Advertisement

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

11:22 AM Apr 27, 2024 | Team Udayavani |

ಪುರಾತನ ಗಾದೆಯೊಂದು ಪ್ರಸ್ತುತದ ಸತ್ಯ ಸಂಗತಿಯನ್ನು ತೆರೆದಿಡುತ್ತದೆ. ಎಲ್ಲರಿಗೂ ಕಾಲ ಬಂದೇ ಬರುವುದೆಂಬ ಭ್ರಮೆಯ ನಂಬಿಕೆ ನಮ್ಮ ಬದುಕು. ಆದರೆ ಕಾಲ ಯಾರ ಕೈಗೂ ಸಿಗದು, ಸಿಕ್ಕಾಗ ನಮ್ಮ ಸುಳಿವೇ ಇರದು. ಕಣ್ಣ ಮುಂದೆ ನಡೆದ ಕೆಲವೊಂದು ಘಟನೆಗಳು ಮನಸ್ಸಿನಾಳದಲ್ಲಿ ಬೇರೂರಿದಾಗ ಆಲೋಚನೆಗೆ ಬಂದ ಪದವೊಂದೇ ಭಗವಂತ ಹೌದು ಇದಕ್ಕೆಲ್ಲ ಕಾರಣ ಆ ದೇವನೇ, ಆತನ ಸೃಷ್ಟಿಯೇ… ದಾಳದ ಒಡೆಯನಾದ ಆ ಭಗವಂತ ಭೂಲೋಕದಲ್ಲಿ ನಮ್ಮನ್ನು ಬುಗುರಿಯಂತೆ ಆಡಿಸುತ್ತಿದ್ದಾನೇನೋ ಹೀಗೆ ನೊಂದ ಮನಕ್ಕೆ, ತಪ್ಪಿಲ್ಲದ ದೇವನನ್ನು ದೂಷಿಸುವ ತಪ್ಪು ಕಲ್ಪನೆಯನ್ನು ಬಿಟ್ಟರೆ ಇತರೆ ದಾರಿ ತೋಚದು.

Advertisement

ಒಬ್ಬರನ್ನು ಹೀಯಾಳಿಸಿ ನಗುವ ಮೊದಲು ನಿನ್ನ ಹಿಂದೆ ನೋಡಿಕೋ, ಹಾಗೂ ನೀನು ನಡೆದು ಬಂದ ದಾರಿಯನ್ನು ನೆನಪಿಸಿಕೋ. ಎಲ್ಲರ ಜೀವನದಲ್ಲಿಯೂ ಕಲ್ಲು ಮುಳ್ಳು ಸಹಜವೇ. ಅದನ್ನು ಮೆಟ್ಟಿ ನಡೆದರೆ ಮಾತ್ರ ದಡ ತಲುಪಲು ಸಾಧ್ಯ. ಮನುಜನಿಗೆ ಮನುಜನೇ ಶತ್ರು ಎಂಬುದು ಸತ್ಯ. ಆದರೆ ಕಷ್ಟದ ಅರಿವಿದ್ದವ, ಕಷ್ಟವನ್ನು ದಾಟಿ ಬಂದವ, ಆತ ನಡೆದು ಬಂದ ಹಾದಿಯನ್ನು ಮರೆತು, ಇತರರನ್ನು ಹೀಯಾಳಿಸುವುದು ಎಷ್ಟು ಸರಿ?

ಹೀಯಾಳಿಸಿ ನಗುವ ಜಗತ್ತು ಎಂದಿಗೂ ಮನುಜರ ಕುಲವೆನಿಸಿಕೊಳ್ಳದೆ, ಸತ್ತ ಆತ್ಮಗಳ ಅಲೆದಾಡುವ ಲೋಕವೆಂಬಂತೆ ಗೋಚರಿಸುವುದು. “ಹುಟ್ಟುವಾಗ ಬೆತ್ತಲೆ ಸಾಯುವಾಗ ಬೆತ್ತಲೆ ಇದರ ನಡುವೆ ಹಣ   ಹಣವೆಂದು ಯಾಕೆ ಹೊಡೆದಾಡುತೀ ಮನುಜ?” ಬಡವ ಶ್ರೀಮಂತನೆಂಬ ಭೇದಭಾವ ಏತಕೆ? ಇರುವುದೊಂದೇ ಬಾಳು, ಎಲ್ಲರೊಂದಿಗೆ ಒಂದಾಗಿ ಬಾಳಬಹುದಲ್ಲವೇ…

ಚುಚ್ಚು ನುಡಿಯ ಹುಚ್ಚು ಮನ ನಿನ್ನದಿರಬಹುದು. ಆದರೆ ಮುಗ್ಧ ಮನದ ಹೆಚ್ಚು ಕನಸನ್ನು ಅಲ್ಲಿಯೇ ಚಿವುಟದಿರು. ನೆನಪಿರಲಿ, ಹಣ ಹಣವೆಂದರೆ, ಸತ್ತಾಗ ಮಣ್ಣು ಮಾಡಲು ಬರುವುದು ಜನರೇ ಹೊರತು, ಆ ನಿನ್ನ ಹಣವಲ್ಲ. ಸತ್ತಾಗ ನಿನ್ನ ಮೇಲೆ ವಸ್ತ್ರವೇ ಉಳಿದಿರುವುದಿಲ್ಲ ಇನ್ನು ಹಣವಿರುವುದಿರುವುದೇ? ಜನರೊಂದಿಗೆ ಒಂದಾಗಿ, ಜನರ ಪ್ರೀತಿ ಗಳಿಸಲು ಮುಂದಾಗು. ಅದರ ಹೊರತು ಇದ್ದ ಜನರನ್ನು ನಿನ್ನ ಮಾತಿನಿಂದ ಕಳೆದುಕೊಳ್ಳದಿರು.

