ಬೆಂಗಳೂರು: ಐಟಿ/ಬಿಟಿ ಮತ್ತು ಸಂಬಂಧಿತ ಉದ್ಯಮ ಸಹಿತ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ “ಹತ್ತು ವರ್ಷ ರಾಜ್ಯದಲ್ಲಿ ನೆಲೆಸಿರಬೇಕೆಂಬ’ ನಿಯಮವನ್ನು 15 ವರ್ಷಕ್ಕೆ ಏರಿಕೆ ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಲು ಕಾರ್ಮಿಕ ಇಲಾಖೆ ಮುಂದಾಗಿದೆ.
ಈ ಸಂಬಂಧ ಆಂಧ್ರಪ್ರದೇಶದಲ್ಲಿರುವ ಕಾನೂನು ಮಾದರಿಯನ್ನು ಅಳವಡಿಕೆ ಮಾಡಿ ಕೊಳ್ಳಲು ಮುಂದಾಗಿದೆ. ಅಲ್ಲದೆ ಕಾನೂನು ತಜ್ಞರ ಸಲಹೆ ಪಡೆದು ಕರಡು ತಿದ್ದುಪಡಿಗೆ ಅಂತಿಮ ರೂಪ ನೀಡಿ ಸಚಿವ ಸಂಪುಟದ ಮುಂದಿಡಲು ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರು ಕನ್ನಡ ಪರ ಸಂಘ- ಸಂಸ್ಥೆಗಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಆಂಧ್ರ ಪ್ರದೇಶ ಮಾದರಿಯಂತೆ ನೂತನ ಕಾಯ್ದೆಯ ಕರಡನ್ನು ಕಾನೂನು ಇಲಾಖೆಯ ಸಹಯೋಗದೊಂದಿಗೆ ತಯಾರಿಸಿ ಕರಡು ಮಸೂದೆಯನ್ನು ಮುಂದಿನ ಸಭೆಯಲ್ಲಿ ಅಂತಿಮಗೊಳಿಸುವುದಾಗಿ, ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್
ಪಿ. ಅವರು ತಿಳಿಸಿದ್ದಾರೆ.
15 ವರ್ಷ ವಾಸವಾಗಿದ್ದಾರೆ ಎಂಬ ಬಗ್ಗೆ 10ನೇ ತರಗತಿ ಅಂಕಪಟ್ಟಿಯನ್ನು ಪರಿಗಣಿಸ ಬೇಕು. ಹಾಗೇ ಉದ್ಯೋಗಿಗಳ ಆಯ್ಕೆ ಮಾಡುವಾಗ, ಆಯ್ಕೆ ಸಮಿತಿಯಲ್ಲಿ ಕನ್ನಡ ಮಾತ ನಾಡಲು ಬರುವ ಒಬ್ಬ ಅಧಿಕಾರಿ ಆಯ್ಕೆ ಸಮಿತಿ ಯಲ್ಲಿರಬೇಕು ಎಂಬ ನಿಯಮ ಅಳವಡಿಸುವಂತೆ ಸಲಹೆ ನೀಡಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕನ್ನಡಿಗರು ಯಾರು?
ಕನ್ನಡಿಗರೆಂದರೆ ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಮತದಾನದ ಗುರುತಿನ ಚೀಟಿ ಪಡೆದಿರಬೇಕು. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಕಡ್ಡಾಯವಾಗಿ ಬರಬೇಕು ಎಂಬುವುದನ್ನು ಪರಿಗಣಿಸಲು ಸಭೆಯಲ್ಲಿ ಅನುಮೋದನೆ ದೊರೆಯಿತು.
ದೇವೇಶ ಸೂರಗುಪ್ಪ