Advertisement

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

03:52 PM May 04, 2024 | Team Udayavani |

ಅಹಂಕಾರ ಜೀವನದಿಂದ ವಿನಾಶದ ಹಾದಿ. ತ್ರೇತಾಯುಗದಲ್ಲಿ ಮಹಾಶಿವಭಕ್ತನಾದ ಲಂಕಾಧಿಪತಿ ರಾವಣ ತನ್ನ ಅಹಂಕಾರದ ಮತ್ತಿನಲ್ಲಿ ಲೋಕಮಾತೆ ಸೀತಾ ಮಾತೆಯನ್ನು ಅಪಹರಿಸಿದ ಕಾರಣ ವಿನಾಶದ ಹಾದಿ ತಲುಪಿದ ಎನ್ನುವುದು ಗೊತ್ತಿರುವ ಸಂಗತಿ.

Advertisement

ಈ ಸಂದರ್ಭದಲ್ಲಿ ಸ್ವಾಭಿಮಾನದ ಪ್ರಜ್ಞೆಯಿಂದ ಧರ್ಮದ ಉಳಿವಿಗಾಗಿ ಪ್ರಭು ಶ್ರೀ ರಾಮನು ಯುದ್ಧದಲ್ಲಿ ಜಯಿಸಿ ಸೀತಾ ಮಾತೆಯನ್ನು ಕರೆತಂದನು. ಒಂದು ವೇಳೆ ತನ್ನ ಭಕ್ತನಾದ ಮಹಾ ಪರಾಕ್ರಮಿ ಆಂಜನೇಯನಿಗೆ ಒಂದು ಆಜ್ಞೆ ಮಾಡಿದ್ದರೇ ಸಾಕು ಲಂಕಾನಗರವನ್ನು ಸುಟ್ಟ ಸಂದರ್ಭದಲ್ಲಿಯೇ ಸೀತಾಮಾತೆಯನ್ನು ಕರೆತರುತ್ತಿದ್ದ. ಆದರೆ ರಾವಣನ ಅಹಂಕಾರಕ್ಕೆ ಅಂತ್ಯ ಹೇಳುವ ಸಂದರ್ಭ ಬಂದ ಕಾರಣದಿಂದ ಯುದ್ಧವು ಅನಿವಾರ್ಯವಾಯಿತು. ಯುದ್ಧದಲ್ಲಿ ರಾವಣನ ಜತೆ ಅವನ ಅಹಂಕಾರವು ಸಹಿತ ಮಣ್ಣಾಯಿತು. ಶ್ರೀ ರಾಮನ ಸ್ವಾಭಿಮಾನದ ಯುದ್ಧವು ಜಯ ಸಾಧಿಸಿತು.

ಇನ್ನು ದ್ವಾಪರಯುಗದಲ್ಲಿ ಅಹಂಕಾರ, ವೈಷಮ್ಯ, ಸ್ವಾರ್ಥದ ಜೀವನ ಸಾಗಿಸಿದ ಕೌರವರು, ಸ್ವಾಭಿಮಾನ ಮತ್ತು ಧರ್ಮದ ರಕ್ಷಣೆಗೆ ನಿಂತ ಪ್ರಭು ಶ್ರೀ ಕೃಷ್ಣನ ಮುಂದಾಳತ್ವದಲ್ಲಿ ಪಾಂಡವರ ಕೈಯಿಂದ ಮಣ್ಣಾಗಿ ಹೋದರು.

ಇನ್ನೂ ಕಲಿಯುಗದಲ್ಲಿ ಮನುಷ್ಯ ಜೀವಿಯು ತನ್ನ ಅಹಂಕಾರ, ಸ್ವಾರ್ಥ, ಹಣದ ಮತ್ತಿನಲ್ಲಿ ಅನೇಕ ರೀತಿಯ ಕೆಟ್ಟ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾನೆ. ತನ್ನ ಸ್ವಾರ್ಥದ ಬದುಕಿಗಾಗಿ ಪ್ರಕೃತಿಯನ್ನು ವಿನಾಶ ಮಾಡುತ್ತಾ, ತನ್ನ ಜೀವನದಲ್ಲಿ ಭಾವನೆಗಳ ಅಸ್ತಿತ್ವವನ್ನೇ ಕಳೆದುಕೊಂಡು ಜೀವಿಸುತ್ತಿದ್ದಾನೆ. ಇದರಿಂದ ಸ್ವಲ್ಪ ದಿನಗಳ ಕಾಲ ವಿಜೃಂಭಣೆಯ ಜೀವನ ಸಾಗಿದರೂ ಸಹ ನೆಮ್ಮದಿಯ ಜೀವನ ಕಾಣಲು ಸಾಧ್ಯವಿಲ್ಲ. ಕೊನೆಗೆ ಒಂದು ದಿನ ಎಲ್ಲವೂ ಮಣ್ಣಾಗಿ ಹೋಗುವುದು ಎಂಬ ಕಟು ಸತ್ಯವನ್ನು ಮರೆತು ವರ್ತಿಸುತ್ತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಮನುಷ್ಯ ರಾಜಕೀಯ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ತನ್ನ ಮನುಷ್ಯತ್ವವನ್ನು ಮರೆತು ಕೇವಲ ಹಣದ ಆತಿಯಾಸೆಯಿಂದ ಹೀನ ಕೃತ್ಯಗಳಿಗೆ ಕಾರಣಕರ್ತನಾಗಿದ್ದಾನೆ. ರಾಜಕೀಯದಲ್ಲಿ ನಿಸ್ವಾರ್ಥ ಸೇವೆಯಿಲ್ಲ, ಶಿಕ್ಷಣದಲ್ಲಿ ಪ್ರತಿಭಾವಂತರಿಗೆ ಬೆಲೆಯಿಲ್ಲ, ಆರೋಗ್ಯದಲ್ಲಿ ಬಡವರಿಗೆ ನಿಸ್ವಾರ್ಥ ಸೇವೆಯಿಲ್ಲ ಹೀಗೆ ಪ್ರತಿಯೊಂದರಲ್ಲೂ ಉನ್ನತ ಅಧಿಕಾರಿಗಳ ಹೀನ ಕೃತ್ಯಗಳಿಗೆ ಮುಗ್ಧ ಬಡಜೀವಗಳು ಬಲಿಯಾಗುತ್ತಿವೆ.

Advertisement

ಆದ ಕಾರಣ ಜೀವನದಲ್ಲಿ ಪ್ರತಿ ಕ್ಷಣವೂ ಸ್ವಾಭಿಮಾನ, ನಿಸ್ವಾರ್ಥ ಬದುಕು, ಪ್ರೀತಿ, ಸ್ನೇಹ, ಸರ್ವರಲ್ಲಿಯೂ ಬಾಂಧವ್ಯದಿಂದ ಬಾಳಿದಾಗ ನೆಮ್ಮದಿ ಮತ್ತು ಯಶಸ್ಸು ಕಾಣಲು ಸಾಧ್ಯ. ಅಹಂಕಾರ ಅಳಿಸಿ, ಸ್ವಾಭಿಮಾನ ಉಳಿಸುವುದು ಆವಶ್ಯಕ.

- ಮಧು ಮೂಲಿಮನಿ

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next