌ಐ, ಶಿಕ್ಷಕರ ಹಗರಣ ಸಹಿತ ಪ್ರತಿ ವರ್ಷ ಹಗರಣಗಳನ್ನು ಮಾಡಿದೆ. ಅರ್ಕಾವತಿ ಭೂ ಹಗರಣದಲ್ಲಿ 8 ಸಾವಿರ ಕೋಟಿ ರೂ.ಗಳ ಹಗರಣ ನಡೆದಿದ್ದು, ತನಿಖೆಗೊಳಪಡಿಸಿದರೆ ಕಾಂಗ್ರೆಸ್‌ನವರ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಪಟ್ಟಣದ ಅಗಳ ಮೈದಾನದಲ್ಲಿ ಹೊನ್ನಾಳಿ-ನ್ಯಾಮತಿ ಮಂಡಲದ ವತಿ ಯಿಂದ ಬಿಜೆಪಿ ಅಭ್ಯರ್ಥಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಪರ ರವಿವಾರ ಹಮ್ಮಿಕೊಂಡಿದ್ದ ಚುನಾವಣ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ರಾಜ್ಯದ ವಿವಿಧ ಕಡೆ ಬಾಂಬ್ ಸ್ಫೋಟ ಹಾಗೂ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಹಲವು ಆರೋಪಿಗಳ ಮೇಲಿದ್ದ ಪ್ರಕರಣಗಳನ್ನು ಅಂದಿನ ಸರಕಾರ ಹಿಂಪಡೆದಿತ್ತು ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರ ಬಂದರೆ ಎಸ್‌ಸಿ-ಎಸ್‌ಟಿ, ಲಿಂಗಾಯತ, ಒಕ್ಕಲಿಗ ಸಮಾಜಕ್ಕೆ ಹೆಚ್ಚಿಸಿರುವ ಮೀಸಲಾತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಗೃಹಿಣಿಯರಿಗೆ 2 ಸಾವಿರ ರೂ. ಸಹಿತ ಇಲ್ಲಸಲ್ಲದ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್ ಅ ಧಿಕಾರಕ್ಕೆ ಬರುವುದೇ ಇಲ್ಲ. ಭ್ರಷ್ಟಾಚಾರದಲ್ಲಿ ಸಿಲುಕಿ ಈಗ ಜಾಮೀನಿನಲ್ಲಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಸೋನಿಯಾ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿಯನ್ನು ಟೀಕಿಸುವ ಯಾವುದೇ ನೈತಿಕತೆಯಿಲ್ಲ ಎಂದು ಹೇಳಿದರು.
2014ಕ್ಕೆ ಮುನ್ನ ಭಾರತ ಇತರ ದೇಶಗಳ ಮುಂದೆ ಮಂಡಿಯೂರುವ ಪರಿಸ್ಥಿತಿ ಇತ್ತು. 2014ರ ಬಳಿಕ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನಮ್ಮ ದೇಶದಲ್ಲಷ್ಟೇ ಅಲ್ಲ, ವಿಶ್ವದ ಅಗ್ರಗಣ್ಯ ರಾಷ್ಟ್ರಗಳು ಭಾರತದತ್ತ ನೋಡುವ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ವಿಶ್ವದ ದೊಡ್ಡ ದೇಶಗಳೆಂದು ಹೆಸರು ಮಾಡಿರುವ ಅಮೆರಿಕ, ಬ್ರಿಟನ್, ರಷ್ಯಾ ಮುಂತಾದವು ನಮ್ಮ ದೇಶಕ್ಕೆ ತಲೆ ಬಾಗಿವೆ. ಇದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂದು ಪ್ರಶ್ನಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ, ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ| ಶಿವಯೋಗಿ ಸ್ವಾಮಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ
ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅ ಧಿಕಾರದಲ್ಲಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಗೆ ಕೇವಲ 17 ಫಲಾನುಭವಿಗಳ ಹೆಸರು ಕಳುಹಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಿಂದ 54 ಲಕ್ಷ ರೈತ ಫಲಾನುಭವಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಇದು ಬಿಜೆಪಿ ಮತ್ತು ಇತರ ಪಕ್ಷಗಳ ನಾಯಕರಿಗೆ ಇರುವ ವ್ಯತ್ಯಾಸ ಎಂದು ಜೆ.ಪಿ. ನಡ್ಡಾ ಕುಟುಕಿದರು.