Advertisement

ಕಬ್ಬಿನ ಬಾಕಿ ನೀಡದಿದ್ದರೆ ಸಕ್ಕರೆ ಜಪ್ತಿ ಮಾಡಲಿ

11:33 AM Jul 06, 2019 | Team Udayavani |

ಹಾವೇರಿ: ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಗುತ್ತಿಗೆದಾರ ಕಬ್ಬು ಪೂರೈಸಿದ ಬೆಳೆಗಾರರಿಗೆ ಕೊಡಬೇಕಾದ ಹಣ ಬಾಕಿ ಉಳಿಸಿಕೊಂಡಿದ್ದು, ಜಿಲ್ಲಾಧಿಕಾರಿಯವರು ಕೂಡಲೇ ಸಕ್ಕರೆ ಜಪ್ತಿ ಮಾಡಿ ರೈತರಿಗೆ ಬಡ್ಡಿಸಹಿತ ಬಾಕಿ ಹಣ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಖೀಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಆಗ್ರಹಿಸಿದರು.

Advertisement

ಶುಕ್ರವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2018-19ನೇ ಸಾಲಿನ ಹಂಗಾಮಿಗೆ ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಮೂರು ಲಕ್ಷ ಟನ್‌ ಕಬ್ಬು ಪೂರೈಸಿದ್ದಾರೆ. ಗುತ್ತಿಗೆದಾರ ರೈತರಿಂದ ತೆಗೆದುಕೊಂಡ ಕಬ್ಬಿಗೆ ನಾಲ್ಕೈದು ತಿಂಗಳಾದರೂ ಪೂರ್ಣ ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ರೈತರು ಹಾಗೂ ಕಾರ್ಖಾನೆ ಗುತ್ತಿಗೆದಾರರ ಸಭೆಯಲ್ಲಿ ಪ್ರತಿ ಟನ್‌ ಕಬ್ಬಿಗೆ 2613 ರೂ. ಪ್ರಥಮ ಕಂತಾಗಿ ರೈತರಿಗೆ ಕೊಡಬೇಕು. ಕಬ್ಬಿನ ಉಪಉತ್ಪನ್ನದ ಲೆಕ್ಕ ಹಾಕಿ ಎರಡನೇ ಕಂತು ಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗುತ್ತಿಗೆದಾರ ಕಬ್ಬು ಪೂರೈಸಿದ ರೈತರಿಗೆ ಟನ್‌ಗೆ 1700ರೂ. ಮಾತ್ರ ಕೊಟ್ಟಿದ್ದು, ಉಳಿದ ಹಣ ಕೊಡಲು ರೈತರನ್ನು ಸತಾಯಿಸುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಕಳೆದ ತಿಂಗಳು ಮುಖ್ಯಮಂತ್ರಿ ಸಮಕ್ಷಮ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಜೂನ್‌ 30ರೊಳಗೆ ಹಣ ಪಾವತಿ ಮಾಡದಿದ್ದರೆ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು, ಸಕ್ಕರೆ ಮಾರಿ ರೈತರಿಗೆ ಬಾಕಿ ಹಣ ಕೊಡಬೇಕು ಎಂದು ಆದೇಶಿಸಲಾಗಿತ್ತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯವರು ಸಕ್ಕರೆ ವಶಪಡಿಸಿಕೊಂಡಿದ್ದಾರೆ. ಆದರೆ, ಹಾವೇರಿ ಜಿಲ್ಲಾಧಿಕಾರಿ ಮಾತ್ರ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಸಂಶಯಕ್ಕೆಡೆ ಮಾಡಿದೆ ಎಂದರು.

ಸರ್ಕಾರಗಳು ಸಕ್ಕರೆ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌, ಸಹಾಯಧನ, ತೆರಿಗೆ ಮನ್ನಾ ಸೇರಿದಂತೆ ಹತ್ತು ಹಲವು ಸೌಲಭ್ಯ ನೀಡುತ್ತ ಬಂದಿದ್ದರೂ ಕಾರ್ಖಾನೆಗಳು ಮಾತ್ರ ರೈತರಿಗೆ ಕಬ್ಬಿನ ಹಣ ಸರಿಯಾಗಿ ಕೊಡದೆ ಇರುವುದು ಖಂಡನೀಯ ಎಂದರು.

Advertisement

ಸಂಘಟನೆ ಪ್ರಮುಖರಾದ ಸುರೇಶ ಸಜ್ಜನರ, ದೀಪಕ ಘಂಟಿಸಿದ್ದಪ್ಪನವರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next