ಇಲ್ಲಿ ಯಾವುದು ಶಾಶ್ವತವಲ್ಲ, ಯಾವ ವ್ಯಕ್ತಿಯೂ ಶಾಶ್ವತವಲ್ಲವೆಂದ ಮೇಲೆ ನಿನ್ನ ಮುಂಗೋಪ ಏತಕೆ ಅಲ್ಲವೇ? “ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು”. ಮಾತಾಡುವ ಮೊದಲು ನೂರು ಬಾರಿ ಆಲೋಚಿಸು. ಆ ನಿನ್ನ ಮಾತಿನಿಂದ ಇತರರ ಮನಕ್ಕೆ ನೋವಾಗುವಂತಿದ್ದರೆ ನೀನು ಬದುಕಿದ್ದು ಸತ್ತಂತೆ. ನಾ ಹೇಳುವುದಿಷ್ಟೇ ನಿಮಗೆ ಒಬ್ಬರಿಗೆ ಒಳಿತು ಮಾಡಲಾಗದಿದ್ದರೂ ಪರವಾಗಿಲ್ಲ ದಯಮಾಡಿ ಕೆಡುಕು ಬಯಸದಿರಿ.

Advertisement

ಶ್ರೀಮಂತಿಕೆ ಎಂಬುದು ಕೇವಲ ನಿನ್ನ ಮನೆಯಲ್ಲಿ ಹಾಗೂ ತೋರ್ಪಡಿಕೆಗೆ ಮಾತ್ರವಲ್ಲ. ಯಾರು ತನ್ನ ಹೃದಯ ಶ್ರೀಮಂತಿಕೆಯನ್ನು ಹೊಂದಿರುತ್ತಾರೋ ಅವರು ನಿಜವಾದ ಶ್ರೀಮಂತರು. ಮೊಗದಲ್ಲಿ ನಗುವಿಲ್ಲ, ಮನದ ತುಂಬೆಲ್ಲ ಕಪಟ ತುಂಬಿದೆಯಲ್ಲಾ, ಇತರರಿಗೆ ಕೇಡು ಬಯಸುವ ಬುದ್ದಿ ನಿನ್ನದಲ್ಲವೇ, ಇನ್ನೇಕೆ ನಿನಗೆ ಶ್ರೀಮಂತಿಕೆ..?

ಬಡವರ ಮಕ್ಕಳೆಂದರೆ ಸಹನಾರೂಪಿಯಿದ್ದಂತೆ. ಅಂತಹವರಿಗೆ ಒಮ್ಮೆಲೇ ಶ್ರೀಮಂತಿಕೆ ಬಂದರೆ ಎಂದೂ ತನ್ನ ಗುಣವನ್ನು ಬಿಡಬಾರದು. ಅದನ್ನು ಮರೆತು ಎರಡು ಕೊಡು ಬಂದಂತೆ ವರ್ತಿಸಿದರೆ ಆ ದೇವನಿಗೂ ಆಶ್ಚರ್ಯವಾಗುವುದು! ನಾ ಇದೆಂತ ಕೋಡಂಗಿಗೆ ಒಳಿತು ಮಾಡಿದೆ ಎಂದು…

ಬದುಕು ಬಹಳ ಚಿಕ್ಕದು. ನೀ ಸಹಾಯ ಮೂರುತಿಯಾದರೆ ಕೈ ಮುಗಿಯುವರು. ಆದರೆ ನೀನು ಹೊಟ್ಟೆ ಕಿಚ್ಚಿನ ಕೋಳಿಯಾದರೆ ಕಲ್ಲುತೂರುವರು. ದೇವರು ನೀಡಿದ ವರವನ್ನು ವರವಾಗಿಯೇ ಬಳಸಿಕೋ, ಅದು ನಿನಗೆ ಶಾಪವಾಗದಂತೆ ನೋಡಿಕೋ. ಒಬ್ಬರಿಗೆ ಬೆರಳು ಮಾಡಿ ತೋರಿಸುವ ಮೊದಲು ತಿಳಿದಿರಲಿ, “ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕದಿರು, ನಿನ್ನ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿರುವುದನ್ನು ಮರೆಯದಿರು” .

ನಾ ಹೇಳುವುದಿಷ್ಟೇ ಸ್ನೇಹಿತರೇ, ಹಣ ಇಂದು ಇರಬಹುದು, ಇಲ್ಲದಿರಬಹುದು. ಆದರೆ ಮನುಷ್ಯತ್ವ ಹಾಗೂ ನಮ್ಮ ಜನರೆಂಬುದು ಶಾಶ್ವತ. ಸಾಧ್ಯವಾದರೆ ಒಬ್ಬರಿಗೆ ಆದರ್ಷವಾಗಿ ಬದುಕಬೇಕೇ ವಿನಹಃ ಇನ್ನೊಬ್ಬರ ಜೀವನದ ಕಳಪೆಯಾಗಬಾರದು. ನಾನು ಒಮ್ಮೆ ನಿಮ್ಮಲ್ಲಿ ದಯಮಾಡಿ ಬೇಡುವೆ, ಇಲ್ಲದ ಅಹಂಕಾರ ಬೇಡ, ಇತರ ನೋಯಿಸಬೇಡ ಬದುಕಿದ್ದು ಸತ್ತಂತೆ ವರ್ತಿಸಬೇಡ.

-ಕೀರ್ತನಾ ಒಕ್ಕಲಿಗ

ಬೆಂಬಳೂರು

Advertisement

Udayavani is now on Telegram. Click here to join our channel and stay updated with the latest news.

Next